ಬೆಂಗಳೂರು ನಗರ

ದೇಣಿಗೆ ಮೇಲೆ ಅಮರ ಪ್ರೇಮ

ಸಾರಿಗೆ ಇಲಾಖೆ ಆಯುಕ್ತರು ಸದ್ದಿಲ್ಲದೆ ಖಾಸಗಿ ಸಂಸ್ಥೆಯೊಂದಕ್ಕೆ ಅಕ್ರಮವಾಗಿ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.

Published On :

-ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಸಾರಿಗೆ ಇಲಾಖೆ ಆಯುಕ್ತರು ಸದ್ದಿಲ್ಲದೆ ಖಾಸಗಿ ಸಂಸ್ಥೆಯೊಂದಕ್ಕೆ ಅಕ್ರಮವಾಗಿ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.
ಸಾರಿಗೆ ಆಯುಕ್ತ ಅಮರ್ ನಾರಾಯಣ್, ಸಾರಿಗೆ ಸಚಿವರಿಗೇ ತಿಳಿಯದಂತೆ ಎಫ್‌ಕೆಸಿಸಿಐ ಸಂಸ್ಥೆಗೆ ನೇರವಾಗಿ 25 ಲಕ್ಷ ದಾನ ಮಾಡಿದ್ದಾರೆ. ಆಯುಕ್ತರು ಎಫ್‌ಕೆಸಿಸಿಐನ 'ಗ್ರೀನ್ ಸುಮಿತ್‌' ಎಂಬ ಹೆಸರಿನ ಕಾರ್ಯಕ್ರಮ ನೆಪದಲ್ಲಿ ದೇಣಿಗೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇಲಾಖೆಗೆ ಯಾವ ಅನುಕೂಲವಾಗದಿದ್ದರೂ ಆಯುಕ್ತರಿಗೆ ಎಫ್‌ಕೆಸಿಸಿಐನಿಂದ ಪ್ರಶಸ್ತಿ, ಅಭಿನಂದನಾ ಕಾಣಿಕೆ ಲಭಿಸಿವೆ. ಹೀಗಾಗಿ ಕೊಟ್ಟ ದೇಣಿಗೆ ಪ್ರಶಸ್ತಿಗಾಗಿಯೋ, ಜನರ ಉಪಯೋಗಕ್ಕಾಗಿಯೋ ಎಂಬ ಅನುಮಾನ ಕಾಡಲಾರಂಭಿಸಿವೆ.
ಕೇಂದ್ರದ ಆದೇಶದ ಪ್ರಕಾರ, ಸಾರಿಗೆ ಇಲಾಖೆ ರಸ್ತೆ ಸುರಕ್ಷೆ ಮತ್ತು ಮಾಲಿನ್ಯ ನಿಯಂತ್ರಣ ಕಾರ್ಯಕ್ರಮಗಳಿಗಾಗಿ ಸೇವಾ ಸಂಸ್ಥೆಗಳಿಗೆ ನೆರವು ನೀಡಬಹುದು. ಆದರೆ, ಆಯುಕ್ತರು ಎಫ್‌ಕೆಸಿಸಿಐ ನಡೆಸಿದ ಇಂಧನ ಕೊರತೆ ಕುರಿತ ಸಮ್ಮೇಳನಕ್ಕಾಗಿ ದೇಣಿಗೆ ನೀಡಿದ್ದಾರೆ. ಅದರಲ್ಲೂ ಇಲಾಖೆ ಇದೇ ಮೊದಲ ಬಾರಿಗೆ ಆದಾಯ ಸಂಗ್ರಹದಲ್ಲಿ ಶೇ.3 ಕುಸಿತ ಕಂಡಿರುವ ಕಾಲದಲ್ಲೇ ಆಯುಕ್ತರು ದೇಣಿಗೆ ನೀಡಿ ಔದಾರ್ಯ ಮೆರೆದಿದ್ದಾರೆ. ಇದು ಇಲಾಖೆ ಇತಿಹಾಸದಲ್ಲೇ ಪ್ರಥಮ ಹಾಗೂ ಅಕ್ರಮ ಎನ್ನುತ್ತಾರೆ ಅಧಿಕಾರಿಗಳು.
ಏನಿದು ದೇಣಿಗೆ ಪುರಾಣ?: ಮಾಹಿತಿ ಹಕ್ಕು ಕಾಯ್ದೆಯಡಿ 'ಕನ್ನಡಪ್ರಭ' ಪಡೆದಿರುವ ಮಾಹಿತಿ ಪ್ರಕಾರ, ಎಫ್‌ಕೆಸಿಸಿಐ (ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ) ಜೂನ್‌ನಲ್ಲಿ ವಿದ್ಯುತ್ ಕೊರತೆ ಮತ್ತು ಇಂಧನ ಕೊರತೆ ಸಮಸ್ಯೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿತ್ತು. ಅಲ್ಲಿ ಹೊಸದಾಗಿ ಕೈಗಾರಿಕೆ ತೆರೆಯಲು ಯುವಜನತೆಗೆ ಉತ್ತೇಜನ ನೀಡುವ ಕಾರ್ಯಕ್ರಮವಿತ್ತು. ಅದಕ್ಕಾಗಿ ಎಫ್‌ಕೆಸಿಸಿಐಗೆ 25ಲಕ್ಷ ನೀಡಲು ಇಲಾಖೆ ಆಯುಕ್ತರು ಆಸಕ್ತಿ ತೋರಿಸಿದರು. ಈ ಬಗ್ಗೆ ಪ್ರಸ್ತಾಪ ಸಲ್ಲಿಸುತ್ತಿದ್ದಂತೆ ಅಂದಿನ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಚಾರಿ ಅಸಮಾಧಾನ ವ್ಯಕ್ತಪಡಿಸಿದರು. ಆನಂತರವೂ ಆಯುಕ್ತರು ದೇಣಿಗೆ ನೀಡುವ ಪ್ರಸ್ತಾಪಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ.
ಸಮ್ಮೇಳನದಲ್ಲಿ ಇಲಾಖೆ ಪಾತ್ರ: ಎಫ್‌ಕೆಸಿಸಿಐ ನಡೆಸಿದ ಗ್ರೀನ್ ಸಮ್ಮೀತ್ ಎಂಬ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಒಂದು ಪ್ರದರ್ಶನ ಮಳಿಗೆ ಸ್ಥಾಪಿಸಿತ್ತು. ಅಂಲಕೃತವಾಗಿದ್ದ ಆ ಮಳಿಗೆಯಲ್ಲಿ ಸಾರಿಗೆ ಸಚಿವರು, ಇಲಾಖೆ ಆಯುಕ್ತರ ಬೃಹತ್ ಚಿತ್ರಗಳಿದ್ದವು. ಇಲಾಖೆಯ ಕೆಲ ಘೋಷಣೆಗಳು,ಸಾಧನೆಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಮೂಲಗಳ ಪ್ರಕಾರ ಈ ಮಳಿಗೆಗೆ ಬೇಕಾದ 4.5 ಲಕ್ಷ ವೆಚ್ಚವನ್ನು ಪ್ರಾದೇಶಿಕ ಸಾರಿಗೆ ಆಯುಕ್ತರಿಂದಲೇ ಹೊಂದಿಸಲಾಯಿತು. ಆದರೆ, ಇಲಾಖೆ ನೀಡಿರುವ ಮಾಹಿತಿಯಲ್ಲಿ ವಿಚಾರ ಸಂಕಿರಣ ನಡೆಸುವುದಕ್ಕಾಗಿ ಎಫ್‌ಕೆಸಿಸಿಐಗೆ 25 ಲಕ್ಷ ದೇಣಿಗೆ ನೀಡಲಾಗಿದೆ ಎಂಬ ವಿವರವಿದೆ.

ಸಚಿವರಿಗೆ ಗೊತ್ತೇ ಇಲ್ಲ
ಅಚ್ಚರಿ ಎಂದರೆ ಎಫ್‌ಕೆಸಿಸಿಐಗೆ ಹಣ ನೀಡಿರುವ ವಿಚಾರ ಸಾರಿಗೆ ಸಚಿವರಿಗೆ ಗೊತ್ತೇ ಇರಲಿಲ್ಲ. ಏಕೆಂದರೆ, ದೇಣಿಗೆ ನೀಡುವ ಬಗ್ಗೆ ಸಚಿವರಿಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹಣ ನೀಡುವುದಕ್ಕೆ ಅವರಿಂದ ಒಪ್ಪಿಗೆಯನ್ನೂ ಪಡೆದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಇಲಾಖೆಯಿಂದ 25ಲಕ್ಷಕ್ಕೆ ದೇಣಿಗೆ ನೀಡುವಂಥ ಪ್ರಸ್ತಾಪಗಳನ್ನು ಸಚಿವರ ಗಮನಕ್ಕೂ ತಂದಿಲ್ಲ. ಹಣ ನೀಡಿದ್ದಕ್ಕೆ ಸಾರ್ವಜನಿಕರಿಗೆ ಆಗಿರುವ ಅನುಕೂಲವೇನು ಎನ್ನುವ ಬಗ್ಗೆ ಕೇಳಿದ ಮಾಹಿತಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಿಲ್ಲ.

ಎಫ್‌ಕೆಸಿಸಿಐ ಏರ್ಪಡಿಸಿದ ಗ್ರೀನ್ ಸಮ್ಮೇಳನಕ್ಕಾಗಿ ಸಾರಿಗೆ ಇಲಾಖೆ 25ಲಕ್ಷ ದೇಣಿಗೆ ನೀಡಿತ್ತು. ಇದರಿಂದ ಯುನ ಜನತೆಗೆ ಉಪಯೋಗವಾಗಿದೆ. ಇದಕ್ಕೆ ಆಸಕ್ತಿ ತೋರಿಸಿದ ಸಾರಿಗೆ ಆಯುಕ್ತರನ್ನು ಸರ್ಕಾರ ಮತ್ತು ಎಫ್‌ಕೆಸಿಸಿಐ ಪ್ರಶಸ್ತಿ ನೀಡಿ ಅಭಿನಂದಿಸಿದೆ.
-ಸಂಪತ್‌ರಾಮನ್, ಎಫ್‌ಕೆಸಿಸಿಐ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.