ಬೆಂಗಳೂರು ನಗರ

ಕಾರು ಡಿಕ್ಕಿ; ಬೈಕ್ ಸವಾರ ಸಾವು

Published On :

ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಹೊಸೂರು ರಸ್ತೆ ನೈಸ್ ರಸ್ತೆ ಜಂಕ್ಷನ್ನಲ್ಲಿ ಸಂಭವಿಸಿದೆ. ಸಿಮೆಂಟ್ ಮಳಿಗೆಯೊಂದರ ಉದ್ಯೋಗಿ ರಾಮಚಂದ್ರ (29) ಮೃತ ದುರ್ದೈವಿ.  ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ರಾಮಚಂದ್ರ ತಮ್ಮ ಮನೆಗೆ ಮರಳುತ್ತಿದ್ದರು. ನೈಸ್ ರಸ್ತೆ ಜಂಕ್ಷನ್ ಬಳಿ ವೇಗವಾಗಿ ಬಂದ ಕಾರು ರಾಮಚಂದ್ರ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿದ್ದ ರಾಮಚಂದ್ರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ರಾಮಚಂದ್ರ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.

ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು
ಬಿಎಂಟಿಸಿ ಬಸ್ ಹಿಂದಿಕ್ಕಲು ಹೋಗಿ ಅದೇ ಬಸ್ನ ಚಕ್ರಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಸುಬ್ರಮಣ್ಯಪುರ ಚಿಕ್ಕಲಸಂದ್ರ ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ಉತ್ತರಹಳ್ಳಿ ರಾಮಾಂಜನೇಯ ಬಡಾವಣೆ ನಿವಾಸಿ ಈಶ್ವರ್ (22) ಮೃತ ದುರ್ದೈವಿ. ಗಾರೆ ಕೆಲಸ ಮಾಡುತ್ತಿದ್ದ ಈಶ್ವರ್ ಬುಧವಾರ ಬೆಳಿಗ್ಗೆ ಚಿಕ್ಕಲಸಂದ್ರ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ. ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್ ಹಿಂದಿಕ್ಕುವ ಭರದಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದಾನೆ. ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದ್ದಾನೆ. ಹಿಂದೆ ಬರುತ್ತಿದ್ದ ಬಿಎಂಟಿಸಿ ಬಸ್ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.  ಈ ಸಂಬಂಧ ಕುಮಾರಸ್ವಾಮಿ ಬಡಾವಣೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ನಿಂದ ಬಿದ್ದು ಮಹಿಳೆ ಸಾವು

ದ್ವಿಚಕ್ರ ವಾಹನದಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಾಣಸವಾಡಿ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದೆ. ಬಾಬುಸಾಬ್ಪಾಳ್ಯ ಬ್ಯಾಂಕ್ ಕಾಲೋನಿ ನಿವಾಸಿ ಸರಸ್ವತಿ (53) ಮೃತ ದುರ್ದೈವಿ. ಸರಸ್ವತಿ ಅವರು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಪತಿ ಗಣೇಶ್ ಅವರೊಂದಿಗೆ ಹೋಂಡಾ ಆಕ್ಟೀವಾ ವಾಹನದಲ್ಲಿ ಮಂಗಳವಾರ ಸಂಜೆ ರಾತ್ರಿ 8 ಗಂಟೆ ಸುಮಾರಿಗೆ ಬಾಣಸವಾಡಿ ಸರ್ವೀಸ್ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ತಿರುವಿನಲ್ಲಿ ಕಾರೊಂದು ಗಣೇಶ್ ಅವರು ಚಲಿಸುತ್ತಿದ್ದ ವಾಹನದ ಕಡೆ ಏಕಾಏಕಿ ತಿರುವು ತೆಗೆದುಕೊಂಡಿದೆ. ಇದರಿಂದ ಗಾಬರಿಗೊಂಡ ಗಣೇಶ್ ಅವರು ಗೊಂದಲಕ್ಕೊಳಗಾಗಿ ವಾಹನದಿಂದ ಬಿದ್ದಿದ್ದಾರೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸರಸ್ವತಿ ಅವರು ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಇಬ್ಬರನ್ನು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.