ಬೆಂಗಳೂರು ನಗರ

ಅನಗತ್ಯ ಕಾಮಗಾರಿಗಳಿಗೆ ಮತ್ತೆ ಜೀವ

Published On :

ಕ.ಪ್ರ. ವಾರ್ತೆ, ಬೆಂಗಳೂರು, ನ. 20-
ಬಿಬಿಎಂಪಿಯಲ್ಲಿ ತಡೆಹಿಡಿಯಲಾಗಿದ್ದ ಅನಗತ್ಯ ಕಾಮಗಾರಿಗಳಿಗೆ ಮತ್ತೆ ಜೀವ ಬಂದಿದೆ. ಆದರೆ, ಅವುಗಳನ್ನು ಮತ್ತೆ ಆರಂಭಿಸಬೇಕಾದರೆ ರಸ್ತೆ ಇತಿಹಾಸ ಜಾರಿಗೊಳಿಸುವುದು ಕಡ್ಡಾಯ.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ರದ್ದಾಗಿದ್ದ ಕಾಮಗಾರಿಗಳನ್ನು ಆರಂಭಿಸಲು ವಿಧಿಸಿರುವ ಷರತ್ತು ಇದು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ದಿಢೀರ್ ಪ್ರಗತಿಪರಿಶೀಲನಾ ಸಭೆ ನಡೆಸಿದ ಅವರು, ವಿವಿಧ ವಿಭಾಗಗಳಲ್ಲಿ ಆಗಬೇಕಿರುವ ಕೆಲಸಗಳ ವಿವರ ಪಡೆದರು. ಸರ್ಕಾರಿ ರಜೆ ನಡುವೆಯೂ ದಿನವಿಡೀ ಅಧಿಕಾರಿಗಳ ಸಭೆ ನಡೆಸಿ ಕುಂಟುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಸಿದ್ದಯ್ಯ ಆಯುಕ್ತರಾಗಿದ್ದಾಗ 500ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಅನಗತ್ಯ ಎಂದು ರದ್ದುಗೊಳಿಸಿದ್ದ ಕಾಮಗಾರಿಗಳ ಬಗ್ಗೆ ಪ್ರಮುಖವಾಗಿ ಚರ್ಚೆ ಆಯಿತು. ಈ ಕಾಮಗಾರಿಗಳನ್ನು ಮತ್ತೆ ಆರಂಭಿಸಬೇಕಾದರೆ ವಾರ್ಡ್ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯ ರಸ್ತೆ ಇತಿಹಾಸವನ್ನು ಅಪ್‌ಲೋಡ್ ಮಾಡಬೇಕು. ಇದನ್ನಾಧರಿಸಿ ಆ ರಸ್ತೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಇಲ್ಲವಾದರೆ ಆ ಕಾಮಗಾರಿಗಳನ್ನು ಮುಂದುವರಿಸಲಾಗದು ಎಂದರು. ಸದ್ಯ ಪ್ರಗತಿಯಲ್ಲಿರುವ ಬಿಬಿಎಂಪಿ ಕಾಮಗಾರಿಗಳನ್ನು ಟಿವಿಸಿಸಿ (ತಾಂತ್ರಿಕ ವಿಚಕ್ಷಣ ಸಮಿತಿ)ಯಿಂದ ಕಡ್ಡಾಯ ಪರಿಶೀಲನೆ ನಡೆಸಬೇಕು. ಸಮಿತಿ ವರದಿ ನೀಡಿದ ನಂತರವಷ್ಟೇ ಕಾಮಗಾರಿಗಳನ್ನು ಮುಂದುವರಿಸುವ ನಿರ್ಧರಿಸಬೇಕು ಎಂದು ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ವಿಳಂಬ ಧೋರಣೆ: ರಸ್ತೆ ಇತಿಹಾಸವನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳು ತೋರಿಸುತ್ತಿರುವ ವಿಳಂಬ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ವಿಚಾರದಲ್ಲಿ ವಾರ್ಡ್ ಎಂಜಿನಿಯರ್ ಮತ್ತು ಮುಖ್ಯ ಎಂಜಿನಿಯರ್ ಪರಸ್ಪರ ಜವಾಬ್ದಾರಿಯಿಂದ ಜಾರಿಗೊಳ್ಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಕಸ ವಿಲೇವಾರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಚಿವರು, ಹೊಸ ಗುತ್ತಿಗೆದಾರರು ಹಿಂದಿನ ಗುತ್ತಿಗೆದಾರರಿಗಿಂತಲೂ ಕೆಟ್ಟದಾಗಿ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಇನ್ನೂ ಏಕೆ ಕ್ರಮಕೈಗೊಂಡಿಲ್ಲ. ಕನಿಷ್ಠ ನೋಟಿಸ್ ನೀಡುವ ಪ್ರಯತ್ನವನ್ನೂ ಮಾಡಿಲ್ಲ ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕಸ ವಿಲೇವಾರಿ ವಿಚಾರದಲ್ಲಿ ವಲಯ ಜಂಟಿ ಆಯುಕ್ತರು ನಿರ್ಲಕ್ಷ್ಯ ವಹಿಸುತ್ತಿದ್ದು, ಈ ಬಗ್ಗೆ ಸದ್ಯದಲ್ಲೇ ನಡೆಯುವ ಮುಖ್ಯಮಂತ್ರಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದೂ ಎಚ್ಚರಿಕೆ ನೀಡಿದರು. ನಗರದಲ್ಲಿ ರಸ್ತೆಗಳಿಗೆ ಹೊಸದಾಗಿ ಡಾಂಬರ್ ಹಾಕಲು ಸರ್ಕಾರ 525ಕೋಟಿ ಅನುದಾನ ಒದಗಿಸಿರುವ ಯೋಜನೆಯಲ್ಲಿ ತ್ವರಿತವಾಗಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು. ಮೇಯರ್ ಕಟ್ಟೆ ಸತ್ಯನಾರಾಯಣ, ಉಪ ಮೇಯರ್ ಇಂದಿರಾ, ಆಯುಕ್ತ ಎಂ.ಲಕ್ಷ್ಮೀನಾರಾಯಣ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.