ಕಟ್ ಆಗುತ್ತಾ ಕೇಬಲ್?
ಕೇಬಲ್ ಟಿವಿ ಗ್ರಾಹಕರ ಗೊಂದಲ ನಿವಾರಣೆಯಾಗುವ ಮುನ್ನವೇ ಕೇಬಲ್ ಸಂಪರ್ಕ ಕಡಿತಗೊಳ್ಳುವ ಸಮಯ ಬಂದೊದಗಿದೆ.
ಸೆಟ್ಟಾಪ್ ಬಾಕ್ಸ್ ಬಗೆಗಿನ ವಿವರ ಅರ್ಥವೇ ಆಗಿಲ್ಲ
ಬೆಂಗಳೂರು: ಕೇಬಲ್ ಟಿವಿ ಗ್ರಾಹಕರ ಗೊಂದಲ ನಿವಾರಣೆಯಾಗುವ ಮುನ್ನವೇ ಕೇಬಲ್ ಸಂಪರ್ಕ ಕಡಿತಗೊಳ್ಳುವ ಸಮಯ ಬಂದೊದಗಿದೆ.
ಸೆಟ್ ಟಾಪ್ ಬಾಕ್ಸ್ ಹೆಸರಿನಲ್ಲಿ ಸಮಸ್ಯೆಗಳನ್ನು ನಿವಾರಿಸುತ್ತಿದ್ದಾರೋ, ಹೊಸ ಸಮಸ್ಯೆಗಳನ್ನು ತಂದಿಡುತ್ತಿದ್ದಾರೋ ಎನ್ನುವುದು ಜನರಿಗೆ ಅರ್ಥವಾಗದ ಪ್ರಶ್ನೆ.
ತಮ್ಮ ನೆಚ್ಚಿನ ಚಾನಲ್ಗಾಗಿ ಏನು ಮಾಡುವುದು ಎಂಬ ಪೂರ್ಣ ವಿವರಗಳು ಅರ್ಥವಾಗುವ ಮುನ್ನವೇ ಕೆಬಲ್ ಕಟ್ ಆಗಿದೆ. ಕೇವಲ ಗ್ರಾಹಕರಿಗೆ ಮಾತ್ರವಲ್ಲ, ಕೇಬಲ್ ಟಿವಿ ಆಪರೇಟರ್ಗಳಿಗೂ ಗೊಂದಲ ಪರಿಹಾರವಾಗುವ ಮುನ್ನವೇ ಕೇಂದ್ರ ಸರ್ಕಾರದ ಗಡುವು ಪೂರ್ಣಗೊಂಡಿದೆ.
ಈ ಕೊನೆಯ ದಿನಾಂಕದ ಅವಧಿ ವಿಸ್ತಾರಗೊಂಡು ಪೂರ್ಣ ಮಾಹಿತಿ ನೀಡುವಂತೆ ಕೋರಿ ಪ್ರಕರಣ ಉಚ್ಛನ್ಯಾಯಾಲಯದ ಮೆಟ್ಟಿಲೇರಿದೆ.
ಕೇಬಲ್ ಕನೆಕ್ಷನ್ಗೆ ನೂರೆಂಟು ವಿಘ್ನ. ಮೊದಲು ಕೇಬಲ್ ಟಿವಿಯ ಗುಣಮಟ್ಟ ಉತ್ತಮವಾಗಿರಲಿಲ್ಲ. ಈ ಸಮಸ್ಯೆ ಬಗೆಹರಿಸಲು ಡಿಜಿಟಲೀಕರಣ ಗೊಳಿಸುವ ಹೊಸ ಕ್ರಮವನ್ನು ಪರಿಚಯಿಸಲಾಯಿತು.ಆದರೆ ಇದು ಜಾರಿಯಾಗುವ ಮುನ್ನವೇ ಮತ್ತೆ ಸಮಸ್ಯೆಗಳ ಸರಮಾಲೆ. ಸೆಟ್ ಟಾಪ್ ಬಾಕ್ಸ್ನ್ನು ಸೆಟ್ ಮಾಡಿಕೊಳ್ಳಲು ಆದೇಶಿಸಿದ ಸರ್ಕಾರ ಇದನ್ನು ಪಡೆಯುವ, ಈ ಕುರಿತು ಇರುವ ಹಲವು ಗೊಂದಲಗಳಿಗೆ ಉತ್ತರ ದೊರೆಯುವ ಮುನ್ನವೇ ಅಂತಿಮ ಗಡುವು ನಿರ್ಧರಿಸಿಬಿಟ್ಟಿದೆ.
ಸಮಸ್ಯೆಗಳ ಸಾಲು: ರಾಜ್ಯದ ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ದೇಶದ 38 ನಗರಗಳಲ್ಲಿ ಸೆಟ್ ಟಾಪ್ ಬಾಕ್ಸ್ ಅಳವಡಿಕೆಯಾಗಬೇಕು. ನಗರದಲ್ಲಿ 26 ಲಕ್ಷ ಕೇಬಲ್ ಟಿವಿ ಗ್ರಾಹಕರಿದ್ದಾರೆ. ಅವರಲ್ಲಿ ಶೇ.20 ರಷ್ಟು ಗ್ರಾಹಕರೂ ಇದನ್ನು ಈ ವರೆಗೆ ಅಳವಡಿಸಿಕೊಂಡಿಲ್ಲ.
ಈವರೆಗೂ ಸೆಟ್ಟಾಪ್ ಬಾಕ್ಸ್ ನಿರ್ದಿಷ್ಟ ಬೆಲೆ ನಿಗದಿಯಾಗಿಲ್ಲ. ಪ್ರತಿ ಕಂಪನಿಯೂ ಬೇರೆ ಬೇರೆ ಬೆಲೆಯನ್ನೇ ನಿಗದಿಪಡಿಸಿದೆ. ಈಗಾಗಲೇ ನಕಲಿ ಬಾಕ್ಸ್ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ಇದರ ಗುಣಮಟ್ಟ ಹಾಗೂ ಬಾಳಿಕೆಯ ಕುರಿತು ನಿಖರವಾದ ಮಾಹಿತಿಯೇ ಇಲ್ಲ. ಇದನ್ನು ಅಳವಡಿಸಿಕೊಳ್ಳುವುದು ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಇನ್ನೂ ಗ್ರಾಹಕರಲ್ಲಿದೆ.
ಇದನ್ನು ಅಳವಡಿಸಿಕೊಂಡು ತಮ್ಮ ಆಯ್ಕೆಯ ಚಾನಲ್ ಪಡೆಯುವುದು ಹೇಗೆ? ಈಗ ಕೆಲವು ನಿರ್ದಿಷ್ಟ ಅವಧಿಯವರೆಗೆ ಉಚಿತವಾಗಿ ಪ್ರಸಾರವಾಗುವ ಚಾನಲ್ಗಳು ತಮ್ಮ ಆಫರ್ ಮುಗಿಯುತ್ತಿದ್ದಂತೆ ಎಷ್ಟು ಹಣ ಪಾವತಿಸಿ ಚಾನಲ್ಗಳನ್ನು ಪಡೆಯಬೇಕು ಎಂಬ ಕುರಿತು ಗ್ರಾಹಕರಿಗೆ ವಿವರಣೆ ಇಲ್ಲ.
ಸೆಟ್ ಟಾಪ್ ಬಾಕ್ಸ್ ಕೇವಲ ಗ್ರಾಹಕರಿಗೆ ಮಾತ್ರವಲ್ಲ ಕೇಬಲ್ ಆಪರೇಟರ್ಗಳಿಗೂ ಬಗೆಹರಿಯದ ಸಮಸ್ಯೆಯಾಗಿದೆ. ಇದನ್ನು ಮಾಲೀಕತ್ವ, ಲೀಸ್ ವಿಧಾನಗಳಲ್ಲಿ ಖರೀದಿಸಿ ಗ್ರಾಹಕರಿಗೆ ನೀಡುವ ಆಪರೇಟರ್ಗಳಿಗೆ ಇದರ ಅಳವಡಿಕೆ ಹಾಗೂ ಕಾರ್ಯ ವೈಖರಿ ಕುರಿತು ಮಾಹಿತಿ ನೀಡಿಲ್ಲ, ಜೊತೆಗೆ ದಿನಕ್ಕೊಂದು ಕಂಪನಿಗಳು ಹೊಸ ಸೆಟ್ ಟಾಪ್ ಬಾಕ್ಸ್ನ್ನು ಪರಿಚಯಿಸುತ್ತಿದೆ.
ಇದು ಎಷ್ಟು ಬಾಕ್ಸ್ಗಳನ್ನು ಉತ್ಪಾದಿಸಿದೆ? ಪೂರೈಕೆ ಎಷ್ಟಿದೆ? ಗುಣಮಟ್ಟದಲ್ಲಿ ಯಾವ ರೀತಿಯ ವ್ಯತ್ಯಾಸವಿದೆ. ಒಂದು ಕಂಪನಿಯ ಬಾಕ್ಸ್ಗಿಂತ ಇನ್ನೊಂದು ಹೇಗೆ ಭಿನ್ನ ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ. ಗ್ರಾಹಕರು ತಮ್ಮ ಗೊಂದಲ ನಿವಾರಣೆಗೆ ಆಪರೇಟರ್ಗಳನ್ನು ಕೇಳಿದರೆ ಅವರಿಗೂ ಇದು ಬಗೆಹರಿಯದ ಸಮಸ್ಯೆ. ತುಸು ಪರೀಕ್ಷಿಸಿ ಬಗೆಹರಿಸಿಕೊಳ್ಳಲು ಸಮಯವೇ ಇಲ್ಲದಂತೆ ಅಂತಿಮ ದಿನಾಂಕ ಪೂರ್ಣಗೊಂಡು ಕೇಬಲ್ ಕನೆಕ್ಷನ್ ಸ್ಥಗಿತಗೊಂಡಿದೆ.
ಕೊನೆಪಕ್ಷ ಆಪರೇಟರ್ಗಳಿಗಾದರೂ ಅವರ ಗೊಂದಲ ನಿವಾರಣೆ ಆಗಬೇಕು. ಸೆಟ್ ಟಾಪ್ ಬಾಕ್ಸ್ ಕುರಿತು ಪೂರ್ಣ ಮಾಹಿತಿ ಲಭ್ಯವಾಗಬೇಕು. ಅದಕ್ಕೂ ಮೊದಲೇ ಹೀಗೆ ಏಕಾಏಕಿ ಅಂತಿಮ ಗಡುವು ನಿರ್ಧರಿಸುವುದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗುತ್ತದೆ. ಉತ್ತಮ ಗುಣಮಟ್ಟ ನೀಡುವ ಉದ್ದೇಶದಿಂದ ಕೈಗೊಂಡ ನಿರ್ಣಯದಲ್ಲಿಯೂ ಗುಣಮಟ್ಟವೇ ಇಲ್ಲದಂತಾದರೆ, ಕೇಬಲ್ ಟಿವಿಯ ಮೇಲೆ ಜನರು ಭರವಸೆ ಕಳೆದುಕೊಳ್ಳುವ ದಿನ ದೂರವಿಲ್ಲ.
ಚುನಾವಣಾ ಆಯೋಗದ ಕಣ್ಣು
ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಸೆಟ್ ಟಾಪ್ ಬಾಕ್ಸ್ ಹಂಚಿಕೆ ನಡೆಯುತ್ತಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಸೆಟ್ ಟಾಪ್ ಬಾಕ್ಸ್ನ್ನು ಏಪ್ರಿಲ್ 1ರೊಳಗೆ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಈಗ ಎಲ್ಲ ಪಕ್ಷಗಳ ಮುಖಂಡರಿಗೂ ಮತದಾರರ ಓಲೈಕೆಗೆ ಸೆಟ್ ಟಾಪ್ ಬಾಕ್ಸ್ ಒಂದು ಪ್ರಧಾನ ಅಸ್ತ್ರವಾಗಿ ಪರಿಣಮಿಸಿದೆ. ಇದನ್ನು ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸೆಟ್ ಟಾಪ್ ಬಾಕ್ಸ್ ವಿತರಣೆ ಮಾಡುವವರ ಮೇಲೆ ಕಣ್ಣಿಡಲು ಕೆಲ ತಂಡಗಳನ್ನು ರಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

