ಏ.3 ರಿಂದ 'ಕನ್ನಡ ಹಿರಿಮೆ-ಹಿನ್ನಡೆ'
ಬೆಂಗಳೂರು: ಕನ್ನಡ ಹೋರಾಟಗಾರರು ಮತ್ತು ಕನ್ನಡಾಸಕ್ತರಿಗೆ ನಾಡು-ನುಡಿ ಬಗ್ಗೆ ಮತ್ತಷ್ಟು ವಿವರವಾದ ಮಾಹಿತಿ ಒದಗಿಸುವ ಸಲುವಾಗಿ 'ಕನ್ನಡ ಗೆಳೆಯರ ಬಳಗ' ಎರಡು ತಿಂಗಳ ಅವಧಿಯ 'ಕನ್ನಡ ಹಿರಿಮೆ-ಹಿನ್ನಡೆ' ಎಂಬ ವಿಶೇಷ ಉಪನ್ಯಾಸ ಮಾಲಿಕೆ ಆರಂಭಿಸಲಿದೆ. ಮೊದಲ ಒಂದು ತಿಂಗಳು ಪ್ರಾಚೀನ ಕನ್ನಡ ಹಾಗೂ ನಂತರದ ಒಂದು ತಿಂಗಳು ಪ್ರಚಲಿತ ಸಮಸ್ಯೆ ಕುರಿತು ಉಪನ್ಯಾಸ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏ.3 ರಿಂದ ಆರಂಭವಾಗಲಿರುವ ಈ ಉಪನ್ಯಾಸ ಮಾಲಿಕೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರು ಅಂದು ಸಂಜೆ 5.45ಕ್ಕೆ ಉದ್ಘಾಟಿಸಲಿರುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ವಹಿಸಲಿದ್ದು, ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರು 'ಪ್ರಾಚೀನ ಕನ್ನಡ ಕವಿ ಮನೆಗಳು ಮತ್ತು ವಂಶಸ್ಥರು' ಎಂಬ ಬಗ್ಗೆ ಅಂದು ವಿಶೇಷ ಉಪನ್ಯಾಸ ಮಾಡಲಿರುವರು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 080-26794508 ಸಂಪರ್ಕಿಸಬಹುದು ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಅವರು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ: ಬೆಂ.ಗ್ರಾ. 55 ಕೇಂದ್ರಗಳು
ದೊಡ್ಡಬಳ್ಳಾಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಏ.1ರಿಂದ ಆರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 55 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಖಾಸಗಿ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 14 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲಿ 19, ನೆಲಮಂಗಲದಲ್ಲಿ 13, ದೇವನಹಳ್ಳಿಯಲ್ಲಿ 11, ಹೊಸಕೋಟೆಯಲ್ಲಿ 11, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಪಿ ಇಂಡಿಯನ್ ಪ್ರೌಢಶಾಲೆಯಲ್ಲಿ 1 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ 4 ತಾಲೂಕುಗಳ ಖಾಸಗಿ ವಿದ್ಯಾರ್ಥಿಗಳು ಬೆಂಗಳೂರಿನ ಬಿಪಿ ಇಂಡಿಯನ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯಬೇಕಿದೆ. ಒಟ್ಟು 13, 460 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅತಿಹೆಚ್ಚು 3992, ಹೊಸಕೋಟೆಯಲ್ಲಿ 3765, ದೇವನಹಳ್ಳಿ ತಾಲೂಕಿನಲ್ಲಿ 3028 ಮತ್ತು ನೆಲಮಂಗಲ ತಾಲೂಕಿನಲ್ಲಿ 2675 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳು ಮತ್ತು ಶಾಲಾ ಮುಖ್ಯಶಿಕ್ಷಕರಿಗೆ ಈಗಾಗಲೇ ವಿದ್ಯಾರ್ಥಿಗಳ ಪ್ರವೇಶ ಪತ್ರ ರವಾನಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ಬೇಕಾದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದ್ದು, ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಾಮಾಂತರ ಜಿಲ್ಲೆಯಲ್ಲಿ ಅತಿದೊಡ್ಡ ಪರೀಕ್ಷಾ ಕೇಂದ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

