ಹಸಿ ತ್ಯಾಜ್ಯದಿಂದ ಬಯೋಗ್ಯಾಸ್
ಬೆಂಗಳೂರು: ಅಡುಗೆ ಮನೆ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಿ. ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಅವಲಂಬನೆ ತಪ್ಪಿಸುವುದರ ಜತೆಗೆ ಹಣವನ್ನೂ ಉಳಿಸಿ..!
ಅಡುಗೆ ಮನೆಯಲ್ಲಿ ಉತ್ಪಾದನೆಯಾಗುವ ಕಸ ಕೆಲ ಗಂಟೆ ಇದ್ದರೂ ಕೆಟ್ಟ ವಾಸನೆ. ಸೊಳ್ಳೆ, ಕೀಟಗಳ ಕಾಟ. ಇನ್ನು ಹೊರಗೆ ಎಸೆದರೆ ಬಿಬಿಎಂಪಿ ದಂಡ ವಿಧಿಸುತ್ತದೆ. ಬಿಬಿಎಂಪಿಯವರಿಗೆ ಕಸ ನೀಡಬೇಕೆಂದರೆ ಬೆಳಗ್ಗೆ ಅವರಿಗಾಗಿ ಕಾಯಬೇಕು. ಇಲ್ಲದಿದ್ದರೆ ಆ ಕಸ ಹಾಗೇ ಮನೆಯಲ್ಲಿ ಉಳಿದುಕೊಳ್ಳುತ್ತದೆ.
ಇದು ಪ್ರತಿ ಮನೆ, ಹೊಟೇಲ್‌ಗಳ ಗೋಳು. ಮನೆಯ ಹತ್ತಿರ, ಮೋರಿಯಲ್ಲಿ ಬಿಸಾಡಿದರೆ ನಾಯಿಗಳ ಕಾಟ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಣರ ಹಾಗೂ ತ್ಯಾಜ್ಯ ಮರುಬಳಕೆಗೆ ಒಂದು ಉತ್ತಮ ಯೋಜನೆ ಎಂದರೆ ಬಯೋಗ್ಯಾಸ್ ಬಳಕೆ. ಇದು ಹಳ್ಳಿಗಳಲ್ಲಿ ಸಗಣಿ, ತಿಪ್ಪೆಕಸದಿಂದ ಉತ್ಪಾದಿಸುವ ಬಯೋಗ್ಯಾಸ್ ಅಲ್ಲ. ಅಡುಗೆ ಮನೆಯ ಹಸಿ ತ್ಯಾಜ್ಯದಿಂದ ಉತ್ಪಾದನೆಯಾಗುವ ಬಯೋಗ್ಯಾಸ್.
ಹೌದು, ಅಡುಗೆ ಮನೆಯಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯದಿಂದ ನಿತ್ಯ ಸುಮಾರು 2 ತಾಸು ಸಿಂಗಲ್ ಬರ್ನರ್ ಸ್ಟೌ ಉರಿಸಿ ಅಡುಗೆ ಮಾಡಬಹುದು.
ಮನೆಯಲ್ಲಿ ಬಯೋಗ್ಯಾಸ್ ಬಳಸುವುದರಿಂದ ಹಸಿ ತ್ಯಾಜ್ಯ ವಿಲೇವಾರಿ ಸಮಸ್ಯೆ ತಪ್ಪುತ್ತದೆ. ಪರಿಸರ ಮಾಲಿನ್ಯ ತಪ್ಪಿಸಿದಂತಾಗುತ್ತದೆ. ಪ್ರತಿ ತಿಂಗಳು ನೂರಾರು ರುಪಾಯಿ ನೀಡಿ ಗ್ಯಾಸ್ ಕೊಳ್ಳುವುದರಿಂದಲೂ ಮುಕ್ತಿ ಸಿಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲಿ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಎಲ್ಲೆಂದರಲ್ಲಿ ಹಸಿ ಕಸ ತೆಗೆದು ಉಂಟಾಗುವ ಕಿರಿಕಿಗಳಿಂದಲೂ ಪಾರಾಗಬಹುದು.
ಏನಿದು ಹಸಿ ತ್ಯಾಜ್ಯದ ಬಯೋಗ್ಯಾಸ್?: ಕೇರಳ ಮೂಲದ ಸೈನಾಡ್ ಬಯೋಸೈನ್ಸ್ ಕಂಪನಿಯ ಯುವ ಎಂಜಿನಿಯರ್‌ಗಳ ತಂಡ ತಯಾರಿಸಿರುವ ಗೃಹ ಬಳಕೆಯ ಬಯೋಗ್ಯಾಸ್ ಯೂನಿಟ್ ಬಹುಪಯೋಗಿ. ಅದಕ್ಕಾಗಿ ಸಿದ್ಧಪಡಿಸಿರುವ ಯೂನಿಟ್‌ಅನ್ನು ಮನೆಯ ಮಹಡಿಯ ಮೇಲೆಯೇ ಅಳವಡಿಸಿಕೊಳ್ಳಬಹುದು. ಈ ಯೂನಿಟ್‌ಗೆ ಪೈಪ್ ಸಂಪರ್ಕ ನೀಡಿ ಕಿಚನ್‌ನಲ್ಲಿರುವ ಸಿಂಗಲ್ ಬರ್ನರ್ ಸ್ಟೌಗೆ ಕನೆಕ್ಟ್ ಮಾಡಬೇಕು.
ಯೂನಿಟ್ ಅಳವಡಿಸಿದ ಬಳಿಕ ಒಂದು ಬಾರಿ ಮಾತ್ರ 20 ಕೆಜಿಯಷ್ಟು ಸಗಣಿ ಹಾಗೂ ನೀರು ಮಿಶ್ರಣ ಮಾಡಿ ಹಾಕಬೇಕು. ಅದಾದ 10 ದಿನಗಳ ಬಳಿಕ ಬಯೋಗ್ಯಾಸ್ ಉತ್ಪಾದನೆ ಆರಂಭವಾಗುತ್ತದೆ. ನಂತರ ಅಡುಗೆ ಮನೆ ಹಸಿ ತ್ಯಾಜ್ಯ ಹಾಕಬೇಕು. ಆದರೆ, ಸಿಟ್ರಿಕ್ ಆಮ್ಲ ಉತ್ಪಾದನೆ ಮಾಡುವ ನಿಂಬೆಹಣ್ಣು ಮೂಸಂಬಿಯಂತಹ ವಸ್ತುಗಳನ್ನು ಮಾತ್ರ ಹಾಕಬಾರದು.
ಅಳವಡಿಸಿಕೊಳ್ಳುವುದು ಹೇಗೆ: ಮನೆ, ಹೊಟೇಲ್‌ಗಳು, ಹಾಸ್ಟೆಲ್, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಸೇರಿ ಎಲ್ಲಾ ಕಡೆಗಳಲ್ಲೂ ಅಗತ್ಯಕ್ಕೆ ಅನುಗುಣವಾಗಿ ಬಯೋಗ್ಯಾಸ್ ಯೂನಿಟ್‌ಗಳನ್ನು ಅಳವಡಿಸಿಕೊಳ್ಳಬಹುದು. ಪ್ರಮುಖವಾಗಿ ಮನೆಗಳಲ್ಲಿ ಇದರ ಉಪಯೋಗ ತುಂಬಾ ಸುಲಭವಾಗಿದೆ. ಏಕೆಂದರೆ ಅರ್ಧ ಕೆಜಿ ಹಸಿತ್ಯಾಜ್ಯ ಹಾಕಿದರೂ ಸಾಕು. ತ್ಯಾಜ್ಯದ ಪ್ರಮಾಣದಷ್ಟೇ ನೀರು ಬೆರೆಸಿ ಬಯೋಗ್ಯಾಸ್ ಘಟಕಕ್ಕೆ ಹಾಕಬೇಕು. ಒಂದೊಮ್ಮೆ ಒಂದು ದಿನ ತ್ಯಾಜ್ಯ ಹಾಕದೆ ಇದ್ದರೂ ಗ್ಯಾಸ್ ಉತ್ಪತ್ತಿಯಾಗುತ್ತಿರುತ್ತದೆ.
ಈ ಗ್ಯಾಸ್ ಬಳಸದಿದ್ದರೆ ಅಪಾಯವೇನೂ ಇಲ್ಲ. ಏಕೆಂದರೆ ಗ್ಯಾಸ್ ಉತ್ಪಾದನೆ ಯೂನಿಟ್‌ನಲ್ಲಿ ಭರ್ತಿಯಾದಾಗ ಅದು ತಾನಾಗಿಯೇ ಗಾಳಿಯಲ್ಲಿ ಆವಿಯಾಗುತ್ತದೆ. ಅಲ್ಲದೆ, ಗ್ಯಾಸ್ ಉತ್ಪಾದನೆ ಬಳಿಕ ಬರುವ ವ್ಯರ್ಥ ನೀರನ್ನು ಗಿಡ ಮರಗಳಿಗೆ ಹಾಕಬಹುದು. ಅಥವಾ ಚರಂಡಿಗೆ ಬಿಡಬಹುದು.
ಸಂಪೂರ್ಣ ಫೈಬರ್ ನಿರ್ಮಿತ ಯೂನಿಟ್‌ನಿಂದ ಯಾವುದೇ ಕೆಟ್ಟ ವಾಸನೆ ಬರದಂತೆ ನೋಡಿಕೊಳ್ಳಲಾಗಿದೆ.
ಕೇರಳದಲ್ಲಿ ಯಶಸ್ವಿ: ಕೇರಳದಲ್ಲಿ ಈಗಾಗಲೇ ಸುಮಾರು 6,500 ಮನೆ, ಕಚೇರಿ, ಸಂಸ್ಥೆಗಳಲ್ಲಿ ಇಂತಹ ಬಯೋಗ್ಯಾಸ್ ಸ್ಟೌಗಳನ್ನು ಬಳಸಲಾಗುತ್ತಿದೆ. ಅಲ್ಲದೆ, ಕೆಲವೆಡೆ ವಿದ್ಯುತ್ ಉತ್ಪಾದನೆಗಾಗಿಯೂ ದೊಡ್ಡ ಪ್ರಮಾಣದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ.
ಕೇರಳದಲ್ಲಿ ಈ ಯೋಜನೆ ಯಶಸ್ವಿಯಾಗಿರುವ ಕಾರಣ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ ಆಚಾರ್ಯ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಸೇರಿದಂತೆ ಹಲವರ ಮನೆಯಲ್ಲಿ ಈಗಾಗಲೇ ಪ್ರಯೋಗಾರ್ಥವಾಗಿ ಅಳವಡಿಸಲಾಗದೆ.
ಅಲ್ಲದೆ, ಮಲ್ಲೇಶ್ವರದಲ್ಲಿರುವ ಮರ ವಿಜ್ಞಾನ ಮತ್ತು ತಾಂತ್ರಿಕ ಕೇಂದ್ರದಲ್ಲಿ ಬಯೋಗ್ಯಾಸ್ ಉತ್ಪಾದನೆ ಹಾಗೂ ಬಳಕೆಗಾಗಿ 7 ಲಕ್ಷ ವೆಚ್ಚದ ದೊಡ್ಡ ಯೂನಿಟ್ ಸ್ಥಾಪಿಸುವ ಕಾರ್ಯ ಒಂದು ವಾರದ ಹಿಂದೆ ಆರಂಭವಾಗಿದೆ. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲೂ ಪ್ರಯೋಗ ಉದ್ದೇಶಗಳಿಗೆ ಇದನ್ನು ಬಳಸಲಾಗುತ್ತಿದೆ. ಚನ್ನಪಟ್ಟಣದಲ್ಲಿರುವ ತೆಂಗಿನ ಎಣ್ಣೆ ಉತ್ಪಾದನೆ ಕೇಂದ್ರದಲ್ಲಿ 150 ಕೆ.ವಿ. ವಿದ್ಯುತ್ ಉತ್ಪಾದನೆ ಉದ್ದೇಶಕ್ಕಾಗಿ ಸೈನಾಡ್ ಕಂಪನಿ ಗುತ್ತಿಗೆ ಪಡೆದಿದೆ.
ಕೇರಳದಲ್ಲಿ ಸಿಂಗಲ್ ಬರ್ನರ್ ಸ್ಟೌ ಯೂನಿಟ್‌ಗೆ ಸರ್ಕಾರ 5000 ಸಹಾಯಧನ ನೀಡುತ್ತಿದೆ. ರಾಜ್ಯ ಸರ್ಕಾರಕ್ಕೂ ಈ ಸಂಬಂಧ ಮನವಿ ಸಲ್ಲಿಸಲಾಗಿದೆ ಎಂದು ಸೈನಾಡ್ ಬಯೋಸೈನ್ಸ್ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
- ಮಂಜುನಾಥ್ ನಾಗಲೀಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

