ಮಠಾಧೀಶರಿಗೆ ರಾಜಕೀಯ ಬೇಡ: ಮುರುಘಾ ಶ್ರೀ
ಕ.ಪ್ರ. ವಾರ್ತೆ ಬೆಂಗಳೂರು ಮಾ.28-
ಮಠಾಧೀಶರು ರಾಜಕೀಯದಿಂದ ದೂರವಿರುವ ಮೂಲಕ ಧರ್ಮ ಹಾಗೂ ರಾಜಕಾರಣದ ನಡುವೆ ಅಂತರ ಕಾಪಾಡಿಕೊಳ್ಳಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘಾರಾಜೇಂದ್ರ ಶರಣರು ಅಭಿಪ್ರಾಯಪಟ್ಟಿದ್ದಾರೆ.
'ಬೆಂಗಳೂರು ವರದಿಗಾರರ ಕೂಟ' ಹಾಗೂ 'ಬೆಂಗಳೂರು ಪ್ರೆಸ್ ಕ್ಲಬ್' ಜಂಟಿಯಾಗಿ ಹಮ್ಮಿಕೊಂಡಿದ್ದ 'ಮಾಧ್ಯಮ ಸಂವಾದ'ದಲ್ಲಿ ಅವರು ಮಾತನಾಡಿದರು. ಧರ್ಮ ಹಾಗೂ ರಾಜಕಾರಣ ಎರಡರ ಉದ್ದೇಶ ಜನಸೇವೆ. ಆದರೆ ಸಮಾಜ ಸೇವೆ ಮಾಡುವಾಗ ಇವೆರಡರ ನಡುವೆ ಅಂತರ ಇರಬೇಕು. ಸ್ವಾಮೀಜಿಗಳು ಪಕ್ಷಾತೀತ ಹಾಗೂ ಜಾತ್ಯತೀತ ನಿಲುವು ಹೊಂದಿರಬೇಕು. ಯಾರು ಯಾವುದೇ ರೀತಿಯ ಆಮಿಷವೊಡ್ಡಿದರೂ ಮಠದ ಮೌಲ್ಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಮಠಗಳು ಮತ ಬ್ಯಾಂಕ್ ಆದಲ್ಲಿ ಒಂದಲ್ಲ ಒಂದು ದಿನ ಅಪಾಯ ಖಚಿತ. ಆದ್ದರಿಂದ ಮಠಾಧೀಶರು ರಾಜಕೀಯದಿಂದ ದೂರವಿದ್ದು ಧರ್ಮ ಹಾಗೂ ರಾಜಕಾರಣದ ನಡುವೆ ಅಂತರ ಕಾಪಾಡಿಕೊಂಡು ನಿಸ್ವಾರ್ಥ ಸೇವೆ ಮೂಲಕ ಸಮಾಜದಲ್ಲಿ ಬೌದ್ಧಿಕ ಹಾಗೂ ಭೌತಿಕ ಪರಿವರ್ತನೆ ಆಗುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಅನುದಾನ ಅನಿವಾರ್ಯವಲ್ಲ: ಸರ್ಕಾರದಿಂದ ಮಠಗಳಿಗೆ ನೀಡಲಾಗುವ ಕೋಟಿ ಕೋಟಿ ಅನುದಾನಗಳ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮಠಗಳಿಗೆ ಸರ್ಕಾರದ ಅನುದಾನ ಅನಿವಾರ್ಯವಲ್ಲ ಎಂದರು. ಅನುದಾನ ಆಶ್ರಯಿಸಿಯೇ ಬದುಕು ನಡೆಸಬೇಕು ಎಂಬ ಅನಿವಾರ್ಯ ಸ್ಥಿತಿ ಮಠಗಳಿಗಿಲ್ಲ. ಸರ್ಕಾರ ಯಾವ ಉದ್ದೇಶದಿಂದ ಅನುದಾನ ನೀಡುತ್ತಿದೆ ಎಂಬ ಬಗ್ಗೆ ಮಠಗಳು ವಿಚಾರ ಮಾಡಬೇಕು. ಹಾಗೆಯೇ ಅನುದಾನ ನೀಡಲಾಗಿದೆ ಎಂಬ ಕಾರಣದಿಂದ ಇಂತಹದ್ದೇ ಪಕ್ಷ ಅಥವಾ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮಠಾಧೀಶರು ಹೇಳುವುದು ಕೂಡ ಸಮಂಜಸವಲ್ಲ ಎಂದರು.
ಕಡ್ಡಾಯವಾಗಿ ಮತ ಹಾಕಿ: ಪ್ರಜೆಗಳು ಮತದಾನ ದಿನ ಕಡ್ಡಾಯವಾಗಿ ಮತ ಚಲಾಯಿಸಬೇಕು. ಆಮಿಷಗಳಿಗೆ ಬಲಿಯಾಗುವ ಮೂಲಕ ಮತದ ಮೌಲ್ಯ ಕೆಡಿಸಬಾರದು. ಎಲ್ಲ ಪಕ್ಷ ಹಾಗೂ ಜಾತಿಗಳಲ್ಲೂ ಭ್ರಷ್ಟರಿದ್ದಾರೆ. ಆದರೆ ಇರುವವರಲ್ಲಿ ಒಳ್ಳೆಯವರನ್ನು ಗುರುತಿಸಿ ಮತ ಚಲಾಯಿಸಿ. ಸಾಧ್ಯವಾದಷ್ಟೂ ಒಂದೇ ಪಕ್ಷಕ್ಕೆ ಬಹುಮತ ಬರುವ ರೀತಿಯಲ್ಲಿ ಮತ ಚಲಾಯಿಸಿ, ಸ್ಥಿರ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿ ಎಂದು ಮಾಧ್ಯಮದ ಮೂಲಕ ಅವರು ಮತದಾರರಿಗೆ ಕಿವಿಮಾತು ಹೇಳಿದರು. ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪ್ರೆಸ್ ಕ್ಲಬ್ ಅಧ್ಯಕ್ಷ ಇ.ವಿ. ಸತ್ಯನಾರಾಯಣ ಅವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

