ಮರೆತಿಲ್ಲ ಜನ 'ಲೋಕಾ'ರೂಢಿ
ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಸರ್ಕಾರ ಸದ್ದಿಲ್ಲದೆ ಪ್ರಯತ್ನ ನಡೆಸಿದ್ದರೂ ಸಾರ್ವಜನಿಕರಿಗೆ ಮಾತ್ರ ಆ ಸಂಸ್ಥೆಯ ಮೇಲಿನ ವಿಶ್ವಾಸ ಇನ್ನೂ ಕಡಿಮೆಯಾಗಿಲ್ಲ.
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಸರ್ಕಾರ ಸದ್ದಿಲ್ಲದೆ ಪ್ರಯತ್ನ ನಡೆಸಿದ್ದರೂ ಸಾರ್ವಜನಿಕರಿಗೆ ಮಾತ್ರ ಆ ಸಂಸ್ಥೆಯ ಮೇಲಿನ ವಿಶ್ವಾಸ ಇನ್ನೂ ಕಡಿಮೆಯಾಗಿಲ್ಲ.
ಯಜಮಾನನಿಲ್ಲದ ಮನೆ ಎಂದು ಕರೆಸಿಕೊಳ್ಳುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ಕಳೆದ ಹದಿನೇಳು ತಿಂಗಳಿಂದ ಅಧಿಕಾರಿಗಳದ್ದೇ ಕಾರುಬಾರು. ಆದರೆ ಕರ್ತವ್ಯ ನಿರ್ವಹಣೆಯಲ್ಲೇನು ಕುಂದುಂಟಾಗಿಲ್ಲ. ಇದಕ್ಕೆ ಸಾಕ್ಷಿ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರುಗಳ ಅಂಕಿ- ಸಂಖ್ಯೆಯೇ ಸಾಕ್ಷಿ.
ಎಲ್ಲದಕ್ಕಿಂತ ಹೆಚ್ಚಾಗಿ ಕಳೆದ ಒಂದು ವರ್ಷದಲ್ಲಿ ಜನಪ್ರತಿನಿಧಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು 'ನಿರ್ಭಯ'ವಾಗಿ ವರ್ತಿಸಿದ್ದಾರೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯೇ ಅತಿ ಹೆಚ್ಚು ದೂರುಗಳು ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿವೆ.
25 ದೂರು: 2012 ರಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಂತ್ರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ಬರೋಬ್ಬರಿ 25 ಪ್ರಕರಣಗಳು ದಾಖಲಾಗಿವೆ. ಲೋಕಾಯುಕ್ತ ಇತಿಹಾಸದಲ್ಲಿ ಒಂದೇ ವರ್ಷ ಇಷ್ಟು ಪ್ರಕರಣ ದಾಖಲಾಗಿರುವುದು ಇದೇ ಮೊದಲು.
ಇತ್ತೀಚೆಗಷ್ಟೇ ಲೋಕಾಯುಕ್ತ ಸಂಸ್ಥೆಗೆ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರನ್ನು ಸರ್ಕಾರ ನೇಮಕ ಮಾಡಿದೆ. ಆದರೆ ನ್ಯಾಯಮೂರ್ತಿ ಸಂತೋಷ ಹೆಗ್ಡೆ ನಿವೃತ್ತರಾದ ಬಳಿಕ ಕೆಲ ದಿನ ಮಾತ್ರ ಅಧಿಕಾರ ನಡೆಸಿದ್ದ ನ್ಯಾ.ಶಿವರಾಜ್ ಪಾಟೀಲ್ ರಾಜಿನಾಮೆ ಪ್ರಕರಣದ ನಂತರ 17 ತಿಂಗಳ ಕಾಲ ಲೋಕಾಯುಕ್ತ ಸಂಸ್ಥೆಗೆ ಮುಖ್ಯಸ್ಥರೇ ಇರಲಿಲ್ಲ.
ಆದರೂ ಸಂಸ್ಥೆ ಬಗ್ಗೆ ಜನರ ವಿಶ್ವಾಸ ಕಡಿಮೆ ಆಗಿಲ್ಲ. ಇದಕ್ಕೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಜನಪ್ರತಿನಿಧಿಗಳು, ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ ಇದನ್ನು ಸಾಕ್ಷಿಕರಿಸಿವೆ.
ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಂಡ ನ್ಯಾಯಮೂರ್ತಿ ಎನ್. ವೆಂಕಟಾಚಲ, ನ್ಯಾ.ಸಂತೋಷ ಹೆಗ್ಡೆ ಅವರ ಕಾರ್ಯ ವೈಖರಿ ಲೋಕಾಯುಕ್ತ ಸಂಸ್ಥೆ ಬಗ್ಗೆ ಜನರಲ್ಲಿ ಹೆಚ್ಚು ವಿಶ್ವಾಸ ಮೂಡಿಸಿತ್ತು.
ರಾಜಕಾರಣಿಗಳು: ಅಕ್ರಮ ಆಸ್ತಿ ಗಳಿಕೆ, ಹಗರಣಗಳು, ಡಿ ನೋಟಿಫಿಕೆಷನ್ ಪ್ರಕರಣ ಸಂಬಂಧ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರ ವಿರುದ್ಧ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಗೂ ಲೋಕಾಯುಕ್ತ ಸಂಸ್ಥೆಗೆ ಸಾಲು ಸಾಲು ದೂರು ಬರುತ್ತಿವೆ. 2011ರಲ್ಲಿ 18 ಹಾಗೂ 2012ರಲ್ಲಿ 25 ರಾಜಕಾರಣಿಗಳ ವಿರುದ್ಧ ದೂರುಗಳು ದಾಖಲಾಗಿವೆ.
ಐಎಎಸ್/ಐಪಿಎಸ್/ಐಎಫ್ಎಸ್
ಇನ್ನು ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ವಿರುದ್ಧದ ಆರೋಪಗಳಿಗೂ ಕಮ್ಮಿ ಇಲ್ಲ. ಹತ್ತು ತಲೆಮಾರಿಗೆ ಸಾಲುವಷ್ಟು ಅಕ್ರಮ ಹಣ ಸಂಪಾದಿಸಿ ಬಂಗಲೆಗಳನ್ನು ಕಟ್ಟಿಸಿಕೊಂಡು, ಐಷಾರಾಮಿ ಕಾರಿನಲ್ಲಿ ಓಡಾಡುತ್ತಾ ಬಡ ಜನರ ರಕ್ತ ಹೀರುವ, ರಾಜಕಾರಣಿಗಳ ಅಕ್ರಮಗಳಿಗೆ 'ಕೃಪಾ ಪೋಷಣೆ' ಮಾಡುತ್ತಿದ್ದ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳ ವಿರುದ್ಧ 2011ರಲ್ಲಿ 13 ಹಾಗೂ 2012ರಲ್ಲಿ 23 ಪ್ರಕರಣಗಳು ದಾಖಲಾಗಿವೆ.
ಇಲಾಖಾವಾರು: ಇಲಾಖಾವಾರು ವಿಷಯಕ್ಕೆ ಬಂದಾಗ 2001ರಿಂದ 2012ರವರೆಗೆ ಕಂದಾಯ ಇಲಾಖೆ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನಂತರದ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇದೆ. 2001ರಿಂದ 2012ರ ವರೆಗೆ ಇಲಾಖೆಯ 397 ಸಿಬ್ಬಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಗೃಹ ಇಲಾಖೆಯ 386 ಸಿಬ್ಬಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಪ್ರಕರಣ ದಾಖಲಿಸಲು, ಪಾಸ್ಪೋರ್ಟ್ ಪರಿಶೀಲನೆ ಸಂದರ್ಭದಲ್ಲಿ ಲಂಚ, ಜಮೀನು ವ್ಯವಹಾರಗಳನ್ನು ಕುದುರಿಸುವುದು, ಸಿವಿಲ್ ಸಮಸ್ಯೆಗಳು, ಠಾಣೆಯಲ್ಲಿ ಸಂಧಾನ ಮಾಡಿ ಹಣ ಪಡೆಯುವುದು, ಟ್ರಾಫಿಕ್ನಲ್ಲಿ ವಾಹನ ಸವಾರರಿಂದ ಲಂಚ ಹೀಗೆ ಹಲವು ಆರೋಪಗಳು ಸೇರಿವೆ.
ಹೀಗಾಗಿ ಭ್ರಷ್ಟಚಾರದಲ್ಲಿ ಗೃಹ ಇಲಾಖೆಗೆ 3ನೇ ಸ್ಥಾನ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಲಂಚ, ವರ್ಗಾವಣೆ, ಸೀಟು ಹಗರಣಗಳು ಹೀಗೆ ಹತ್ತಾರು ಆರೋಪಗಳ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ 184 ಪ್ರಕರಣಗಳಿವೆ. ಉಳಿದಂತೆ ನಗರಾಭಿವೃದ್ಧಿ, ಕೆಪಿಟಿಸಿಎಲ್, ಶಿಕ್ಷಣ, ಸಾರಿಗೆ, ಲೋಕೋಪಯೋಗಿ, ಸಮಾಜ ಕಲ್ಯಾಣ, ಕೃಷಿ ಅರಣ್ಯ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳ ಭ್ರಷ್ಟತೆ ವಿರುದ್ಧ ಸಾವಿರಾರು ಪ್ರಕರಣಗಳು ದಾಖಲಾಗಿವೆ.
ಕೆಳಹಂತದ ಭ್ರಷ್ಟಾಚಾರ: ಭ್ರಷ್ಟಾಚಾರವನ್ನು ಕೆಳಮಟ್ಟದಿಂದ ನಿರ್ಮೂಲನೆ ಮಾಡಬೇಕು ಎನ್ನುವ ಕೂಗು ಹೆಚ್ಚಿದೆ. ಜನರು ಹೆಚ್ಚು ಕಷ್ಟ ಅನುಭವಿಸುವುದೇ ಕೆಳ ಹಂತದ ಸಿಬ್ಬಂದಿಯಿಂದ. ರು. 1 ಸಾವಿರಕ್ಕೂ ಕಡಿಮೆ ಲಂಚ ಪಡೆಯುತ್ತಿದ್ದಾಗ 486 ನೌಕರರು ಸಿಕ್ಕಿಬಿದ್ದಿದ್ದಾರೆ. ಹಾಗೇ ರು. 1 ಸಾವಿರದಿಂದ 5 ಸಾವಿರವರೆಗೆ ಲಂಚ ಪಡೆಯುವಾಗ ಅತಿ ಹೆಚ್ಟು ಅಂದರೆ 1514 ನೌಕರರು ಬಲೆಗೆ ಬಿದ್ದಿದ್ದಾರೆ. ಉಳಿದಂತೆ ರು. 5 ಸಾವಿರದಿಂದ ರು. 10 ಸಾವಿರ ವೆರೆಗೆ 564, ರು. 10,000 ದಿಂದ ರು. 25 ಸಾವಿರವರೆಗೆ 400, ರು. 25 ಸಾವಿರದಿಂದ ರು. 50 ಸಾವಿರ 153, ರು. 50 ಸಾವಿರ ರು. 1 ಲಕ್ಷದವೆರೆಗೆ 86 ಹಾಗೂ ರು. 1 ಲಕ್ಷ ಮೇಲ್ಪಟ್ಟು ಲಂಚ ಪಡೆಯುವಾಗ 71 ಜನ ಸಿಕ್ಕಿಬಿದ್ದಿದ್ದಾರೆ.
ಪ್ರಕರಣಗಳು ಹೆಚ್ಚಳ: ಲೋಕಾಯುಕ್ತ ಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಕರಣ ಸಂಖ್ಯೆ ಹೆಚ್ಚುಗುತ್ತಿವೆ. 2001ರಲ್ಲಿ 182 ಪ್ರಕರಣಗಳು ದಾಖಲಾಗಿದ್ದರೆ, 2012ರಲ್ಲಿ 413 ಪ್ರಕರಣಗಳು ದಾಖಲಾಗಿವೆ. ನ್ಯಾ.ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದ ಅವಧಿಯ 2011ರಲ್ಲಿ ಅತಿ ಹೆಚ್ಚು 486 ಪ್ರಕರಣಗಳು ದಾಖಲಾಗಿವೆ. ಸಂಸ್ಥೆಯ ಬಗ್ಗೆ ವಿಶ್ವಾಸ ಹೆಚ್ಚಳವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ನ್ಯಾ.ಸಂತೋಷ್ ಹೆಗ್ಡೆ ಅವರು ದೂರು ನೀಡಲು ಹೆಲ್ಪ್ಲೈನ್ ಆರಂಭಿಸಿದ್ದರು. ನ್ಯಾ.ಎನ್.ವೆಂಕಟಚಾಲಯ್ಯ ಅವರು ದಿಢೀರ್ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳ ನಡುಕ ಹುಟ್ಟಿಸುತ್ತಿದ್ದರು. ಹೀಗಾಗಿ ಜನರಲ್ಲಿ ಸಂಸ್ಥೆಯ ಬಗ್ಗೆ ನಂಬಿಕೆ ಬಂದು ದೂರುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ.
ಇಲಾಖಾವಾರು ಅಧಿಕಾರಿಗಳು ನೌಕರರ ವಿರುದ್ಧ 2001 ರಿಂದ 2012ರ ವೆರೆಗೆ ದಾಖಲಾದ ಪ್ರಕರಣಗಳು
ಕಂದಾಯ ಇಲಾಖೆ 949
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 397
ಗೃಹ ಇಲಾಖೆ 386
ಆರೋಗ್ಯ ಇಲಾಖೆ 184
ನಗರಾಭಿವೃದ್ಧಿ 174
ಕೆಪಿಟಿಸಿಎಲ್ 172
ಶಿಕ್ಷಣ 144
ಹಣಕಾಸು 144
ಸಾರಿಗೆ 112
ಲೋಕೋಪಯೋಗಿ ಇಲಾಖೆ 107
ದಾಳಿಗೊಳಗಾದವರು 2008 2009 2010 2011 2012
ಗೆಜೆಟೆಡ್ 202 189 195 264 311
ನಾನ್ ಗೆಜೆಟೆಡ್ 270 312 339 331 292
ಐಎಎಸ್/ಐಪಿಎಸ್/ಐಎಫ್ಎಸ್ 7 4 0 13 23
ಎಂಎಲ್ಎ/ಎಂಎಲ್ಸಿ/ಮಂತ್ರಿ 1 0 1 18 25
ಇತರರು 13 15 53 65 182
ಲಂಚ ಪಡೆಯುವಾಗ ಸಿಕ್ಕಿ ಬಿದ್ದವರು
ಕಂದಾಯ ಇಲಾಖೆ 949
ರು. 1 ಸಾವಿರಕ್ಕೂ ಕಡಿಮೆ 466
ರು. 1 ಸಾವಿರ ದಿಂದ ರು. 5 ಸಾವಿರ 1514
ರು. 5 ಸಾವಿರ ದಿಂದ ರು. 10 ಸಾವಿರ 564
ರು. 10 ಸಾವಿರದಿಂದ ರು. 25 ಸಾವಿರ 400
ರು. 25 ಸಾವಿರದಿಂದ ರು. 50 ಸಾವಿರ 153
ರು. 50 ಸಾವಿರದಿಂದ ರು. 1 ಲಕ್ಷ 86
ರು. 1 ಲಕ್ಷ ಮೇಲ್ಪಟ್ಟು 71
ರಾಜಕಾರಣಿಗಳ ವಿರುದ್ಧದ ಪ್ರಕರಣ
ಬಿ.ಎಸ್.ಯಡಿಯೂರಪ್ಪ
ಸುರೇಶ್ಕುಮಾರ್
ಕೃಷ್ಣಯ್ಯ ಶೆಟ್ಟಿ
ಎಸ್.ಆರ್. ವಿಶ್ವನಾಥ
ಪ್ರಿಯಾಕೃಷ್ಣ
ಎಂ.ಕೃಷ್ಣಪ್ಪ
ಮುರುಗೇಶ್ ನಿರಾಣಿ
ಲಂಚ ಪಡೆಯುವಾಗ ನಡೆದ ದಾಳಿ ಪ್ರಕರಣಗಳು
ಬೆಂಗಳೂರು ನಗರ 133
ಬೆಂಗಳೂರು ಗ್ರಾಮಾಂತರ 31
ತುಮಕೂರು 27
ಬೆಳಗಾವಿ 24
ಮೈಸೂರು 22
ಗುಲ್ಬರ್ಗಾ 21
ಉಡುಪಿ 1
ಇತರ ಜಿಲ್ಲೆಗಳು ಸೇರಿ ಒಟ್ಟು 431
- ಮಂಜುನಾಥ್ ನಾಗಲೀಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

