ರೋಗಿಯ ಭರವಸೆ ಉಳಿಸಿಕೊಳ್ಳಿ: ಕಲಾಂ
ಕ.ಪ್ರ.ವಾರ್ತೆ ಬೆಂಗಳೂರು ಮಾ.22-
ವೈದ್ಯರು ರೋಗಿಯ ಭರವಸೆ ಉಳಿಸಿಕೊಳ್ಳುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಜತೆಗೆ ಗ್ರಾಮೀಣ ಭಾಗದ ಜನರ ಸೇವೆಗೂ ಮುಂದಾಗಬೇಕು ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ. ಜೆ.ಅಬ್ದುಲ್ ಕಲಾಂ ಹೇಳಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಗರದಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈದ್ಯಕೀಯ ವೃತ್ತಿ ಅತಿ ಶ್ರೇಷ್ಠ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯ ಹಾಗೂ ರೋಗಿ ನಡುವಿನ ನಂಬಿಕೆ-ವಿಶ್ವಾಸದ ಮೇಲೆ ಸಂಬಂಧ ಬೆಳೆದಿರುತ್ತದೆ. ಹಾಗಾಗಿ ವೈದ್ಯರು ತಮ್ಮ ವೃತ್ತಿ ಪ್ರೀತಿಸುವ ಜತೆಗೆ ಸಂದಿಗ್ಧ ಸನ್ನಿವೇಶದಲ್ಲೂ ರೋಗಿಗಳನ್ನು ಸಂಯಮದಿಂದ ಕಾಣಬೇಕು. ಪ್ರತಿ ರೋಗಿಯೂ ವೈದ್ಯ ತನ್ನ ರೋಗ ಗುಣಪಡಿಸುತ್ತಾನೆ ಎಂಬ ಭರವಸೆ ಹೊತ್ತೇ ಬರುವುದರಿಂದ ಅದನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ಅವರು ಯುವವೈದ್ಯರಿಗೆ ಕಿವಿಮಾತು ಹೇಳಿದರು.
ಸಂಶೋಧನೆ-ಗ್ರಾಮೀಣ ಸೇವೆಗೆ ಮುಂದಾಗಿ: ವೈದ್ಯರು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕಾದರೆ ಹಳೆಯ ಔಷಧಿಗಳ ಮೇಲೆ ಅವಲಂಬಿತರಾಗಿರದೆ ಹೊಸ ಆವಿಷ್ಕಾರಗಳ ಮೂಲಕ ಸರಳ ಚಿಕಿತ್ಸಾ ಮಾರ್ಗಗಳನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ಸದಾ ಅಧ್ಯಯನಶೀಲರಾಗಿರಬೇಕು. ಅಲ್ಲದೆ, ಗ್ರಾಮೀಣ ಪ್ರದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತಹ ಗುಣಮಟ್ಟದ ಚಿಕಿತ್ಸೆಗೆ ಮುಂದಾಗಬೇಕು. ಕೇವಲ ನಗರಕ್ಕೆ ಮಾತ್ರ ಸೀಮಿತರಾಗಿರದೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯ, ಚಿಕಿತ್ಸೆಗೂ ಆದ್ಯತೆ ನೀಡಬೇಕು ಎಂದರು.
ವೈದ್ಯರಿಂದ ಸ್ವಸ್ಥ ಸಮಾಜ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರು ಮಾತನಾಡಿ, ಮಾಹಿತಿ, ಜೈವಿಕ ತಂತ್ರಜ್ಞಾನದಿಂದ ಸಮಾಜವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಬಹುದು. ಆದರೆ, ಸ್ವಾಸ್ಥ್ಯಭರಿತ ಸಮಾಜ ನಿರ್ಮಾಣ ವೈದ್ಯಕೀಯ ಕ್ಷೇತ್ರದಿಂದ ಮಾತ್ರ ಸಾಧ್ಯ. ಯುವವೈದ್ಯರು ಆ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಎಸ್.ಶ್ರೀಪ್ರಕಾಶ್ ಮಾತನಾಡಿ, ದೇಶದಲ್ಲಿ ಒಟ್ಟು ಶೇ.20ರಷ್ಟು ಮಂದಿ ಉನ್ನತ ಶಿಕ್ಷಣಕ್ಕೆ ಪ್ರವೇಶಿಸುತ್ತಿದ್ದು, ಅವರಲ್ಲಿ ಶೇ.7ರಷ್ಟು ಮಂದಿ ಮಾತ್ರ ವೈದ್ಯಕೀಯ ಶಿಕ್ಷಣದಲ್ಲಿ ಮುಂದುವರಿಯುತ್ತಿರುವುದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧಕರ ಕೊರತೆ ಇದೆ ಎಂದರು.
ಬಿಎಂಸಿಆರ್ಐನ ಒಟ್ಟು 144 ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ವಿವಿಧ ವಿಷಯದಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 67 ಹಾಗೂ ದ್ವಿತೀಯ ದರ್ಜೆಯಲ್ಲಿ 71 ವಿದ್ಯಾರ್ಥಿಗಳು ಪದವಿ ಪೂರೈಸಿದ್ದಾರೆ. ಈ ವೇಳೆ ಬಿಎಂಸಿಆರ್ಐ ನಿರ್ದೇಶಕ ಡಾ.ಒ.ಎಸ್.ಸಿದ್ಧಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

