ಪಪೂಗೆ ಮೇಜರ್ ಸರ್ಜರಿ
ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.21-
ಸತತ ಎರಡು ವರ್ಷಗಳಿಂದ ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವುದರ ಪರಿಣಾಮ ಮುಜುಗರಕ್ಕೆ ಒಳಗಾಗಿರುವ ಪದವಿಪೂರ್ವ ಶಿಕ್ಷಣ ಇಲಾಖೆಗೆ ಮೇಜರ್ ಸರ್ಜರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಲಾಖೆಯ ಕೇಂದ್ರ ಕಚೇರಿಯಲ್ಲಿಯೇ ಕಳೆದ 5 ವರ್ಷಕ್ಕಿಂತಲೂ ಅಧಿಕ ಸಮಯದಿಂದ ಬೀಡುಬಿಟ್ಟಿರುವ ಸಿಬ್ಬಂದಿಯನ್ನು ಇಲಾಖೆಯ ಬೇರೆ ವಿಭಾಗಕ್ಕೆ ವರ್ಗಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಪರೀಕ್ಷಾ ಅಕ್ರಮಗಳಿಗೆ ನಿಯಂತ್ರಣ ಹೇರಬಹುದೇ ಎಂದು ಪರೀಕ್ಷಿಸಲು ಚಿಂತಿಸಿದೆ.
ಇದರಿಂದ ಸುಮಾರು 20ಕ್ಕೂ ಅಧಿಕ ಸಿಬ್ಬಂದಿಯ ವರ್ಗಾವಣೆ ಖಚಿತ ಎನ್ನಲಾಗಿದೆ. ಇದನ್ನು ತಡೆಯಲು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೆ ಸಾಕಷ್ಟು ಒತ್ತಡವೂ ಬರುತ್ತಿದೆ. ಆದರೆ ಸರ್ಕಾರ ತನ್ನ ಅವಧಿ ಮುಗಿಸುವುದರೊಳಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ಕೆಲ ವರ್ಷಗಳಿಂದ ಪ್ರಶ್ನೆ ಪತ್ರಿಕೆ ಬಹಿರಂಗವಾಗುತ್ತಿದ್ದರೂ ಮೂಲ ಸೋರಿಕೆ ಬಗ್ಗೆ ತಿಳಿಯುತ್ತಿಲ್ಲ. ಇಲಾಖೆಯ ಕೇಂದ್ರ ಕಚೇರಿಯ ಸಿಬ್ಬಂದಿ ಬೆಂಬಲವಿಲ್ಲದೇ ಇಂತಹ ಜಾಗರೂಕ ವಿಷಯಗಳು ಹೊರಬರಲು ಸಾಧ್ಯವಿಲ್ಲ ಎಂಬ ಆರೋಪಗಳು ಪದೆಪದೇ ಕೇಳಿಬರುತ್ತಿವೆ. ಇದೇ ಕಾರಣದಿಂದ 5 ವರ್ಷಕ್ಕಿಂತಲೂ ಅಧಿಕ ಕಾಲ ಕೇಂದ್ರ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪಟ್ಟಿಯನ್ನು ಶಿಕ್ಷಣ ಸಚಿವರು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಯೋಗಕ್ಕೆ ಮುಂದಾದ ಸರ್ಕಾರ: 2011-12ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭೌತಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ಪ್ರಶ್ನೆ ಪತ್ರಿಕೆಗಳು ಬಯಲಾಗಿದ್ದವು. ಕಡೂರಿನಲ್ಲಿರುವ ಸರ್ಕಾರಿ ಖಜಾನೆ ಮೂಲಕವೇ ಪ್ರಶ್ನೆ ಪತ್ರಿಕೆ ಬಹಿರಂಗವಾಗಿತ್ತು. ಕೋಲಾರ ಹಾಗೂ ಇತರ ಜಿಲ್ಲೆಗಳಿಗೂ ಇದರ ಕಬಂಧ ಬಾಹು ಚಾಚಿದ್ದವು. ಇಲಾಖೆಯ ಒಳಗಿನವರ ನೆರವಿನ ಬಗ್ಗೆ ತನಿಖೆ ನಡೆಸುವಂತೆ ಸಿಐಡಿಗೆ ಖುದ್ದು ಸಚಿವರೇ ಸೂಚಿಸಿದ್ದರು. ಆದರೆ ಸಿಐಡಿಗೆ ಈ ಬಗ್ಗೆ ಯಾವುದೇ ನಿಖರ ಮಾಹಿತಿ ದೊರೆತಿರಲಿಲ್ಲ.
ಆದರೆ ಪ್ರತಿವರ್ಷವೂ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯ ಕೇಂದ್ರ ಕಚೇರಿಯ ಸಿಬ್ಬಂದಿಯ ನೆರವಿನ ಬಗೆಗೆ ಸರ್ಕಾರಕ್ಕೂ ಸಂದೇಹಬಂದಿದೆ. ಇದೇ ಕಾರಣದಿಂದ ಸರ್ಕಾರ ತಡವಾಗಿಯಾದರೂ ವರ್ಗಾವಣೆಯ ಪ್ರಯೋಗ ಮಾಡಲು ಮುಂದಾಗಿದೆ.
ಈ ಹಿಂದೆಯೆ ಇಂತಹ ಕೆಲ ಅಧಿಕಾರಿಗಳನ್ನು ವರ್ಗಾಯಿಸುವ ಪ್ರಯತ್ನ ನಡೆದಿದ್ದರೂ 'ಬಾಹ್ಯ' ಒತ್ತಡಗಳಿಂದ ಸುಮ್ಮನಿರಲಾಗಿತ್ತು. ಅನುದಾನಿತ ಮತ್ತು ಖಾಸಗಿ ಕಾಲೇಜು ಹಾಗೂ ಟ್ಯೂಶನ್ ಲಾಬಿಗೆ ಸಹಕಾರ ನೀಡುತ್ತಿರುವ ಸಿಬ್ಬಂದಿ ಪಟ್ಟಿಯನ್ನು ತಯಾರಿಸಿ ಎತ್ತಂಗಡಿ ಮಾಡುವ ಕಾರ್ಯ ನಡೆದಿತ್ತು.
ಆದರೆ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದ ನೆಪದಲ್ಲಾದರೂ ಈ 'ಸ್ವಚ್ಛತಾ' ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಪ್ರಾಥಮಿಕ ಹಂತದಲ್ಲಿ ಇಲಾಖೆಯ ಪರೀಕ್ಷಾ ವಿಭಾಗವನ್ನು ಸರಿ ಮಾಡಲು ನಿರ್ಧರಿಸಲಾಗಿದೆ. ಇಲ್ಲಿ ನಾಲ್ವರು ಸಿಬ್ಬಂದಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಾದ ಬಳಿಕ ಆಡಳಿತ, ಕ್ರೀಡೆ, ಕಂಪ್ಯೂಟರ್, ಸೇರಿದಂತೆ ಎಲ್ಲ ವಿಭಾಗಳಲ್ಲೂ ಸರ್ಜರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪ್ರಶ್ನೆ ಪತ್ರಿಕೆ ರೂಪಿಸುವುದು ಹೇಗೆ?
ಪ್ರಶ್ನೆ ಪತ್ರಿಕೆಯು ಇಲಾಖೆಯೊಳಗೆ ರೂಪಗೊಳ್ಳುವುದರಿಂದ ಬಹಿರಂಗದಲ್ಲಿಯೂ ಸಿಬ್ಬಂದಿಯ ಕೈವಾಡ ಅಲ್ಲಗಳೆಯುವಂತಿಲ್ಲ. ಇದಕ್ಕಾಗಿ ಪರೀಕ್ಷೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಇದನ್ನು ಗಮನಿಸಿದರೆ ಇಲಾಖೆಯ ಸಿಬ್ಬಂದಿ, ಖಜಾನೆಯಲ್ಲಿನ ಸಿಬ್ಬಂದಿ ಹಾಗೂ ಮುದ್ರಣ ಸಂಸ್ಥೆಯ ಕೈವಾಡವಿಲ್ಲದೇ ಪ್ರಶ್ನೆ ಪತ್ರಿಕೆ ಬಹಿರಂಗವಾಗುವ ಸಾಧ್ಯತೆಯಿಲ್ಲ.
ಟ ಶೈಕ್ಷಣಿಕ ವರ್ಷದ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಇಲಾಖೆಯ ಪರೀಕ್ಷಾ ವಿಭಾಗದ ಉಪನಿರ್ದೇಶಕ, ಜಂಟಿ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕರು ವಿಷಯ ತಜ್ಞರ ಸಭೆ ಕರೆಯುತ್ತಾರೆ. ಇದರಲ್ಲಿ ಟ್ಯೂಶನ್ ನಡೆಸುವ ಶಿಕ್ಷಕರನ್ನು ದೂರವಿಟ್ಟು, ಪ್ರತಿ ವಿಷಯಕ್ಕೆ 3 ಉಪನ್ಯಾಸಕರನ್ನು ನೇಮಿಸಲಾಗುತ್ತದೆ. ಪ್ರತಿ ವಿಷಯದಲ್ಲೂ ಇಂತಹ 3 ಉಪನ್ಯಾಸಕರ 3 ಸಮಿತಿ ರಚಿಸಲಾಗುತ್ತದೆ.
ಉಪನ್ಯಾಸಕರ ನೇಮಕವಾದ ಬಳಿಕ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ರೂಪಿಸಲು ಕೇಂದ್ರ ಹಾಗೂ ಮೇಲ್ವಿಚಾರಕನ್ನು ನೇಮಿಸುತ್ತಾರೆ. ಮೇಲ್ವಿಚಾರಕರು ಹಿರಿಯ ಪ್ರಾಂಶುಪಾಲರಾಗಿರುತ್ತಾರೆ.
ಈ ಸಂದರ್ಭದಲ್ಲಿ ಉಪನ್ಯಾಸಕರು ಕೇಂದ್ರಕ್ಕೆ ಯಾವುದೇ ಚೀಟಿ, ಎಲೆಕ್ಟ್ರಾನಿಕ್ ಯಂತ್ರ ಅಥವಾ ಮತ್ಯಾವುದೇ ಸಲಕರಣೆಗಳನ್ನು ತರದಂತೆ ಮೇಲ್ವಿಚಾರಕರು ಪರಿಶೀಲಿಸುತ್ತಾರೆ. ಇದಲ್ಲದೇ ಕೇಂದ್ರದಿಂದಲೂ ಯಾವುದೇ ಚೀಟಿಗಳನ್ನು ಕೊಂಡೊಯ್ಯದಂತೆ ಎಚ್ಚರವಹಿಸಲಾಗುತ್ತದೆ.
ಪ್ರತಿ ಸಮಿತಿಯು ಪ್ರಶ್ನೆ ಪತ್ರಿಕೆ ಅಂತಿಮಗೊಳಿಸಿ ಮುಚ್ಚಿದ ಲಕೋಟೆಯಲ್ಲಿ ಆಯುಕ್ತರಿಗೆ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಈ ಲಕೋಟೆಯಲ್ಲಿ ವಿಷಯದ ಕೋಡ್ ಮಾತ್ರ ಇರುತ್ತದೆ
3 ಲಕೋಟೆಯಲ್ಲಿ ಲಾಟರಿ ವ್ಯವಸ್ಥೆ ಮೂಲಕ ಒಂದು ಪ್ರಶ್ನೆ ಪತ್ರಿಕೆಯ ಲಕೋಟೆ ಆಯ್ಕೆ ಮಾಡಲಾಗುತ್ತದೆ. ಅದನ್ನು ತೆರೆಯದೇ ಹಾಗೆಯೇ ಮುದ್ರಣಕ್ಕೆ ನೀಡಲಾಗುತ್ತದೆ.
ಹೆಚ್ಚಿನ ಸಂದರ್ಭದಲ್ಲಿ ಹೊರ ರಾಜ್ಯದ ಮುದ್ರಣ ಸಂಸ್ಥೆಗಳಿಗೆ ಪ್ರಶ್ನೆ ಪತ್ರಿಕೆ ಮುದ್ರಣ ಜವಾಬ್ದಾರಿ ನೀಡಲಾಗುತ್ತದೆ. ಗೌಪ್ಯತೆಯ ಕಾರಣದಿಂದ ಇದಕ್ಕೆ ಟೆಂಡರ್ ಕರೆಯಲಾಗುವುದಿಲ್ಲ.
ಮುದ್ರಣ ಸಂಸ್ಥೆಯಿಂದ ನೇರವಾಗಿ ಜಿಲ್ಲಾ ಹಾಗೂ ತಾಲೂಕು ಕಚೇರಿಗಳ ಖಜಾನೆಗೆ ರವಾನೆಯಾಗುತ್ತದೆ. ಈ ಸಂದರ್ಭದಲ್ಲಿ ತಾಲೂಕು ಕಚೇರಿ ಅಧಿಕಾರಿ, ಗನ್ಮ್ಯಾನ್, ಬಿಇಒ, ಡಿಡಿಪಿಐು ಅವರು ಹಾಜರಿರಲೇಬೇಕು.
ಪರೀಕ್ಷೆಯ ದಿನದಂದು ತಹಸೀಲ್ದಾರ್, ಬಿಇಒ ಹಾಗೂ ಡಿಡಿಪಿಐಗಳು ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ನೀಡುತ್ತಾರೆ. ಪ್ರಾಂಶುಪಾಲರು ಪರೀಕ್ಷಾ ಮೇಲ್ವಿಚಾರಕರಿಗೆ ನೀಡಿ, ಪರೀಕ್ಷಾ ಕೊಠಡಿಯಲ್ಲಿಯೇ ವಿದ್ಯಾರ್ಥಿಗಳ ಎದುರು ಪ್ರಶ್ನೆ ಪತ್ರಿಕೆ ಲಕೋಟೆ ತೆರೆಯಲಾಗುತ್ತದೆ.
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

