ಮಕ್ಕಳ ಆಧಾರ್ಗೆ ಕೊಕ್ಕೆ
ಅಗತ್ಯ ದಾಖಲೆ ನೀಡಿಯೂ ಏಜೆಂಟ್ಗಳಿಂದ ಆಕ್ಷೇಪ, ಶಿಕ್ಷಣ ಸಂಸ್ಥೆಯಿಂದಲೇ ವಿಳಾಸ ದಾಖಲೆ ತರಲು ಒತ್ತಾಯ
ಬೆಂಗಳೂರು: ದೇವರು ವರ ಕೊಟ್ರೂ, ಪೂಜಾರಿ ಕೊಡನು ಎಂಬಂತಾಗಿದೆ ಆಧಾರ್ ಸಂಖ್ಯೆ ಪಡೆಯುವವರ ಸ್ಥಿತಿ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಆಧಾರ್ ಸಂಖ್ಯೆ ಪಡೆಯುವುದು ಕೆಲವು ಸಾರ್ವಜನಿಕರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಆಧಾರ್ ಕಾರ್ಡನ್ನು 3 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಡೆಯಬಹುದಾಗಿದೆ. ಆದರೆ, ಆಧಾರ್ ಪಡೆಯಲು ಬೇಕಾದ ಅಗತ್ಯ ದಾಖಲೆಗಳನ್ನು ನೀಡಿದರೂ ಶಾಲಾ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ನೀಡಲು ಆಕ್ಷೇಪಿಸುತ್ತಿದ್ದಾರೆ ಕೆಲ ಆಧಾರ್ ಏಜೆಂಟ್ಗಳು.
ಭವಿಷ್ಯದಲ್ಲಿ ಹಲವು ಸೌಲಭ್ಯಗಳು ಆಧಾರ್ ಕಾರ್ಡ್ ಮೂಲಕವೇ ದೊರೆಯುತ್ತವೆ ಎಂಬ ಪ್ರಚಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಧಾರ್ ಕಾರ್ಡ್ ಪಡೆಯಲು ತಮ್ಮ ಕೆಲಸ ಬಿಟ್ಟು, ಆಧಾರ್ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಆದರೆ, ಶಾಲಾ ಮಕ್ಕಳಿಗೆ ಆಧಾರ್ ನೀಡಲು ವಿಳಾಸ ದಾಖಲೆ, ಪೋಷಕರ ಸಂಪೂರ್ಣ ವಿವರದ ಹೊರತಾಗಿಯೂ, ಶಾಲೆಯಿಂದ ವಿಳಾಸ ದಾಖಲೆ ಬರೆಸಿ, ಶಾಲಾ ಮೊಹರನ್ನು ಹಾಕಿಸಿ ಬರಲು ವಿದ್ಯಾರ್ಥಿಗಳಿಗೆ ಕೆಂಗೇರಿ ವ್ಯಾಪ್ತಿಯಲ್ಲಿರುವ ಆಧಾರ್ ಏಜೆಂಟ್ಗಳು ಸೂಚನೆ ನೀಡುತ್ತಿದ್ದಾರೆ. ಆದರೆ, ಇಲ್ಲಿನ ಶಾಲೆಗಳು ಈ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳಲಾಗದು. ವಿದ್ಯಾರ್ಥಿಯು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದಾನೆ, ತರಗತಿ, ಪೋಷಕರ ನಾಮಾಂಕಿತ, ವಯಸ್ಸು ವಿವರ ಮಾತ್ರ ನೀಡುತ್ತಿವೆಯೇ ಹೊರತು, ವಿಳಾಸ ದಾಖಲೆಗೆ ತಮ್ಮ ಶಾಲೆಯ ಮೊಹರು ಹಾಕಲು ನಿರಾಕರಿಸುತ್ತಿವೆ.
ಶಾಲೆಗಳ ದಾಖಲೆಯ ಪ್ರಕಾರ ಮಕ್ಕಳ ದಾಖಲು ಸಮಯದಲ್ಲಿ ವಿಳಾಸದ ಸಂಪೂರ್ಣ ವಿವರ ನೀಡಲಾಗಿರುತ್ತದೆ. ವಿದ್ಯಾರ್ಥಿ 1ನೇ ತರಗತಿಯಿಂದ 5ನೇ ತರಗತಿಗೆ ವ್ಯಾಸಂಗ ಮುಗಿಸುವಷ್ಟರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಪೋಷಕರು ಮನೆ ಬದಲಾಯಿಸಿರುತ್ತಾರೆ. ಆದರೆ, ದಾಖಲೆಯಲ್ಲಿ ಹಳೆಯ ಮನೆ ವಿಳಾಸವೇ ಇರುತ್ತದೆ. ಹೀಗಾಗಿ ವಿಳಾಸ ದಾಖಲೆ ನೀಡುವುದು ಶಾಲೆಗಳ ಕೆಲಸವಲ್ಲ ಎಂಬುದು ಶಿಕ್ಷಣ ಸಂಸ್ಥೆಗಳ ವಾದ.
ಆಧಾರ್ಗೂ ತಟ್ಟಿದ ಚುನಾವಣೆ ಬಿಸಿ
ಚುನಾವಣೆಯ ಬಿಸಿ ಆಧಾರ್ ಕೇಂದ್ರಗಳನ್ನು ಸಹ ಬಿಟ್ಟಿಲ್ಲ. ನಗರದಲ್ಲಿ 176 ನೋಂದಣಿ ಕೇಂದ್ರಗಳಿದ್ದು, ಪ್ರತಿ ಕೇಂದ್ರದಲ್ಲಿ ತಲಾ 4 ಕಂಪ್ಯೂಟರ್ಗಳಿವೆ. ಇಲ್ಲಿ ದಿನವೊಂದಕ್ಕೆ 100-120ಮಂದಿ ನೋಂದಣಿ ಮಾಡಿಕೊಳ್ಳಲು ಸಾಧ್ಯ. ಒಬ್ಬ ವ್ಯಕ್ತಿಯ ಅಕ್ಷಿಪಟಲ, ಬೆರಳಚ್ಚು ಮುಂತಾದ ಬಯೋವುಟ್ರಿಕ್ ಮಾಹಿತಿ ಸಂಗ್ರಹಿಸಲು ಕನಿಷ್ಠ 10 ನಿಮಿಷ ಬೇಕು. ಹಾಗಾಗಿ, ನೋಂದಣಿ ಪ್ರಕ್ರಿಯೆ ನಿಧಾನವಾಗುತ್ತದೆ. ಇದಕ್ಕಾಗಿ ಟೋಕನ್ ವ್ಯವಸ್ಥೆ ಜಾರಿಯಲ್ಲಿದೆ. ಚುನಾವಣೆಯ ನೆಪವಿಟ್ಟುಕೊಂಡು ಕೆಲವು ಕಾರ್ಪೊರೇಟರ್ಗಳು ಆಧಾರ್ ಕೇಂದ್ರದಲ್ಲಿ ನೀಡಲಾಗುವ ಟೋಕನ್ಗಳನ್ನು ಸಹ ಬಳಕೆ ಮಾಡಿಕೊಂಡು ಮತದಾರರನ್ನು ಸೆಳೆಯುವ ಮತ್ತು ಕಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ತಮಗೆ ಬೇಕಾದವರಿಗೆ ಮೊದಲ 25 ಟೋಕನ್ಗಳನ್ನು ನೀಡುತ್ತಿದ್ದಾರೆ ಎಂದು ಕೆಲ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾವೂ ಆಧಾರ್ ಹೊಂದಿದ್ದೇವೆ. ಮಕ್ಕಳಿಗೆ ನಮ್ಮ ವಿಳಾಸದ ಹೊರತಾಗಿ ಇನ್ನೇನು ನೀಡಬೇಕು? ಮನೆ ವಿಳಾಸ, ಜನನ ಪ್ರಮಾಣಪತ್ರ, ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಿದರೂ ಶಾಲೆಯಿಂದ ವಿಳಾಸ ಪ್ರಮಾಣಪತ್ರ ತರಬೇಕೆನ್ನುತ್ತಿರುವುದು ಎಷ್ಟು ಸಮಂಜಸ?
- ವಿಜಯ್ಕುಮಾರ್, ಪೋಷಕರು
-ಭಾಗ್ಯ ಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

