ಬೆಂಗಳೂರು ನಗರ

ಕೆರೆಯ ಹೂಳು ಬರೀ ಗೋಳು

Published On :

ಕ.ಪ್ರ. ವಾರ್ತೆ  ಬೆಂಗಳೂರು ಮಾ, 18-
ಕೆರೆಯ ಹೂಳನು ಕೆರೆಗೆ ಚೆಲ್ಲಿ...
ಇದು ರಾಜ್ಯದ ಕೆರೆಗಳ ಪರಿಸ್ಥಿತಿ. ಏಕೆಂದರೆ ಕೆರೆಯ ನೀರನು ಕೆರೆಗೆ ಚೆಲ್ಲಲು ನೀರಿಲ್ಲ. ಆದ್ದರಿಂದ ಅಭಿವೃದ್ಧಿ ಹೆಸರಿನಲ್ಲಿ  ಕೆರೆಯ ಹೂಳನ್ನು ಕೆರೆಗೇ ಚೆಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಹೀಗಾಗಿ ಸುಮಾರು ನಾಲ್ಕು ಸಾವಿರ ಕೆರೆಗಳ ಅಭಿವೃದ್ಧಿ ಮೂರ್ನಾಲ್ಕು ವರ್ಷದಿಂದ ನಡೆಯುತ್ತಲೇ ಇದೆ.
ಹೌದು, 2009-10ನೇ ಸಾಲಿನಿಂದ ಆರಂಭವಾಗಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ 2012ರ ಡಿಸೆಂಬರ್ ಅಂತ್ಯಕ್ಕೂ ಮುಂದುವರಿದಿದೆ. ಕಳೆದ ಎರಡು ಸಾಲಿನಲ್ಲಿ ಅತಿ ಹೆಚ್ಚು ಹಣ ಬಿಡುಗಡೆ ಆಗಿದೆ. 4248 ಕೆರೆಗಳ ಅಭಿವೃದ್ಧಿಗೆ ನಾಲ್ಕು ಸಾಲಿನಲ್ಲಿ 1122.27 ಕೋಟಿ ವೆಚ್ಚವಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಲ ವೃದ್ಧಿ ಹಾಗೂ ಮಳೆ ನೀರಿ ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆರೆಗಳ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಮಾತನಾಡುತ್ತಾರೆ. ಅಷ್ಟೇ ಅಲ್ಲ ನೂರಾರು ಕೋಟಿ ಬಿಡುಗಡೆ ಬಗ್ಗೆಯೂ ಪ್ರಕಟಿಸಲಾಗುತ್ತದೆ. 'ನೀರಿಗಾಗಿ ತಾನೆ ವೆಚ್ಚ, ಮಾಡಲಿ ಬಿಡಿ' ಎಂಬ ಕಾಳಜಿಯಿಂದ ಯಾರೂ ಪ್ರತಿರೋಧಿಸುವುದಿಲ್ಲ. ಆದರೆ, ಇಂತಹ ಕೆರೆ ಅಭಿವೃದ್ಧಿ ಇಂದು ವಿಳಂಬ ನೀತಿ ಅನುಸರಿಸಿ, ಹಣ ಪೋಲು ಮಾಡುವ ಅಥವಾ ಅವ್ಯವಹಾರ ನಡೆಸುವ ತಾಣವಾಗಿ ಪರಿವರ್ತನೆಯಾಗಿವೆ.
ಕೆರೆಗಳ ದುರಸ್ತಿ, ಹೂಳು, ಅಭಿವೃದ್ಧಿ, ಪುನಶ್ಚೇತನ, ಜೀರ್ಣೋದ್ಧಾರ ಎಂದು ಕೋಟ್ಯಂತರ ರುಪಾಯಿ ವೆಚ್ಚದ ಯೋಜನೆ ಸಿದ್ಧವಾಗುತ್ತದೆ. ಇದಕ್ಕೆ ನಾಲ್ಕಾರು ವರ್ಷ ಹಣ ಬಿಡುಗಡೆ ಆಗುತ್ತಲೇ ಇರುತ್ತದೆ. ಈ ಕೆರೆಗಳ ಅಭಿವೃದ್ಧಿ ಮುಗಿಯುವ ಹಂತಕ್ಕೇ ತಲುಪುವುದಿಲ್ಲ. ಕೆರೆಯ ಅಭಿವೃದ್ಧಿ ಮುಗಿಯಿತು ಎಂದು ಅದರ ಉದ್ಘಾಟನೆಯಾದರೆ ಮತ್ತಷ್ಟು ವೆಚ್ಚ ಮಾಡಲು ಸಾಧ್ಯ ಇಲ್ಲ ಎಂಬ ದೂರಾಲೋಚನೆಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಗುತ್ತಲೇ ಇರುತ್ತದೆ. ಇದರಿಂದ ಅಲ್ಲಿ ನೀರು ಸಂಗ್ರಹ ಸಂಪೂರ್ಣ ನಿಂತುಹೋಗುತ್ತದೆ. ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಕೆರೆಯ ಮೂಲ ಆಶಯಕ್ಕೇ ಧಕ್ಕೆ ಉಂಟಾಗುತ್ತದೆ. ಅಲ್ಲದೆ, ಪರಿಸರಕ್ಕೂ ಹಾನಿ ಮಾಡುವಂತಹ ಕಾರ್ಯ ನಡೆಯುತ್ತದೆ. ನಾಲ್ಕಾರು ವರ್ಷಗಳ ನಂತರ ಅಭಿವೃದ್ಧಿಯಾದ ಮೇಲೆ ಅಲ್ಲಿಗೆ ಬರುವ ನೀರಿನ ಮೂಲವೇ ಒತ್ತುವರಿಯಾಗುತ್ತದೆ. ಇದು ಕೆರೆ ಅಭಿವೃದ್ಧಿಯಿಂದಾಗುತ್ತಿರುವ ಅಪಾಯಗಳು.
ರಾಜ್ಯದ 4248 ಕೆರೆಗಳು ಇಂತಹದ್ದೇ ಅಪಾಯ ಸ್ಥಿತಿ ಸ್ಥಿತಿಯಲ್ಲಿವೆ. 2009ರಲ್ಲಿ ಈ ಕೆರೆಗಳ ಅಭಿವೃದ್ಧಿ ಕಾಮಗಾರಿ ಹಂತಹಂತವಾಗಿ ಪ್ರಾರಂಭವಾಗಿದೆ. ಆದರೆ ಈ ಎಲ್ಲ ಕೆರೆಗಳ ಅಭಿವೃದ್ಧಿ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಾದ ದುರಸ್ತಿ, ನವೀಕರಣ, ಪುನರುಜ್ಜೀವನ ರಾಷ್ಟ್ರೀಯ ಯೋಜನೆ, ಕೆರೆ ನೀರಾವರಿ ಯೋಜನೆಗಳ ಜೀರ್ಣೋದ್ಧಾರ, ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ; ನಬಾರ್ಡ್ ಕಾಮಗಾರಿಗಳಡಿ ಕೆರೆಗಳ ಆಧುನೀಕರಣ; ಪ್ರಧಾನ ಕಾಮಗಾರಿಗಳಡಿ ಹಳೆಯ-ಒಡೆದ ಕೆರೆಗಳ ಜೀರ್ಣೋದ್ಧಾರ ಮತ್ತು ಹೂಳೆತ್ತುವುದು, ಆಧುನೀಕರಣ-ದುರಸ್ತಿ; ವಿಶೇಷ ಅಭಿವೃದ್ಧಿ ಯೋಜನೆಗಳಡಿ ಈ ಕೆರೆಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಇವೆಲ್ಲ ಮುಗಿಯುವ ಕಾಲ ಸನ್ನಿಹಿತವಾಗಿಲ್ಲ.
ಸಣ್ಣ ನೀರಾವರಿ ಖಾತೆ ಸಚಿವ ಗೋವಿಂದ ಎಂ. ಕಾರಜೋಳ ಅವರೇ ಒದಗಿಸಿರುವ ಮಾಹಿತಿ ಪ್ರಕಾರ, ಸಣ್ಣ ನೀರಾವರಿ ಇಲಾಖೆ ವತಿಯಿಂದ 2009-10ನೇ ಸಾಲಿನಲ್ಲಿ 620 ಕೆರೆಗಳು ಅಭಿವೃದ್ಧಿ ಪ್ರಾರಂಭವಾಗಿದೆ. 2010-11ರಲ್ಲಿ 472 ಕೆರೆಗಳಿಗೆ ಕಾಯಕಲ್ಪ ಆರಂಭವಾಗಿದ್ದು, 2011-12ರಲ್ಲಿ ಇಲಾಖೆಯಿಂದ 699 ಹಾಗೂ ಜಲಸಂವರ್ಧನೆ ಯೋಜನೆ ಸಂಘದ ವತಿಯಿಂದ 900 ಹಾಗೂ ಇದೇ ರೀತಿ 2012-13ರ ಸಾಲಿನಲ್ಲಿ ಇಲಾಖೆಯಿಂದ 576 ಹಾಗೂ ಸಂಘದಿಂದ 1557 ಕೆರೆಗಳ ಅಭಿವೃದ್ಧಿ ಪ್ರಾರಂಭವಾಗಿದೆ. ಈ ಕೆರೆಗಳ ಅಭಿವೃದ್ಧಿ ಕಾರ್ಯ ಈಗಲೂ ನಡೆಯುತ್ತಿದೆ. ಏಕೆಂದರೆ, ಕಳೆದ ಸಾಲಿನಲ್ಲಿ 263.91 ಕೋಟಿ ಬಿಡುಗಡೆಯಾಗಿದ್ದು, ಈ ಸಾಲಿನಲ್ಲಿ 68.90 ಕೋಟಿ ವೆಚ್ಚ ಮಾಡಲಾಗಿದೆ.
4248 ಕೆರೆಗಳ ಅಭಿವೃದ್ಧಿಗೆ 2009ರಿಂದ 2012-13ರ ಸಾಲಿನವರೆಗೆ ಒಟ್ಟು 1362.93 ಕೋಟಿ ಅನುದಾನ ಪ್ರಕಟಿಸಲಾಗಿದೆ. ಈವರೆಗೆ, 1122.27 ಕೋಟಿ ವೆಚ್ಚವನ್ನೂ ಮಾಡಲಾಗಿದೆ. ಆದರೆ, ಕೆರೆ ಅಭಿವೃದ್ಧಿ ಮುಗಿದಿಲ್ಲ. 'ಅಭಿವೃದ್ಧಿಪಡಿಸುತ್ತಿರುವ ಕೆರೆಗಳ ಸಂಖ್ಯೆ' ಕಾಲಂನಲ್ಲೇ ಇನ್ನೂ ಈ ಕೆರೆಗಳಿವೆ. ಕೆರೆಗಳ ಅಭಿವೃದ್ಧಿ ಹಾಗೂ ಹೂಳು ತೆಗೆಯುವ ಕಾರ್ಯ ತುರ್ತಾಗಿ ಆಗಬೇಕು. ಎಷ್ಟು ಬೇಗ ಸಾಧ್ಯವೋ ಅದು ಮುಗಿಯಬೇಕು. ಆಗ ಮಾತ್ರ ಅಂತರ್ಜಲ ವೃದ್ಧಿ ಹಾಗೂ ಮಳೆನೀರು ಹಿಡಿದಿಟ್ಟುಕೊಳ್ಳುವ ಕಾರ್ಯ ಆಗುತ್ತದೆ. ಆದರೆ, ಆಶಯವನ್ನು ಪಟ್ಟಭದ್ರ ಹಿತಾಸಕ್ತಿಗಳು ನುಂಗಿಹಾಕುತ್ತಿವೆ. ಪರಿಸರದ ಬಗ್ಗೆ ಮಾತಾಡುವವರು ಕಂಡರೂ ಕುರುಡಾಗಿದ್ದಾರೆ.

- ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


ಕೆರೆಯ ಹೂಳು ಬರೀ ಗೋಳು