ರು. 10ಕ್ಕೆ ಕೆಜಿ ಅಕ್ಕಿ
ಕ.ಪ್ರ.ವಾರ್ತೆ ಬೆಂಗಳೂರು ಮಾ.15-
ರಾಜ್ಯದಲ್ಲಿ ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕುಟುಂಬಗಳಿಗೂ ಸರ್ಕಾರದಿಂದ ರು. 10ಕ್ಕೆ ಒಂದು ಕೆ.ಜಿ. ಅಕ್ಕಿ ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ, ಬಹುತೇಕರಿಗೆ ಈ ಕುರಿತು ಮಾಹಿತಿಯೇ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜೀವರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಏರ್ಪಡಿಸಿದ್ದ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದರು.
ಕಳಪೆಯಾಗಿದ್ದಲ್ಲಿ ಹಿಂದಿರುಗಿಸಿ: ಪ್ರತಿಯೊಂದು ವಸ್ತುವಲ್ಲೂ ಆಯ್ಕೆ ಹಾಗೂ ಗುಣಮಟ್ಟ ಪರಿಶೀಲನೆ ಗ್ರಾಹಕರ ಹಕ್ಕು. ನೀವು ಖರೀದಿಸುವ ಅಕ್ಕಿ ಕಳಪೆಯಾಗಿದ್ದಲ್ಲಿ ಮುಲಾಜಿಲ್ಲದೆ ಅದನ್ನು ಹಿಂದಿರುಗಿಸಿ ಪರಿಹಾರ ಪಡೆಯಿರಿ. ಪರಿಹಾರ ದೊರಕದಿದ್ದಲ್ಲಿ ಇಲಾಖೆಗೆ ದೂರು ನೀಡಿ ಎಂದು ಅವರು ಕರೆ ನೀಡಿದರು.
ಗ್ರಾಹಕರಿಗೂ ಜವಾಬ್ದಾರಿಯಿದೆ: ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ. ಕಾನೂನಿನಲ್ಲಿ ಇದಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ, ಇವು ಸೂಕ್ತವಾಗಿ ಜಾರಿಗೆ ಬರಬೇಕಿದ್ದಲ್ಲಿ ಗ್ರಾಹಕರು ಕೂಡ ತಮ್ಮ ಜವಾಬ್ದಾರಿಯನ್ನು ಅರಿಯಬೇಕಿದೆ. ಯಾವುದೇ ವಸ್ತು ಖರೀದಿಸಿದಲ್ಲಿ ಅದಕ್ಕೆ ರಸೀತಿ ಪಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ. ಪೆಟ್ರೋಲ್ ಬಂಕ್ಗಳಲ್ಲಿ ಕೂಡ ಮುದ್ರಿತ ರಸೀತಿ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಎಷ್ಟು ಜನರು ಅದರ ಉಪಯೋಗ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆಗೆ ನಿರಾಸೆಯ ಉತ್ತರ ದೊರೆಯುತ್ತದೆ. ಗ್ರಾಹಕರು ತಮ್ಮ ಜವಾಬ್ದಾರಿ ನಿಭಾಯಿಸದೆ ವ್ಯವಸ್ಥೆಯನ್ನು ದೂರುವುದರಲ್ಲಿ ಅರ್ಥವಿಲ್ಲ ಎಂದರು.
ಗ್ರಾಹಕರ ಕ್ಲಬ್: ಶಾಲಾ ಮಕ್ಕಳಿಗೆ ಗ್ರಾಹಕರ ಹಕ್ಕುಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಶಾಲೆಗಳಲ್ಲಿ ಗ್ರಾಹಕರ ಕ್ಲಬ್ ಸ್ಥಾಪಿಸುವ ನೂತನ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಈಗಾಗಲೇ 1150 ಶಾಲೆಗಳಲ್ಲಿ ಕ್ಲಬ್ ಸ್ಥಾಪನೆಯಾಗಿದೆ. ಇನ್ನು 884 ಶಾಲೆಗಳಲ್ಲಿ ತಯಾರಿ ನಡೆಯುತ್ತಿದೆ. ಇವುಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ದೊರೆಯುತ್ತಿದೆ. ಈ ಯೋಜನೆಯನ್ನು ಎಲ್ಲಾ ಶಾಲೆಗಳು ಅಳವಡಿಸಿಕೊಳ್ಳಬೇಕು ಎಂಬುದು ನಮ್ಮ ಆಶಯ ಎಂದರು.
ಅಕ್ರಮ ಪಡಿತರ ಚೀಟಿ ದಂಧೆ ತಡೆಯಲು ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಇಲ್ಲಿಯವರೆಗೆ ಸುಮಾರು 17,300 ಪ್ರಕರಣಗಳು ದಾಖಲಾಗಿದ್ದು, 17.24 ಕೋಟಿ ದಂಡ ಪಡೆಯಲಾಗಿದೆ. ಈ ಕುರಿತು ಇನ್ನಷ್ಟು ತನಿಖೆಯಾಗಬೇಕಿದ್ದು, ಸದ್ಯ ಇರುವ ತನಿಖಾ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ತರಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎಂ.ಪ್ರಕಾಶ್ಖಂಡ್ರೆ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಅಶ್ವತ್ಥನಾರಾಯಣಗೌಡ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

