ಬೆಂಗಳೂರು ನಗರ

ಏಳರ ಮೇಲೆ ಮತ್ತೊಂದು...ಅಯ್ಯಪ್ಪ!

Published On :

ಬೆಂಗಳೂರು: ಅಧಿಕಾರ ದುರುಪಯೋಗಡಿಪಸಿಕೊಂಡು ಸರ್ಕಾರಿ ಜಮೀನು ಪರಭಾರೆ ಮಾಡಿರುವ ಆರೋಪ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ ಡಿಸಿ ಎಂ.ಕೆ.ಅಯ್ಯಪ್ಪ ಅವರು ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈಗಾಗಲೇ ಅಧಿಕಾರ ದುರುಪಯೋಗ, ಲಂಚ ಪಡೆದ ಆರೋಪ ಸೇರಿ ಏಳು ಪ್ರಕರಣಗಳನ್ನು ಎದುರಿಸುತ್ತಿರುವ ಅಯ್ಯಪ್ಪ ಅವರು, ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ 2012ರ ಜು.27 ರಂದು ಆಟೋ ರಹದಾರಿ ವರ್ಗಾವಣೆ ಸಂಬಂಧ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ನಿರ್ಣಯ ಕೈಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಫೈನಾನ್ಸರ್ಗಳು, ಡೀಲರ್ಗಳಿಂದ ಅಕ್ರಮವಾಗಿ ಹಣ ಪಡೆದು ಬಡ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆಯುವಂತಹ ನಿರ್ಣಯವನ್ನು ಅಯ್ಯಪ್ಪ ಕೈಗೊಂಡಿದ್ದರು ಎಂದು ಆಟೋ ಚಾಲಕ ಸಮೀವುಲ್ಲಾ ಆರೋಪಿಸಿದ್ದಾರೆ.
ಏನಿದು ಪ್ರಕರಣ?: ಬಡ ಆಟೋ ಚಾಲಕರ ಹಿತಾಸಕ್ತಿ ಕಾಪಾಡಲು ಹಾಗೂ ಒಬ್ಬ ಚಾಲಕನಿಗೆ ಒಂದೇ ಆಟೋ ಇರಬೇಕು ಎಂದು ಅಂದಿನ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದರಂತೆ ಮೋಟಾರು ವಾಹನ ನಿಯಮಾವಳಿ 1989ರ ಪ್ರಕಾರ ವ್ಯಕ್ತಿಯೊಬ್ಬರು ಆಟೋ ಪರವಾನಗಿ ಹೊಂದಿದ್ದರೆ ಅದನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವಂತಿಲ್ಲ.
ಬೆಂಗಳೂರಿನ ಜನಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಳವಾಗುವ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2011, ಮಾ.23 ರಂದು 40 ಸಾವಿರ ಆಟೋಗಳಿಗೆ ಪರವಾನಗಿ ನೀಡಿತು. ಕೆಲವು ಷರತ್ತುಗಳ ಆಧಾರದ ಮೇಲೆ ಪರವಾನಗಿ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿತು. ಅದರಲ್ಲಿ ಆಟೋ ಚಾಲನಾ ಅನುಜ್ಞಾ ಪತ್ರ ಹೊಂದಿರತಕ್ಕಂತಹ ಅಭ್ಯರ್ಥಿಗಳಿಗೆ ಮಾತ್ರ ಪರವಾನಗಿ ಮಂಜೂರು ಮಾಡತಕ್ಕದ್ದು. ಹಾಗೂ ಈಗಾಗಲೇ ಆಟೋ ಪರವಾನಗಿ ಹೊಂದಿರುವವರಿಗೆ ಪುನಃ ನೀಡತ್ತಕ್ಕದ್ದಲ್ಲ ಎಂದು ಆದೇಶಿಸಿತ್ತು.
ಆದರೆ ಇದನ್ನು ಪ್ರಶ್ನಿಸಿ ಆಟೋ ಡೀಲರ್ಗಳು, ಫೈನಾನ್ಸರ್ಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಹೈಕೋರ್ಟ್ ಆಟೋ ಡೀಲರ್ಗಳ ವಾದವನ್ನು ತಿರಸ್ಕರಿಸಿತ್ತು. ಬಳಿಕ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಆಟೋ ಡೀಲರ್ಗಳು ಅರ್ಜಿ ಸಲ್ಲಿಸಿದರು. ಅಲ್ಲೂ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಸರಿ ಇದೆ ಎನ್ನುವ ಆದೇಶ ಬಂತು.
ಸರ್ಕಾರದ ಆದೇಶದಂತೆ ನಿರ್ಣಯ ಕೈಗೊಳ್ಳಬೇಕಾದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ  ಅಂದಿನ ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ರಾಜ್ಯ ಸರ್ಕಾರದ ಆದೇಶವನ್ನು ತಿರುಚಿರುವ ಆರೋಪವಿದೆ.
ಸರ್ಕಾರ ಆಟೋರಿಕ್ಷಾ ಚಾಲನ ಅನುಜ್ಞಾಪತ್ರ ಹೊಂದಿದವರಿಗೆ ಮಾತ್ರ ನೀಡಬೇಕು ಎಂದು ಆದೇಶವಿದ್ದರೆ ಅಯ್ಯಪ್ಪ ಅವರು ಕೈಗೊಂಡಿರುವ ನಿರ್ಣಯದಲ್ಲಿ ಅದು 'ಈಗಾಗಲೇ ಆಟೋ ಪರವಾನಗಿ ಹೊಂದಿರುವವರಿಗೆ ಪುನಃ ಪರವಾನಗಿ ವರ್ಗಾವಣೆಯನ್ನು ಮಂಜೂರು ಮಾಡತಕ್ಕದ್ದಲ್ಲ. ಹಾಗೂ ಈಗಾಗಲೇ ಆಟೋ ಪರವಾನಗಿ ಹೊಂದಿರುವವರು ಪುನಃ ಪರವಾನಗಿ ನೀಡತಕ್ಕದ್ದಲ್ಲ' ಎಂದು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಈ ನಿರ್ಣಯಕ್ಕೆ ಪ್ರಾಧಿಕಾರದ ಸದಸ್ಯರಾಗಿರುವ ಸಂಚಾರ ವಿಭಾಗದ ಪೂರ್ವ ವಿಭಾಗದ ಡಿಸಿಪಿ ಸಹಿ ಮಾಡಿದ್ದಾರೆ.
ಆದರೂ ಇದು ಸರ್ಕಾರ ಹಾಗೂ ಹೈಕೋರ್ಟ್ನ ಆದೇಶದ ಉಲ್ಲಂಘನೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಅವರು ನಿರ್ಣಯಕ್ಕೆ ಸಹಿಯನ್ನೇ ಹಾಕಿಲ್ಲ.


ಫೈನಾನ್ಸ್ ಆಧಾರದ ಮೇಲೆ ಆಟೋ
ಬಡ ಆಟೋ ಚಾಲಕರು ಡೀಲರ್ಸ್ಗಳ ಬಳಿ ಫೈನಾನ್ಸ್ ಆಧಾರದ ಮೇಲೆ ಆಟೋ ಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ತಿಂಗಳ ಕಂತು ಕಟ್ಟಲು ಸಾಧ್ಯವಾಗುವುದಿಲ್ಲ. ಅಂತಹ ಆಟೋಗಳನ್ನು ಫೈನಾನ್ಸ್ ಕಂಪನಿಗಳು ವಶ ಪಡಿಸಿಕೊಳ್ಳುತ್ತವೆ. ಬಳಿಕ ಅದಾಗಲೇ ಒಂದು ಆಟೋ ಪರ್ಮಿಟ್ ಹೊಂದಿದವರಿಗೆ ಮತ್ತೆ ಮಾರಾಟ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಾಡಲು ಈ ನಿರ್ಣಯ ಕೈಗೊಳ್ಳಲಾಗಿದೆ.


ಈಗಾಗಲೇ ಒಂದು ಪರ್ಮಿಟ್ ಹೊಂದಿದವರು ಮತ್ತೊಂದು ಪರ್ಮಿಟ್ ಪಡೆದುಕೊಳ್ಳಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಎಂ.ಕೆ.ಅಯ್ಯಪ್ಪ ನಿರ್ಣಯ ಕೈಗೊಂಡಿದ್ದಾರೆ. ಈ ಮೂಲಕ ಬಡ ಆಟೋ ಚಾಲಕರಿಗೆ ಅನ್ಯಾಯ ಎಸಗಲಾಗಿದೆ. ಹೀಗಾಗಿ ಈಗಿನ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಪರಿಶೀಲಿಸಬೇಕು.
- ಸಮೀವುಲ್ಲಾ, ಆಟೋಚಾಲಕ

- ಮಂಜುನಾಥ ನಾಗಲೀಕರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.