ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಕ.ಪ್ರ. ವಾರ್ತೆ, ಬೆಂಗಳೂರು, ಜು.29 -
ಮಹದೇವಪುರದ ಚಿನ್ನಪ್ಪನಹಳ್ಳಿಯ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗಾಯತ್ರಿ ದೇವಿ (30) ಮೃತರು. ನಾಲ್ಕೈದು ದಿನಗಳ ಹಿಂದೆ ಆಕೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಗಾಯತ್ರಿ ಪೋಷಕರು ಆಂಧ್ರದ ಚಿತ್ತೂರಿನಲ್ಲಿದ್ದು, ಗಾಯತ್ರಿ ಅವರ ಎರಡೂ ಮೊಬೈಲ್ ನಂಬರ್ ಸ್ವಿಚ್‌ಆಫ್ ಆಗಿದ್ದ ಕಾರಣ, ಅನುಮಾನಗೊಂಡ ಪೋಷಕರು ಬೆಂಗಳೂರಿಗೆ ಬಂದು ಮನೆಗೆ ಹೋಗಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ.
ಗಾಯತ್ರಿ ಅವರ ಮನೆ ಬಾಗಿಲು ಒಳಗಿನಿಂದ ಬೀಗ ಹಾಕಿತ್ತು. ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಾಗಿಲು ಒಡೆದು ಒಳಹೋಗಿ ನೋಡಿದಾಗ ಎರಡೂ ಕೈಗಳನ್ನು ಸೀರೆಯಿಂದ ಕಟ್ಟಿದ್ದು, ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯಲ್ಲಿದ್ದ ಬೀರುವಿನ ಬಾಗಿಲು ಒಡೆದಿದ್ದು, ಆಭರಣ ಕಳವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಪರಿಚಯಸ್ಥರಿಂದ ಕೊಲೆಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆಯ ಮನೆಯ ಬೀಗ ಪತ್ತೆಯಾಗಿಲ್ಲ. ಹಾಗಾಗಿ ಒಳಗಿನಿಂದ ಅಥವಾ ಹೊರಗಿನಿಂದ ಬೀಗ ಹಾಕಿದ್ದ ಬಗ್ಗೆ ಮಾಹಿತಿ ಇಲ್ಲ. ಗಾಯತ್ರಿ ಅವರು ನಾಲ್ಕನೇ ಮಹಡಿಯಲ್ಲಿ ವಾಸಿಸುತ್ತಿದ್ದ ಕಾರಣ ಮಾಲೀಕರಿಗೂ ಅವರ ಬಗ್ಗೆ ಮಾಹಿತಿ ಇರಲಿಲ್ಲ. ಸಣ್ಣ ಕೊಠಡಿಗೆ ಇದ್ದ ಒಂದು ಬಾಗಿಲು ಹಾಗೂ ಕಿಟಕಿ ಹಾಕಿದ್ದರಿಂದ ಕೊಳೆತ ವಾಸನೆಯೂ ಬಂದಿರಲಿಲ್ಲ ಎನ್ನಲಾಗಿದೆ.
ಆಂಧ್ರ ಮೂಲದ ಭಾಸ್ಕರ್ ಹಾಗೂ ಗಾಯತ್ರಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಭಾಸ್ಕರ್ ಎಚ್‌ಎಎಲ್‌ನ ಕ್ಯಾಂಟೀನ್‌ನಲ್ಲಿ ಬಾಣಸಿಗನಾಗಿ ಕೆಲಸ ನಿರ್ವಹಿಸುತ್ತಿದ್ದರು. ಆರು ವರ್ಷದ ಹಿಂದೆ ಕ್ಯಾಂಟೀನ್‌ನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಮೃತಪಟ್ಟಿದ್ದರು.
ದಂಪತಿಗೆ 12 ವರ್ಷದ ಮಗನಿದ್ದು, ಗಾಯತ್ರಿ ಅವರು ಪುತ್ರನನ್ನು ತವರಿನಲ್ಲಿ ಬಿಟ್ಟಿದ್ದು, ಬೆಂಗಳೂರಿನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಕೆಲ ದಿನಗಳವರೆಗೆ ಅದೇ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಗಾಯತ್ರಿ ಕಳೆದ ಒಂದು ವರ್ಷದಿಂದ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ.
ಈ ನಡುವೆ ಪ್ರತಿನಿತ್ಯ ಪೋಷಕರಿಗೆ ಕರೆ ಮಾಡಿ ಪುತ್ರನ ಯೋಗಕ್ಷೇವು ವಿಚಾರಿಸಿಕೊಳ್ಳುತ್ತಿದ್ದರು. ಕಳೆದ ನಾಲ್ಕೈದು ದಿನಗಳಿಂದ ಕರೆ ಮಾಡಿರಲಿಲ್ಲ ಎಂದು ಗಾಯತ್ರಿ ಅವರ ಪೋಷಕರು ತಿಳಿಸಿದ್ದಾರೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

