ಬೆಂಗಳೂರು ನಗರ

ಶೆಟ್ಟರ್‌ಗೆ ಮಾನ ಮರ್ಯಾದೆ ಇದ್ದರೆ ರಾಜಿನಾಮೆ ನೀಡಲಿ

Published On :

ಬೆಂಗಳೂರು: 'ನನ್ನ ಬೆಂಬಲಿಗ ಶಾಸಕರ ರಾಜಿನಾಮೆ ಬಳಿಕ ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಮಾನ ಮರ್ಯಾದೆ ಇದ್ದರೆ ಆತ ರಾಜಿನಾಮೆ ನೀಡಲಿ. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಸರ್ಕಾರದ ಸಚಿವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ'.
ತಮ್ಮ ಬೆಂಬಲಿಗರು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲು ಹೋದಾಗ ಅದನ್ನು ಸ್ವೀಕರಿಸಲು ಸ್ಪೀಕರ್ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಸಿಟ್ಟಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಕ್ರೋಶದ ನುಡಿಗಳಿವು.
ಸಿಟ್ಟಿನ ಭರದಲ್ಲಿ ಒಂದೆರಡು ಬಾರಿ ಏಕವಚನ ಬಳಸಿದ  ಯಡಿಯೂರಪ್ಪ ಅವರು, ರಾಜ್ಯಕ್ಕೆ ಅವಮಾನವಾಗುವ ಕೆಲಸ ಮಾಡಬೇಡ. ಜನಾದೇಶಕ್ಕೆ ಮನ್ನಣೆ ಕೊಟ್ಟು ರಾಜಿನಾಮೆ ನೀಡಿ ಎಂದು ಶೆಟ್ಟರ್‌ರನ್ನು ಆಗ್ರಹಿಸಿದರು.
ಯಡಿಯೂರಪ್ಪ ಅವರು ಹೇಳಿದ್ದಿಷ್ಟು: ರಾಜ್ಯದ ಇತಿಹಾಸದಲ್ಲೇ ಈ ರೀತಿಯ ಲಜ್ಜೆಗೆಟ್ಟ ಸರ್ಕಾರವನ್ನು ಇದುವರೆಗೆ ನೋಡಿಲ್ಲ. ಮೊದಲೇ ಮಾಹಿತಿ ನೀಡಿ 14 ಶಾಸಕರು ರಾಜಿನಾಮೆ ಕೊಡಲು ಬಂದರೆ ಸರ್ಕಾರದವರು ರಾತ್ರೋರಾತ್ರಿ ವಿಧಾನಸಭೆ ಅಧ್ಯಕ್ಷರನ್ನು ಬೇರೆ ದೇಶಕ್ಕೆ ಕಳುಹಿಸುತ್ತಾರೆ. ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ರಾಜ್ಯಪಾಲರನ್ನು ಭೇಟಿಯಾಗಿ ರಾಜಿನಾಮೆ ಸಲ್ಲಿಸುವ ಬದಲು ಲಜ್ಜೆಗೆಟ್ಟು ರಾಜ್ಯ ಪ್ರವಾಸಕ್ಕೆ ಹೊರಟಿದ್ದಾರೆ. ರಾಜಿನಾಮೆ ನೀಡಲು 13 ಶಾಸಕರು ಸ್ಪೀಕರ್ ಕಚೇರಿಯಲ್ಲಿ ಕುಳಿತಿರುವಾಗ ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿಗಳು ಅದು ಹೇಗೆ ರಾಜ್ಯ ಪ್ರವಾಸ ಮಾಡುತ್ತಾರೆ?
ಲಜ್ಜೆಗೆಟ್ಟ ಮುಖ್ಯಮಂತ್ರಿಗೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ. ಅವನಿಗೆ ಮಾನ ಮರ್ಯಾದೆ ಇದ್ದರೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು. ಅಷ್ಟೇ ಅಲ್ಲ, ಬಹುಮತ ಇಲ್ಲದಿದ್ದರೂ ಲಜ್ಜೆಗೆಟ್ಟು ಪ್ರವಾಸ ಮಾಡುತ್ತಿರುವ ಮುಖ್ಯಮಂತ್ರಿಗಳು ಕೂಡಲೇ ವಾಪಸ್ ಬರಬೇಕು. ಒಂದು ವೇಳೆ ಮುಖ್ಯಮಂತ್ರಿಯಾಗಲೀ, ಸಂಪುಟ ಸದಸ್ಯರೇ ಆಗಲಿ ಯಾವುದಾದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಜನರೇ ಅವರಿಗೆ ಛೀಮಾರಿ ಹಾಕಿ ವಾಪಸ್ ಬೆಂಗಳೂರಿಗೆ ಕಳುಹಿಸಬೇಕು. ಕಾರ್ಯಕ್ರಮಗಳನ್ನು ಬಹಿಷ್ಕರಿಸಬೇಕು.
ರಾಜಿನಾಮೆ ಕೊಡಲು ಬಂದರೆ ಸ್ಪೀಕರ್ ಕೊಠಡಿಯಲ್ಲಿ ಸಿಬ್ಬಂದಿ, ಅಧಿಕಾರಿಗಳೇ ಇಲ್ಲ. ಬಂದವರೂ ತಮಗೆ ರಾಜೀನಾಮೆ ಪತ್ರ ಸ್ವೀಕರಿಸಲು ಅಧಿಕಾರವಿಲ್ಲ ಎಂದು ಹೇಳುತ್ತಾರೆ. ಅಧಿಕಾರ ಇಲ್ಲ ಎಂದು ಬರೆದುಕೊಡಿ, ಈ ಬಗ್ಗೆ ಲಿಖಿತವಾಗಿ ಹೇಳಿ ಎಂದರೆ ಅದಕ್ಕೂ ಸ್ಪಂದಿಸುತ್ತಿಲ್ಲ. ಸಚಿವರು ಮಂಗಳವಾರವೇ ಸ್ಪೀಕರ್‌ಗೆ ಮಾಹಿತಿ ನೀಡಿ, ಬುಧವಾರ ಬರುವುದಾಗಿ ಶಾಸಕರು ಹೇಳಿದ್ದಾರೆ. ಆಗ ಸ್ಪೀಕರ್ ಕೂಡ ಸಮ್ಮತಿಸಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ರಾತ್ರೋ ರಾತ್ರಿ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದು ಹೇಗೆ? ಇದರಲ್ಲಿ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.