ಬೆಂಗಳೂರು ನಗರ

ದಿಢೀರ್ ದಾಳಿ; 50 ಬಾಲ ಕಾರ್ಮಿಕರ ರಕ್ಷಣೆ

Published On :

ಬೆಂಗಳೂರು: ಅಪ್ರಾಪ್ತರನ್ನು ದುಡಿಮೆಗೆ ಬಳಸಿಕೊಳ್ಳುತ್ತಿದ್ದ ನಗರದ 4 ಫ್ಯಾಕ್ಟರಿಗಳ ಮೇಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಸಿ. ಪ್ರಕಾಶ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ 50 ಮಕ್ಕಳನ್ನು ರಕ್ಷಿಸಿದ್ದಾರೆ.
ನಗರದ ಕೆ.ಆರ್. ಮಾರುಕಟ್ಟೆ ಪ್ರದೇಶದ ಜಾಲಿ ಮೊಹಲ್ಲಾದಲ್ಲಿ 7 ರಿಂದ 14 ವರ್ಷದ ಒಳಗಿನ 50ಕ್ಕೂ ಹೆಚ್ಚು ಮಕ್ಕಳನ್ನು ಅಗರ್‌ಬತ್ತಿ ಕಾರ್ಖಾನೆ, ಶಾಲಾ ಬ್ಯಾಗ್ ಹೊಲಿಯುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಈ ಸಂಬಂಧ ಬಚ್ಪನ್ ಬಚಾವೋ ಆಂದೋಲನ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಓರಿಸ್ಸಾ, ಪಂಜಾಬ್, ಅಸ್ಸಾಂ ಹಾಗೂ ಬಿಹಾರ ಜಿಲ್ಲೆಗಳ 6 ರಿಂದ 14 ವರ್ಷದ ಒಳಗಿನ ಬಾಲಕ- ಬಾಲಕಿಯರನ್ನು ಇಲ್ಲಿ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. ಸ್ವಚ್ಚತೆ, ನೈರ್ಮಲ್ಯ ಇಲ್ಲದ ಕೇವಲ 8/8 ಅಳತೆಯ ಗೂಡಿನಂತಿರುವ ಫ್ಯಾಕ್ಟರಿಗಳಲ್ಲಿ 15 ರಿಂದ 18 ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿತ್ತು. 12 ರಿಂದ 15 ತಾಸು ಕಾಲ ಕೆಲಸ ಮಾಡುತ್ತಿದ್ದ ಈ ಮಕ್ಕಳನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.
ಸರಿಯಾಗಿ ಊಟ ನೀಡದೆ ಸಂಬಳವನ್ನೂ ನೀಡುತ್ತಿರಲಿಲ್ಲ. ಪೋಷಕರಿಗೆ 5 ಸಾವಿರ ನೀಡಿ ಶಿಕ್ಷಣ ಹಾಗೂ ಹೊಲಿಗೆ ತರಬೇತಿ ನೀಡುವ ಭರವಸೆ ನೀಡಿ ಮಕ್ಕಳನ್ನು ನಗರಕ್ಕೆ ಕರೆತರುತ್ತಿದ್ದ ದುಷ್ಕರ್ಮಿಗಳು, ಅವರನ್ನು ಜೀತಕ್ಕಿಟ್ಟುಕೊಳ್ಳುತ್ತಿದ್ದರು. ಬಳಿಕ ಅವರ ಪೋಷಕರೊಂದಿಗೆ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ದುಡಿಮೆಗೆ ಬಳಸಿಕೊಂಡಿರುವ ಫ್ಯಾಕ್ಟರಿ ಮಾಲೀಕರ ವಿರುದ್ಧ ಅಕ್ರಮ ಬಂಧನ, ಬಾಲ ಕಾರ್ಮಿಕ ಕಾಯ್ದೆ, ಮಕ್ಕಳ ಹಕ್ಕುಗಳ ಉಲ್ಲಂಘನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.
ದಾಳಿ ನಡೆಯುತ್ತಿದ್ದಂತೆ ಫ್ಯಾಕ್ಟರಿಗಳ ಮಾಲೀಕರು ನಾಪತ್ತೆಯಾಗಿದ್ದು ಮೇಲ್ವಿಚಾರಕರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಮಕ್ಕಳ ಆರೋಗ್ಯ ಸಂಬಂಧ ವೈದ್ಯರ ತಂಡ ತಪಾಸಣೆ ನಡೆಸುತ್ತಿದೆ.
ಗುಪ್ತ ಕಾರ್ಯಾಚರಣೆ:  ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುತ್ತಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೇ ಸ್ವತಃ ಈ ಸಂಬಂಧ ಖಚಿತಪಡಿಸಿಕೊಳ್ಳಲು ಕೆಲ ಬಾರಿ ಸ್ಥಳ ಪರಿಶೀಲನೆ ನಡೆಸಿದ್ದರು. ಕಲುಷಿತ ವಾತಾವರಣದಲ್ಲಿ ಮಕ್ಕಳು ದುಡಿಮೆಗೆ ಇರುವುದು ಖಚಿತವಾಗುತ್ತಿದ್ದಂತೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಚ್ಪನ್ ಬಚಾವೋ ಆಂದೋಲನ ಸದಸ್ಯರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೆಲ ಬಾಲಕರು ಸ್ಥಳದಿಂದ ನಾಪತ್ತೆಯಾಗಿದ್ದಾರೆ.
ಮರಳಿ ಪೋಷಕರ ಬಳಿ:  ರಕ್ಷಿಸಿರುವ ಮಕ್ಕಳನ್ನು ಮರಳಿ ಪೋಷಕರ ಮಡಿಲಿಗೆ ಸೇರಿಸುವ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದು ಸಂಬಂಧಪಟ್ಟ ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಜಿ.ಸಿ. ಪ್ರಕಾಶ ತಿಳಿಸಿದ್ದಾರೆ. ಈ ಹಿಂದೆಯೂ ಬಾಗಲೂರು ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ 20 ಮಕ್ಕಳನ್ನು ರಕ್ಷಿಸಿ ವಾಪಸ್ ಪೋಷಕರಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.