ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್
ಬೆಂಗಳೂರು: ಭೂ ವಿವಾದಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿ ಸದಸ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿದ್ದ ಅರ್ಜಿಯನ್ನು ನಿಗದಿತ ಸಮಯದಲ್ಲಿ ಇತ್ಯರ್ಥಗೊಳಿಸದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಮುಸ್ಲಿಂ ಸಂಘರ್ಷ ಸಮಿತಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್. ಕುಮಾರ್ ಹಾಗೂ ನ್ಯಾ. ಸೂರಿ ಅಪ್ಪಾರಾವ್ ಅವರಿದ್ದ ವಿಭಾಗೀಯ ಪೀಠ, ವಿಚಾರಣೆಯನ್ನು ಮುಂದೂಡಿದೆ. ಲಾಲ್ಬಾಗ್ ಬಳಿಯ 2 ಎಕರೆ 3 ಗುಂಟೆ ಜಮೀನು ಕಬಳಿಸಲು ಯತ್ನಿಸಿದ ವಕ್ಫ್ ಸದಸ್ಯರ ವಿರುದ್ಧದ ಆರೋಪದಲ್ಲಿ ಸತ್ಯಾಂಶಗಳಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುಮತಿ ನೀಡುವಂತೆ ಕೋರಿ ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಕಳೆದೆರಡು ತಿಂಗಳಿಂದ ಬಾಕಿ ಉಳಿದಿದೆ. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಎರಡು ತಿಂಗಳಲ್ಲಿ ಅರ್ಜಿಯನ್ನು ಪರಿಗಣಿಸುವಂತೆ ಆದೇಶಿಸಿತ್ತು. ಆದರೆ, ಸರ್ಕಾರ ಆದೇಶ ಪಾಲಿಸಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ವಿವಾದವೇನು?: ಲಾಲ್ಬಾಗ್ ಬಳಿಯಲ್ಲಿ ತಮಗೆ ಸೇರಿದ 2 ಎಕರೆ 3 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ವ್ಯಕ್ತಿಯೋರ್ವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಪ್ರತಿವಾದಿಯಾಗಿ ಸೇರ್ಪಡೆಗೊಂಡಿದ್ದ ವಕ್ಫ್ ಮಂಡಳಿ, ಅದು ತಮಗೆ ಸೇರಿದ ಜಾಗ ಎಂದು ತಕರಾರು ತೆಗೆದಿದ್ದರು. ಈ ನಡುವೆ, ಮುಸ್ಲಿಂ ಸಂಘರ್ಷಸಮಿತಿ ಮಂಡಳಿ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ವಕ್ಫ್ ಮಂಡಳಿ ಸದಸ್ಯರು ಭೂಮಿ ಕಬಳಿಸಲು ಹೊಂಚು ಹಾಕಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಸರ್ಕಾರದ ಅನುಮತಿ ಕೋರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

