ಸಿಲಿಕಾನ್ ಸಿಟಿಗೆಸು'ಯೋಗ'
ಬೆಂಗಳೂರು: ಆಧುನೀಕರಣ ಹಾಗೂ ನಗರೀಕರಣದ ಭರಾಟೆ ಅದೆಷ್ಟೇ ಇದ್ದರೂ ಪರಂಪರಾಗತ ಯೋಗಕ್ಕೆ ಮಾತ್ರ ಹಿನ್ನಡೆಯಾಗಿಲ್ಲ.
ಹಾಗಾಗಿ, ಆಧುನಿಕತೆ ಹಾಗೂ ನಗರೀಕರಣದ ಎಲ್ಲಾ ಬೆಳವಣಿಗೆ, ಅದರ ಪ್ರಭಾವ-ಪಾರುಪತ್ಯದ ನಡುವೆಯೂ ಪರಂಪರಾಗತ 'ಯೋಗ'ಕ್ಕೆ ಈಗ 'ಸುಯೋಗ' ಉಂಟಾಗಿದೆ..!
ಹೌದು, ಕಳೆದ ಕೆಲ ವರ್ಷಗಳಿಂದ ಯೋಗಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ನಗರದಲ್ಲೀಗ ಯೋಗ ತರಬೇತಿ ಪಡೆಯುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ.
ಹಿಂದೆ ಒಂದು ಕಾಲದಲ್ಲಿ ತೀರಾ ವಯಸ್ಸಾದವರಿಗೆ ಮಾತ್ರ ಯೋಗ ಸೀಮಿತ ಎಂಬ ವಾತಾವರಣವಿತ್ತು. ಹಾಗಾಗಿ ನಗರದಲ್ಲಿ ಅತಿ ವಿರಳ ಎಂಬಂತೆ ಯೋಗ ತರಬೇತಿ ಕೇಂದ್ರಗಳಿದ್ದವು.
ಈಗ ಪರಿಸ್ಥಿತಿ ಬದಲಾಗಿದ್ದು, ಅಬಾಲವೃದ್ಧರಾಗಿ ಎಲ್ಲರೂ ಯೋಗ ಕಲಿಯುವತ್ತ ಒಲವು ತೋರುತ್ತಿದ್ದಾರೆ. ಪರಿಣಾಮ, ನಗರದಲ್ಲಿ ಎಲ್ಲೆಂದರಲ್ಲಿ ಯೋಗ ತರಬೇತಿ ಶಿಬಿರಗಳು ತಲೆ ಎತ್ತಿವೆ.
ಮನೋದೈಹಿಕ ಸಮಸ್ಯೆ: ಆಧುನೀಕರಣದ ಫಲವಾಗಿ ಇಂದು ಬಹುತೇಕ ಎಲ್ಲರೂ ಗಡಿಬಿಡಿಯ ಜೀವನಶೈಲಿ, ಸದಾ ಕೆಲಸದ ಚಿಂತೆಯಿಂದಾಗಿ ಮಾನಸಿಕ ಒತ್ತಡಕ್ಕೆ ಈಡಾಗುತ್ತಿದ್ದಾರೆ.
ಇಂದು ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಬಹುತೇಕರ ಅನಾರೋಗ್ಯಕ್ಕೆ ಮನಸ್ಸೇ ಕಾರಣ ಎಂಬುದು ಸಾಬೀತಾಗಿದೆ.
ಜತೆಗೆ ದೇಶದ ಶೇ. 80ರಷ್ಟು ರೋಗಿಗಳಲ್ಲಿ ರೋಗ ಮನೋದೈಹಿಕವಾದದ್ದು. ದೈಹಿಕ ಏರುಪೇರಿನಿಂದ ಬರುವಂತಹ ಕಾಯಿಲೆಗಳು ಶೇ. 20ರಷ್ಟು ಮಾತ್ರ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೆಲ ವರ್ಷಗಳ ಹಿಂದೆ ಹೇಳಿದೆ.
ಹಾಗಾಗಿ ದೈಹಿಕ ಅನಾರೋಗ್ಯದ ಸಮಸ್ಯೆಗಳು ಬರದಂತೆ ನೋಡಿಕೊಳ್ಳಲು ಮನಸ್ಸಿನ ಆರೋಗ್ಯ ಸುಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಅಗತ್ಯ. ಹಾಗೆ ಮನಸ್ಸನ್ನು ಆರೋಗ್ಯ ಹಾಗೂ ಸಮಸ್ಥಿತಿಯಲ್ಲಿ ಇರಿಸಿಕೊಳ್ಳಲು ಯೋಗದಿಂದ ಮಾತ್ರ ಸಾಧ್ಯ.
ಯೋಗದ ಅವಿಭಾಜ್ಯ ಅಂಗಗಳಾದ ಪ್ರಾಣಾಯಾಮ, ಯೋಗನಿದ್ರೆ, ಧ್ಯಾನ, ಆಸನ ಇತ್ಯಾದಿಗಳಿಂದಾಗಿ ಮನಸ್ಸನ್ನು ಹತೋಟಿಗೆ ತರುವುದು ಅತಿ ಸುಲಭ. ಹಾಗಾಗಿ ಹೆಚ್ಚು ಹೆಚ್ಚು ಮಂದಿ ಯೋಗದ ಕಡೆಗೆ ಒಲವು ತೋರುತ್ತಿದ್ದಾರೆ ಎನ್ನುತ್ತಾರೆ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಯೋಗ ನಿರ್ದೇಶಕ ಎ. ನಾಗೇಂದ್ರ ಕಾಮತ್.
ವಯಸ್ಸಿನ ಮಿತಿಯಿಲ್ಲ, ಅಡ್ಡ ಪರಿಣಾಮವಿಲ್ಲ: ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರು ದೈಹಿಕ ಶ್ರಮದ ಯಾವುದೇ ವ್ಯಾಯಾಮ ಮಾಡುವುದು ಸುಲಭವಲ್ಲ. ಇಳಿ ವಯಸ್ಸಿನಲ್ಲಿರುವವರು ಯೋಗ ಹೊರತುಪಡಿಸಿ ಇತರ ವ್ಯಾಯಾಮ ಮಾಡಿದಲ್ಲಿ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ ಕೆಲವೊಂದು ಪ್ರಕಾರದ ವ್ಯಾಯಾಮಗಳನ್ನು ನಿಲ್ಲಿಸಿದ ಬಳಿಕ ಕೈಕಾಲು ಹಿಡಿದುಕೊಳ್ಳುವ, ಸ್ಥೂಲಕಾಯ ಉಂಟಾಗುವ ಪ್ರಕರಣಗಳು ಸಾಕಷ್ಟು ವರದಿಯಾಗಿವೆ.
ಆದರೆ, ಯೋಗವನ್ನು ಅತಿ ಚಿಕ್ಕ ವಯಸ್ಸಿನವರಿಂದ ಹಿಡಿದು ತೀರಾ ಇಳಿವಯಸ್ಸಿನವರವರೆಗೆ ಯಾರು ಬೇಕಾದರೂ ಮಾಡಬಹುದಾಗಿದೆ. ಯೋಗದಿಂದ ದೇಹದ ಸ್ಥಿತಿಸ್ಥಾಪಕತ್ವ ಗುಣ ವೃದ್ಧಿಯಾಗುತ್ತದೆ ಮಾತ್ರವಲ್ಲ, ಯಾವುದೇ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ ಎಂದು ಕಾಮತ್ ಅವರು ಅಭಿಪ್ರಾಯ ಪಡುತ್ತಾರೆ.
ಪ್ರತಿ 5 ವರ್ಷಕ್ಕೊಮ್ಮೆ ದುಪ್ಪಟ್ಟು
ಕಳೆದ ಸುಮಾರು 15 ವರ್ಷಗಳಿಂದ ಯೋಗದ ಪರವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿ 5 ವರ್ಷಕ್ಕೊಮ್ಮೆ ಯೋಗ ಕಲಿಯುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ನಗರದಲ್ಲಿರುವ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ 8 ಕೇಂದ್ರಗಳಲ್ಲಿ ಪ್ರತಿದಿನ 1700 ಮಂದಿ ಯೋಗ ಕಲಿಯುತ್ತಿದ್ದಾರೆ. ಯೋಗ ಎನ್ನುವುದು ಸರ್ವವ್ಯಾಪಿಯಾಗುತ್ತಿದ್ದು, ಎಲ್ಲೆಡೆ ಜನಪ್ರಿಯತೆ ಹಾಗೂ ಪ್ರಾಮುಖ್ಯತೆ ಪಡೆಯುತ್ತಿದೆ. ಅಷ್ಟು ಮಾತ್ರವಲ್ಲ ಯೋಗ ಕುರಿತ ಪುಸ್ತಕ, ಸಿಡಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಆದರೆ, ಪ್ರಾರಂಭಿಕವಾಗಿ ತಜ್ಞರ ಬಳಿಯೇ ಯೋಗವನ್ನು ಶಾಸ್ತ್ರಬದ್ಧವಾಗಿ ಕಲಿಯುವುದು ಸೂಕ್ತ ಎನ್ನುತ್ತಾರೆ ಕಾಮತ್.
ಯೋಗದ ಪ್ರಯೋಜನ
- ಮನಸ್ಸಿನ ಸುಸ್ಥಿತಿಯಲ್ಲಿರಿಸಿ ಮಾನಸಿಕ ಆರೋಗ್ಯ ಹಾಗೂ ಸಮತೋಲನವನ್ನು ಕಾಪಾಡುತ್ತದೆ
- ಯಾವುದೇ ವಯಸ್ಸಿನವರು ಕೂಡ ಯೋಗವನ್ನು ಅಭ್ಯಾಸ ಮಾಡಬಹುದು
- ಕಾಯಿಲೆ ಗುಣಪಡಿಸುವುದಲ್ಲದೇ ಕಾಯಿಲೆ ಬರದಂತೆ ಕಾಪಾಡುವ ಶಕ್ತಿ ಯೋಗಕ್ಕಿದೆ
- ಜಡಗೊಂಡಿರುವ ಜೀವಕೋಶಗಳಿಗೆ ಚೈತನ್ಯ ನೀಡಿ ಮರುಜೀವ ನೀಡುತ್ತದೆ. ಇದರಿಂದ ಆಯಾ ಜೀವಕೋಶಕ್ಕೆ ಸಂಬಂಧಿತ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ
- ಮನಸ್ಸು, ಆರೋಗ್ಯ ಸಮಸ್ಥಿತಿಯಲ್ಲಿ ಇರಿಸಿಕೊಳ್ಳಲು ಯೋಗಕ್ಕೆ ಮೊರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

