ಮಾಲ್ ಹವಾ...
ಬೆಂಗಳೂರು: ಮಹಾನಗರದ ಮಾಲ್ಗಳಲ್ಲಿ ಹೆಚ್ಚಾಗಿದೆ ಜನಜಂಗುಳಿ. ಏರಿಕೆಯಾಗಿದೆ ವ್ಯಾಪಾರ ವಹಿವಾಟು ಪ್ರಮಾಣ. ಕಾರಣ, ಬೇಸಿಗೆ. ಬೇಸಿಗೆಗೂ ಮಾಲ್ಗಳಲ್ಲಿ ಜನ, ವ್ಯಾಪಾರ ಹೆಚ್ಚಾಗಿರುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಅನುಮಾನವೇ? ಇದು ಖಂಡಿತಾ ನಿಜ.
ಬೆಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ಉಷ್ಣಾಂಶದ ಪ್ರಮಾಣ ಉತ್ತರ ಕರ್ನಾಟಕವನ್ನೂ ಮೀರಿಸುವಂತಿದೆ. ಬಿಸಿಲಿಗೆ ಹೆದರಿದ ಜನ ಮಾರುಕಟ್ಟೆಗಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ. ಅವರು ಈಗ ಮಾಲ್ಗಳತ್ತು ಮುಖ ಮಾಡಿದ್ದಾರೆ.
ಕಾರಣ, ಹವಾನಿಯಂತ್ರಿತ ವ್ಯವಸ್ಥೆ ಇರುವುದರಿಂದ ಮಾಲ್ಗಳು ಕೂಲ್ ಕೂಲ್. ಅಷ್ಟೇ ಅಲ್ಲ, ಮಕ್ಕಳ ಆಟಕ್ಕೂ ಹೇಳಿ ಮಾಡಿಸಿದ ಜಾಗ. ಈಗ ಶಾಲೆಗಳಿಗೆ ರಜೆ ಇರುವ ಕಾರಣ ಆಟ-ಪಾಠಗಳಿಗೆ ಬೆಸ್ಟ್ ಪ್ಲೇಸ್ ಆಗಿ ಮಾಲ್ಗಳು ತನ್ನನ್ನು ಒಗ್ಗಿಸಿಕೊಂಡಿವೆ.
ನಗರಕ್ಕೆ ಮಾಲ್ ಸಂಸ್ಕೃತಿ ಹೊಸದೇನಲ್ಲ. ಕೇವಲ ಹೈ-ಫೈ ಮಂದಿಗೆ ಮಾತ್ರ ಎಂದುಕೊಂಡಿದ್ದ ಮಾಲ್ ಇಂದು ಎಲ್ಲಾ ವರ್ಗದ ಜನರನ್ನು ಕೈಬೀಸಿ ಕರೆಯುತ್ತಿದೆ. ಇದರ ಸಂಸ್ಕೃತಿಗೆ, ರೀತಿ-ರಿವಾಜಿಗೆ ನಗರೀಗರಷ್ಟೇ ಅಲ,್ಲ ಗ್ರಾಮಾಂತರ ಪ್ರದೇಶದಿಂದ ಬರುವ ಮಂದಿಯೂ ಆಕರ್ಷಿತರಾಗುತ್ತಿದ್ದಾರೆ.
ಮಾಲ್ ಕಮಾಲ್ಗೆ ಇಲ್ಲಿನ ಎಲ್ಲಾ ವರ್ಗ ಫಿದಾ ಆಗಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಮಾಲ್ಗಳಿಗೆ ಗಂಡಾಂತರ ಬಂದೊದಗಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಲ್ಗಳು ಮೂಟೆ ಕಟ್ಟಿ ಮನೆಗೆ ತೆರಳುವ ಗಂಭೀರ ಪರಿಸ್ಥಿತಿ ಒದಗಿತ್ತು. ಇದು ರಾಷ್ಟ್ರೀಯ ಮಾರುಕಟ್ಟೆಯ ಸೂಚ್ಯಂಕವನ್ನು ಅಲುಗಾಡಿಸಿತ್ತು. ತೆರಿಗೆಯಲ್ಲಿ ಸಾಕಷ್ಟು ವಿನಾಯಿತಿ ಸಿಗದ ಕಾರಣ ಮಾಲ್ಗಳು ಒಮ್ಮಿಂದೊಮ್ಮೆಲೆಗೆ ಖಾಲಿ-ಖಾಲಿ ಆದಂತಾಗಿತ್ತು. ಇಲ್ಲಿಗೆ ಹೋಗುವ ಮಂದಿ ಕೂಡ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದರು.
ಆದರೆ, ಈಗ ಪರಿಸ್ಥಿತಿ ಹಿಂದಿನಂತಿಲ್ಲ, ಸಾಕಷ್ಟು ಸುಧಾರಿಸಿದೆ. ಮಾಲ್ನಿಂದ ಮಾಲ್ಗೆ ಸುತ್ತುವ ಮಂದಿ ಜೋರಾಗಿದ್ದಾರೆ. ಕೊಳ್ಳಲು ಅಲ್ಲದಿದ್ದರೂ ಹವಾನಿಯಂತ್ರಿತ ಕೊಠಡಿಗಳಿಗೆ ಸುತ್ತುವ ಪಡಿಪಾಟಲಿಗೆ ಬಿದ್ದಿದ್ದಾರೆ ನಗರದ ಮಂದಿ.
ಈ ಖಯಾಲಿ ಯಾಕೆ?: ಮಾಲ್ ಶೋಕೆಸ್ ಬಟ್ಟೆ ಇದ್ದ ಹಾಗೆ, ಅದನ್ನು ನೋಡಲಷ್ಟೇ ಚೆಂದ, ಕೊಳ್ಳಲಾಗದು ಎಂಬ ಚಿಂತನೆ ಕೆಲವರದ್ದು. ಅದೇ ಚಿಂತನೆಯ ಕೆಲ ಹೈ-ಫೈ ಮಂದಿ (ಮಾಲ್ಗಳಲ್ಲಿ ಕೊಳ್ಳದವರು) ಕೊಂಡರೂ, ಕೊಂಡುಕೊಳ್ಳದಿದ್ದರೂ ತೆರಳುತ್ತಿರುವುದು ಮಾತ್ರ ಮಾಲ್ಗಳಿಗೆ. ಆದರೆ, ಮಾಲ್ ಬಿಡಬೇಕಲ್ಲ. ಅತ್ತಿತ್ತ ಸುತ್ತಾಡಿ ಕಡೆಗೆ, ಯಾವುದೋ ವಸ್ತುವಿಗೆ ಮುಗಿಬಿದ್ದು, ಅದನ್ನು ಕೊಂಡುಕೊಳ್ಳುವಂತೆ ಮಾಡುತ್ತಿದೆ ಈ ಶೋಕೇಸ್ ಪೀಸ್.
ಇದರಿಂದಾಗಿಯೇ ಮಾಲ್ಗೆ ಭೇಟಿ ನೀಡಿದವರು ಸುಖಾಸುಮ್ಮನೆ ತಿರುಗಿ ಹೊರಬರಲಂತೂ ಆಗುತ್ತಲೇ ಇಲ್ಲ. ಬಿಸಿನೆಸ್ ಕೂಡ ಜೋರಾಗಿಯೇ ಇದೆ. ಆದರೆ, ಭೇಟಿ ನೀಡಿದ ಮಂದಿ ಮತ್ತು ದಿನ ನಡೆದ ವಹಿವಾಟಿಗೂ ತಾಳಿಕೆ ಆಗದಿದ್ದರೂ, ವಹಿವಾಟು ಮಾತ್ರ ಕುಂಟುತ್ತಾ, ಕುಂಟುತ್ತಾ ವೇಗಕ್ಕೆ ಸಾಗುತ್ತಿದೆ.
ವೀಕೆಂಡ್ ಫುಲ್ ರಷ್: ಮೊದಲೇ ಬಿಸಿಲ ಬೇಗೆ. ಇದಕ್ಕೆ ಸರಿಯಾಗಿ ಕಚೇರಿಯ ಸುತ್ತಮುತ್ತಲಿನ ವಾತಾವರಣ. ಕಚೇರಿಯಲ್ಲಿ ವಾರಪೂರ್ತಿ ಹವಾನಿಯಂತ್ರಿತ ಕೊಠಡಿಯಲ್ಲಿ ಕಾಲ ಕಳೆದ ಮಂದಿಗೆ, ವಾರಾಂತ್ಯದಲ್ಲಿ ಮನೆಯಲ್ಲಿ ಸಮಯ ಕಳೆಯುವುದು ಸ್ವಲ್ಪ ಕಷ್ಟವೇ ಆಗಿದೆ. ಇದರಿಂದಾಗಿ ವೀಕೆಂಡ್ ಪ್ಲಾನ್ ಪಕ್ಕಾ ಫಿಕ್ಸ್ ಆಗುತ್ತಿರುವುದು ಮಾಲ್ಗಳಲ್ಲಿ ಕಳೆಯಲು.
ಇದರಿಂದಾಗಿಯೇ ಪಕ್ಕಾ ಫನ್ ಮತ್ತು ಎಂಟರ್ಟೈನ್ಮೆಂಟ್ಗೆ ಕಳೆದ ಒಂದು ತಿಂಗಳಿನಿಂದ ಈಚೆಗೆ ಮಾಲ್ಗಳಿಗೆ ಭೇಟಿ ನೀಡಿದವರ ಸಂಖ್ಯೆ ಬರೋಬ್ಬರಿ 6.5ಲಕ್ಷ. ಒಟ್ಟಿನಲ್ಲಿ ದಿನವೆಲ್ಲಾ ಮಜುಬೂತಾಗಿ ಕಾಲ ಕಳೆಯಲು ಬಳಕೆಯಾಗುತ್ತಿದೆ ಈ ವಾಣಿಜ್ಯ ಸಂಕೀರ್ಣಗಳು.
ಕೇವಲ ವೀಕ್ಷಣೆಗಳೆ ಬರುವ ಗ್ರಾಹಕರು ನಮ್ಮಲ್ಲಿನ ವಸ್ತುಗಳಿಗೆ ಮನಸೋತು ಏನಿಲ್ಲವೆಂದರೂ ಒಂದು ವಸ್ತುವನ್ನಾದರೂ ಖರೀದಿಸುತ್ತಾರೆ. ದಿನಕ್ಕೆ ಇಂತ ಒಂದು ಅಥವಾ ಎರಡು ವಸ್ತುಗಳನ್ನು ಕೊಳ್ಳುವವರೇ ಹೆಚ್ಚು. ಆದರೆ, ಅವರ ಖರೀದಿ ಸಮಯ ಮತ್ತು ಮಾಲ್ಗಳಲ್ಲಿ ಕಳೆಯುವ ಸಮಯಕ್ಕೂ ಹೊಂದಾಣಿಕೆಯಾಗದು. ಆದರೂ, ವ್ಯಾಪಾರ ಸುರಕ್ಷಿತವಾಗಿ ಸಾಗಿದೆ.
- ಮಣಿವತ್ತನ್, ದಿ ಕಲೆಕ್ಷನ್ಸ್ ಮಾಲ್ ವ್ಯವಸ್ಥಾಪಕ ನಿರ್ದೇಶಕ
ಕಳೆದ ಮೂರು ತಿಂಗಳಲ್ಲಿ
ಬೆಂಗಳೂರಿನ ಮಾಲ್ಗಳಿಗೆ ಭೇಟಿ ನೀಡಿದ ಮಂದಿ
ಜನವರಿ 2.25 ಲಕ್ಷ
ಫೆಬ್ರವರಿ 1.85 ಲಕ್ಷ
ಮಾರ್ಚ್
ತಿಂಗಳಿನಾಂತ್ಯಕ್ಕೆ 6.5 ಲಕ್ಷ
- ಭಾಗ್ಯಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

