ಬೆಂಗಳೂರು ಗ್ರಾಮಾಂತರ

ಹೊಟೇಲ್ ಅವ್ಯವಸ್ಥೆಗೆ ಕಿಡಿ

Published On :

ಚನ್ನಪಟ್ಟಣ: ಪಟ್ಟಣ ವ್ಯಾಪ್ತಿಯ ವಿವಿಧ ಹೋಟೆಲುಗಳ ಅವ್ಯವಸ್ಥೆ  ವಿರುದ್ಧ ಪಟ್ಟಣದ ನಾಗರೀಕರ ಅರಣ್ಯ ರೋಧನಕ್ಕೆ ಕೊನೆಗೂ ನಗರಸಭೆ ಸ್ಪಂದಿಸಿದ್ದು ಕೆಲ ಹೊಟೇಲ್‌ಗಳಿಗೆ ದಿಢೀರ್ ಭೇಟಿ ನೀಡಿದ ಪೌರಾಯುಕ್ತ ಲಕ್ಷ್ಮೀಪತಯ್ಯ ಅವ್ಯವಸ್ಥೆ ಆಗರ ಕಂಡು ಸಿಡಿಮಿಡಿಗೊಂಡರಲ್ಲದೆ, ಕಾಲಮಿತಿಯೊಳಗೆ ನಿಯಮ ಪಾಲಿಸುವಂತೆ ತಾಕೀತು ಮಾಡಿದ್ದಾರೆ.
ಬಸ್‌ನಿಲ್ದಾಣದ ಬಳಿಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೊಟೇಲ್‌ಗಳಿಗೆ ಭೇಟಿ ನೀಡಿದ ತಂಡ, ಅಡುಗೆ ತಯಾರಿಸುವ ಕೋಣೆ, ನೀರಿನ ವ್ಯವಸ್ಥೆ, ಶುಚಿತ್ವ ಬಗ್ಗೆ ಪರಿಶೀಲನೆ ನಡೆಸಿತು. ಭೇಟಿ ನೀಡಿದ ಬಹುತೇಕ ಹೊಟೇಲ್‌ಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂತು. ಇದರಿಂದ ಗರಂ ಆದ ಪೌರಾಯುಕ್ತರು  ಸ್ಥಳದಲ್ಲೇ ನೋಟಿಸ್ ನೀಡಿ ಮೂರು ದಿನದೊಳಗೆ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.
ಹೊಟೇಲ್‌ಗಳಲ್ಲಿ ನೀರು ಶುದ್ಧೀಕರಿಸಬೇಕೆಂಬ ನಿಯಮವಿದ್ದರೂ ಎಲ್ಲಿಯೂ ನೀರು ಶುದ್ಧೀಕರಿಸುವ ಯಂತ್ರವಿರಲಿಲ್ಲ, ಹಾಗೆಯೇ ಕೆಲ ಹೊಟೇಲ್‌ಗಳಲ್ಲಿ ಪರವಾನಗಿಯನ್ನೇ ನವೀಕರಣ ಮಾಡಿರಲಿಲ್ಲ. ಅಡುಗೆ ಕೋಣೆಯಲ್ಲಿ ಶುಚಿತ್ವಕ್ಕೆ ಆಧ್ಯತೆ ನೀಡದಿದ್ದುದು ಪರಿಶೀಲನೆ ವೇಳೆ ಗಮನ ಸೆಳೆಯಿತು. ಇದರ ಜತೆಗೆ ನೀರಿನ ಟ್ಯಾಂಕುಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದೆ ಹಾಗೆಯೇ ಬಿಟ್ಟಿದ್ದು ಅಧಿಕಾರಿಗಳಿಗೆ ಗೋಚರಿಸಿತು.
ಅಕ್ರಮ ಮದ್ಯ ಪೂರೈಕೆ: ಕೆಲ ಮಾಂಸಹಾರಿ ಹೋಟೆಲುಗಳಲ್ಲಿ ಪರವಾನಗಿ ಇಲ್ಲದಿದ್ದರೂ ಮದ್ಯ ಸರಬರಾಜು ಮಾಡಲಾಗುತ್ತಿತ್ತು. ಇದನ್ನು ಕಂಡ ಅಧಿಕಾರಿಗಳು ಕೂಡಲೇ ಮದ್ಯ ಸರಬರಾಜು ನಿಲ್ಲಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು. ಮೂರು ದಿನಗಳಲ್ಲಿ ನವೀಕರಣ ಮಾಡಿಕೊಳ್ಳದಿದ್ದರೆ ಹೋಟೆಲ್ ಮುಚ್ಚುವುದಾಗಿ ಎಚ್ಚರಿಕೆ ನೀಡಿದರು. ಮುಂದಿನ ವಾರ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಅಷ್ಟರಲ್ಲಿ ಸರಿಪಡಿಸಿಕೊಳ್ಳಬೇಕೆಂದು ಅಧಿಕಾರಿಗಳು ಮಾಲೀಕರಿಗೆ ಸೂಚಿಸಿದರು. ಆರೋಗ್ಯ ನಿರೀಕ್ಷಕ ಬಸವರಾಜು ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.