ನಿತ್ಯಾ ಅಣಕು ಶವಯಾತ್ರೆ
ಕ.ಪ್ರ.ವಾರ್ತೆ ರಾಮನಗರ ಜು.30
ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಕೂಲಿಗಳೆಂದು ಜರಿದಿರುವ ನಿತ್ಯಾನಂದನ ವಿರುದ್ಧ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆ ಕಾರ್ಯಕರ್ತರು ಬಿಡದಿಯ ಧ್ಯಾನಪೀಠದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಧ್ಯಾನಪೀಠದ ಪಶ್ಚಿಮ ದ್ವಾರದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಅಣಕು ಶವಯಾತ್ರೆ ನಡೆಸಿದರು. ನಂತರ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು. ನಿತ್ಯಾನಂದನ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿನಿಂದ ಬಂದು ಕನ್ನಡ ನಾಡಿನಲ್ಲಿ ನೆಲೆಸಿರುವ ನಿತ್ಯಾನಂದ ಧರ್ಮ ಬೋಧನೆ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಡ ರೈತರಿಂದ ಕೃಷಿ ಭೂಮಿಯನ್ನು ಕಿತ್ತುಕೊಂಡು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಾನೆ ಎಂದು ಆರೋಪಿಸಿದರು.
ಉಳಿಗಾಲವಿಲ್ಲ: ಕನ್ನಡಿಗರು ಉದಾರಿಗಳು, ಸ್ವಾಭಿಮಾನಿಗಳೂ ಆಗಿದ್ದಾರೆ. ಈ ದಿಶೆಯಿಂದಲೇ ಇನ್ನೂ ಬಿಡದಿಯಲ್ಲಿ ನೆಲೆಸಿದ್ದಾನೆ. ನಿತ್ಯಾನಂದ ಕನ್ನಡಿಗರ ಔದಾರ್ಯವನ್ನು ದೌರ್ಬಲ್ಯ ಎಂದು ಭಾವಿಸಬಾರದು. ಪದೇ ಪದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿರುವ ನಿತ್ಯಾನಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ರಾಸಲೀಲೆ ಸಹಿತ ನಾನಾ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪಗಳನ್ನು ಹೊತ್ತಿರುವ ಕಪಟಿ ನಿತ್ಯಾನಂದ ಕನ್ನಪರ ಸಂಘಟನಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾನೆ. ಕನ್ನಡದ ನೆಲದಲ್ಲೇ ವಾಸ್ತವ್ಯ ಹೂಡಿ, ಕನ್ನಡಿಗರ ವಿರುದ್ಧವೇ ಕೀಳಾಗಿ ಮಾತನಾಡುವ ನಿತ್ಯಾನಂದನನ್ನು ಗಡೀಪಾರು ಮಾಡಬೇಕು ಎಂದು ಕಿಡಿ ಕಾರಿದರು.
ನಾನಿನ್ನೂ 6 ವರ್ಷದ ಬಾಲಕ, ನನ್ನಿಂದ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ನಿಜವೇ ಆಗಿದ್ದಲ್ಲಿ ನಿತ್ಯಾ ಕೂಡಲೇ ಪುರುಷತ್ವ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಟ್ಟಡ ನೆಲಸಮಗೊಳಿಸಿ: ನಿತ್ಯಾನಂದ ಕೃಷಿ ಭೂಮಿಯಲ್ಲಿ ಧ್ಯಾನಪೀಠ ಆಶ್ರಮ ನಿರ್ಮಿಸಿದ್ದಾನೆ. ಕನ್ನಡಪರ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೃಷಿ ಭೂಮಿಯನ್ನು ಅನ್ಯಕ್ರಾಂತ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದನು. ಆದರೆ, ಜಿಲ್ಲಾಡಳಿತ ಆತನ ಅರ್ಜಿಯನ್ನು ತಿರಸ್ಕರಿಸಿರುವುದನ್ನು ಸ್ವಾಗತಿಸಿದರು.
ಜಿಲ್ಲಾಡಳಿತವು ಕೇವಲ ಭೂಪರಿವರ್ತನೆ ಅರ್ಜಿಯನ್ನು ತಿರಸ್ಕರಿಸಿದರೆ ಸಾಲದು. ಧ್ಯಾನಪೀಠದಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಕಟ್ಟಡಗಳನ್ನು ಕೂಡಲೇ ನೆಲಸಮಗೊಳಿಸಬೇಕು. ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಸರ್ಕಾರಿ ಜಮೀನು ಹಾಗೂ ರೈತರಿಂದ ಬಲವಂತವಾಗಿ ಕಸಿದುಕೊಂಡಿರುವ ಜಮೀನನ್ನು ರೈತರಿಗೆ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು.
ಒಂದೊಮ್ಮೆ ಜಿಲ್ಲಾಡಳಿತವು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಿ, ಕಾಲ್ನಡಿಗೆ ಮೂಲಕ ತೆರಳಿ ವಿಧಾನಸೌಧ ಚಲೋ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಎಚ್ಚರಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಎಲ್. ರಮೇಶ್ಗೌಡ, ಜಿಲ್ಲಾಧ್ಯಕ್ಷ ಯೋಗೇಶ್ ಗೌಡ, ಪದಾಧಿಕಾರಿಗಳಾದ ಶ್ರೀನಿವಾಸ್, ಮಂಗಳಮ್ಮ, ರಾಜಮ್ಮ, ಕೆ.ಟಿ.ಲಕ್ಷ್ಮಿ, ನೀಲೇಶ್ಗೌಡ, ದಿನೇಶ್, ಮಹೇಶ್, ವೆಂಕಟರಾಮು, ವಸಂತ್, ಜಯರಾಮರೆಡ್ಡಿ, ಶಿವಣ್ಣ, ರಂಜಿತ್ಗೌಡ, ಮತ್ತಿತರರು ಭಾಗವಹಿಸಿದ್ದರು.
ಎಲ್ಲಿದ್ದರೂ ಬಂಧಿಸಲು ಆಗ್ರಹ
ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ, ತಲೆ ಮರೆಸಿಕೊಂಡಿರುವುದು ನಿತ್ಯಾನಂದ ಲೈಂಗಿಕ ಹಗರಣ ನಡೆಸಿರುವುದು ನಿಜವೆಂದು ಸಾಬೀತಾಗುತ್ತದೆ. ಎಲ್ಲೇ ಅಡಗಿದ್ದರೂ ಪೊಲೀಸರು ಆತನನ್ನು ಬಂಧಿಸಿ, ಪುರುಷತ್ವ ಪರೀಕ್ಷೆ ನಡೆಸಬೇಕು. ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

