ದೌರ್ಜನ್ಯ ವಿರುದ್ಧ ದೂರು ಕೊಡಿ
ದೊಡ್ಡಬಳ್ಳಾಪುರ: ಸಮಾಜದಲ್ಲಿ ನಡೆಯುವ ಅತ್ಯಾಚಾರ-ಅನಾಚಾರ, ದೌರ್ಜನ್ಯ ಸೇರಿದಂತೆ ಯಾವುದೇ ರೀತಿಯ ಸಮಾಜ ವಿರೋಧಿ ಕೃತ್ಯಗಳ ವಿರುದ್ಧ ದೂರು ಕೊಡಲು ಹಿಂಜರಿಯಬೇಡಿ. ದೂರು ಕೊಡದೇ ಹೋಗುವುದು ಅನಾಚಾರಿಗಳು ಮತ್ತಷ್ಟು ಕೃತ್ಯಗಳನ್ನು ನಡೆಸಲು ಸಹಕಾರಿಯಾಗಬಹುದು ಎಂಬ ಎಚ್ಚರಿಕೆ ಇರಲಿ ಎಂದು ದೊಡ್ಡಬಳ್ಳಾಪುರ ವೃತ್ತ ಆರಕ್ಷಕ ನಿರೀಕ್ಷಕ ಶಿವಾರೆಡ್ಡಿ ಹೇಳಿದರು.
ಇಲ್ಲಿನ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಎನ್ಎಸ್ಎಸ್ ಅಡಿಯಲ್ಲಿ ಗುರುವಾರ ನಡೆದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಡಿವಂತಿಕೆಯ ಪರಾಕಾಷ್ಠೆ ಇರುವ ನಮ್ಮ ಸಮಾಜದಲ್ಲಿ ಲೈಂಗಿಕತೆ ಅಥವಾ ಅತ್ಯಾಚಾರದ ಕುರಿತ ವಿಚಾರಗಳ ಚರ್ಚೆ ಅಥವಾ ವಿಚಾರ ವಿನಿಮಯಕ್ಕೂ ಕಟ್ಟುಪಾಡುಗಳು ಅಡ್ಡಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳು ಅದನ್ನು ಬಹಿರಂಗಪಡಿಸುವ ಧೈರ್ಯ ಪ್ರದರ್ಶಿಸುವುದಿಲ್ಲ.
ಈ ರೀತಿಯ ಮುಜುಗರಗಳಿಂದ ಹೊರಬಂದು ಆರೋಪಿಗಳ ವಿರುದ್ಧ ನಿಲ್ಲುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.ಸಣ್ಣ ಮಕ್ಕಳಿಂದ ಹಿಡಿದು 60 ವರ್ಷದ ವೃದ್ಧರವರೆಗೆ ಎಲ್ಲ ವಯೋವಾನದ ಮಹಿಳೆಯರು ಮಕ್ಕಳ ಮೇಲೆ ಅತ್ಯಾಚಾರ ಯತ್ನಗಳು ವರದಿಯಾಗಿರುವ ನಿಟ್ಟಿನಲ್ಲಿ ಈ ಕುರಿತ ಕಾನೂನು, ಶಿಕ್ಷೆ ಇತ್ಯಾದಿಗಳ ಅರಿವು ಹೊಂದಿರಬೇಕಾದ್ದು ಅನಿವಾರ್ಯ. ಗೂಂಡಾ ಕಾಯಿದೆ ಅಥವಾ ಪೋಸಾ ಕಾಯಿದೆಗಳು ಅತ್ಯಂತ ಪರಿಣಾಮಕಾರಿಯಾಗಿವೆ ಎಂದರು.
ತಂತ್ರಜ್ಞಾನವನ್ನು ಪ್ರಗತಿಗೆ ಪೂರಕವಾಗಿ ಬಳಸಿಕೊಳ್ಳಬೇಕೇ ವಿನ ವಿಛಿದ್ರಕಾರಿ ಮನೋಧರ್ಮದ ಅಭಿವ್ಯಕ್ತಿಗಲ್ಲ. ಫೇಸ್ಬುಕ್, ಟ್ವಿಟರ್ ಸೇರಿದಂತೆ ಜಾಲ ತಾಣಗಳಲ್ಲಿ ವೈಯಕ್ತಿಕ ವಿವರಗಳು, ಫೋಟೊಗಳನ್ನು ಪ್ರಕಟಿಸುವ ಮುನ್ನ ಹೆಣ್ಣುಮಕ್ಕಳು ಯೋಚಿಸಬೇಕು. ಸೈಬರ್ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಇವೂ ಕೂಡ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ ನೀಡುತ್ತಿವೆ ಎಂದರೆ ತಪ್ಪಾಗಲಾರದು. ಇದನ್ನು ನಿಗ್ರಹಿಸುವಲ್ಲಿ ವೈಯಕ್ತಿಕ ಹೊಣೆಗಾರಿಕೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆ, ಸಂಬಂಧಗಳ ಗಟ್ಟಿತನ ಮುಖ್ಯ ಎಂದು ಅಭಿಪ್ರಾಯಪಟ್ಟರು.ಸಂಸ್ಥೆಯ ನಿರ್ದೇಶಕ ಜೆ. ರಾಜೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಾಂತರ ಠಾಣೆ ಆರಕ್ಷಕ ಉಪನಿರೀಕ್ಷಕ ನವೀನ್ಕುಮಾರ್, ಪ್ರಾಂಶುಪಾಲ ಜೆ.ವಿ. ಚಂದ್ರಶೇಖರ್, ಪ್ರೊ. ಎಚ್.ಎಸ್. ನಾರಪ್ಪ, ವಿಭಾಗದ ಮುಖ್ಯಸ್ಥ ಕೆ. ದಕ್ಷಿಣಾಮೂರ್ತಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಕೆ.ಆರ್. ರವಿಕಿರಣ್, ಎನ್ಎಸ್ಎಸ್ ಅಧಿಕಾರಿ ಎಂ.ಚಿಕ್ಕಣ್ಣ, ಸಹ ಅಧಿಕಾರಿ ಪಿ. ಚೈತ್ರ ಸೇರಿದಂತೆ ಎಲ್ಲ ಸಹ ಪ್ರಾಧ್ಯಾಪಕರು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

