ಬೆಂಗಳೂರು ಗ್ರಾಮಾಂತರ

ಚನ್ನಪಟ್ಟಣ ಜೆಡಿಎಸ್‌ನಲ್ಲಿ ಅಸಮಾಧಾನ

Published On :

ಸು.ನಾ. ನಂದಕುಮಾರ್
ಚನ್ನಪಟ್ಟಣ: ನಿಚ್ಚಳ ಬಹುಮತದ ನಡುವೆಯೂ ಅಧಿಕಾರ ದಾಹದಿಂದಾಗಿ ತಾಪಂನಲ್ಲಿ ಜಾರಿಗೆ ಬಂದಿರುವ ಜೆಡಿಎಸ್ -ಬಿಜೆಪಿ ಮೈತ್ರಿ ಆಡಳಿತದ ಬಗ್ಗೆ ಜೆಡಿಎಸ್ ವಲಯದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.
ತಾಲೂಕು ಘಟಕದ ಪದಾಧಿಕಾರಿಗಳು, ವರಿಷ್ಠರು ಮತ್ತು ಪಕ್ಷ ನಿಷ್ಠರು ತಾಪಂ ಅಂಗಳದತ್ತ ಸುಳಿಯದೆ ದೂರ ಉಳಿಯುವುದರೊಂದಿಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷದ ತೀರ್ಮಾನ ಧಿಕ್ಕರಿಸಿರುವ ಒಂದು ಬಣ ತಾಪಂ ಅಂಗಳದಲ್ಲಿ ಸಮ್ಮಿಶ್ರ ಆಡಳಿತಕ್ಕೆ ಜೈ ಎಂದಿದೆ.
ಜಯಲಕ್ಷ್ಮಿಗೆ ಮತ್ತೆ ಅನ್ಯಾಯ: ಸೋಗಾಲ ತಾಪಂ ಸದಸ್ಯೆ ಜಯಲಕ್ಷ್ಮಿ ಅವರಿಗೆ ಕಳೆದ ಬಾರಿಯೇ ಅವಕಾಶ ನೀಡಬೇಕಿತ್ತಾದರೂ ಅಧಿಕಾರರೂಢ ಮಂದಿ ರಾಜಿನಾಮೆ ನೀಡದೆ, ಮಾತು ಮುರಿದ ಪರಿಣಾಮ ಜಯಲಕ್ಷ್ಮಿ ಗದ್ದುಗೆಯಿಂದ ದೂರ ಉಳಿದಿದ್ದರು. ಮತ್ತೆ ಸಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾದ ಹಿನ್ನೆಲೆಯಲ್ಲಿ ಮತ್ತೆ ಇವರಿಗೆ ಅವಕಾಶ ಮಾಡಿಕೊಡಲು ಪಕ್ಷದ ಮುಖಂಡರು ನಿರ್ಧರಿಸಿದ್ದರಾದರೂ, ತಾಲೂಕು ಜೆಡಿಎಸ್ ಮಾತಿಗೆ ಸೊಪ್ಪು ಹಾಕದ ಸವಿತಾ ಬಂಡೆದ್ದ ಪರಿಣಾಮ ಜಯಲಕ್ಷ್ಮಿಗೆ ಮತ್ತೆ ಅವಕಾಶ ಕೈಜಾರಿದೆ.
ಅಶ್ವಥ್ ಸಭೆಗೆ ಗೈರು: ತಾಪಂ ಅಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಎಂ.ಸಿ.ಅಶ್ವಥ್ ನಿವಾಸದಲ್ಲಿ ಕರೆಯಲಾಗಿದ್ದ ಸಭೆಗೆ ಕೇವಲ ನಾಲ್ಕು ಮಂದಿ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಸವಿತಾ ಸೇರಿದಂತೆ ಬಹುತೇಕ ಸದಸ್ಯರು ರೆಸಾರ್ಟ್ ರಾಜಕಾರಣಕ್ಕೆ ತೆರಳುವ ಮೂಲಕ ವರಿಷ್ಠರಿಗೆ ಸೆಡ್ಡು ಹೊಡೆದು ಪಕ್ಷದ ತತ್ವ-ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿರುವ  ಧೋರಣೆ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ ಮೂಡಿಸಿದೆ.
ಭುಗಿಲೆದ್ದ ಅಸಮಾಧಾನ: ತಾಲೂಕು ಜೆಡಿಎಸ್ ಮುಖಂಡರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಬಗ್ಗೆ ಜೆಡಿಎಸ್ ತಾಪಂ ಸದಸ್ಯರಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಅವಕಾಶ ವಂಚಿತ ಜಯಲಕ್ಷ್ಮಿ, ಮಾಜಿ ಅಧ್ಯಕ್ಷೆ ಜಯಮ್ಮ, ಶಾಂತಮ್ಮ, ಮಾರೇಗೌಡ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಮೂರನೇ ಬಾರಿ ಜಯಲಕ್ಷ್ಮಿ ತಮ್ಮಯ್ಯಗೆ ಅವಕಾಶ ನೀಡದಿರುವ ಪಕ್ಷದ ನಿಲುವಿನ ಬಗ್ಗೆ ಸೋಗಾಲ ತಾಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಭೆಯ ವೇಳೆ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಾಪಂ ಅಧ್ಯಕ್ಷ ಚುನಾವಣೆ ಜೆಡಿಎಸ್ ಪಾಳಯದಲ್ಲಿ ಸಾಕಷ್ಟು ತಲ್ಲಣ ಮೂಡಿಸಿದೆ.
ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಯಾಕೆ?: ಬಿಜೆಪಿಯಿಂದ ಗೆಲವು ಸಾಧಿಸಿರುವ ಹೊಂಗನೂರು ತಾಪಂ ಸದಸ್ಯೆ ಪವಿತ್ರಾರನ್ನು ಪರಿಶಿಷ್ಟ ಮಹಿಳೆಗೆ ಮೀಸಲಿರುವ ಉಪಾಧ್ಯಕ್ಷ ಹುದ್ದೆಗೆ ಕೂರಿಸಿರುವುದು ಪಕ್ಷದ ವಲಯದಲ್ಲಿ ಸಾಕಷ್ಟು ಅಸಮಾಧಾನ ಮೂಡಿಸಿದೆ. ಜೆಡಿಎಸ್‌ನ ಜಯಮ್ಮ ಅರ್ಹರಿದ್ದರೂ ಬಿಜೆಪಿ ಸದಸ್ಯರಿಗೆ ಹುದ್ದೆ ನೀಡಿರುವುದು ಯಾಕೆ? ಎಂಬ ಪ್ರಶ್ನೆ ಮೂಡಿದೆ.
ನಾನು ಜೆಡಿಎಸ್ ಸದಸ್ಯೆ: ಚುನಾವಣೆ ಬಳಿಕ ಪವಿತ್ರ ಬಿಜೆಪಿ ಸದಸ್ಯರು ಎಂದು ಚುನಾವಣಾಧಿಕಾರಿ ಘೋಷಿಸಿದರು. ಆದರೆ ನಾನು ಜೆಡಿಎಸ್ ಎಂದು ತಡಬಡಿಸಿದ ಪವಿತ್ರ ಮಾತನ್ನು ಜೆಡಿಎಸ್‌ನ ಕೆಲವು ಸದಸ್ಯರು ಅನುಮೋದಿಸಿದರಾದರೂ, ಪಕ್ಷಕ್ಕೆ ಸೇರಿದ್ದು ಯಾವಾಗ ಎಂಬ ಸ್ಪಷ್ಟ ಉತ್ತರ ನೀಡುವಲ್ಲಿ ವಿಫಲರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.