ಬೆಂಗಳೂರು ಗ್ರಾಮಾಂತರ

ಆಪರೇಷನ್ ಕೈ ಚುರುಕು

Published On :

 ಮತ್ತೀಕೆರೆ ಜಯರಾಮ್
ರಾಮನಗರ:
ತನಗೆ ಅನುಕೂಲವಾಗುವಂತೆ ಮೀಸಲು ಬದಲಿಸಿಕೊಂಡು ರಾಮನಗರ ತಾ.ಪಂ. ಅಧ್ಯಕ್ಷ ಸ್ಥಾನ ಖಾತ್ರಿಪಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು, ಉಪಾಧ್ಯಕ್ಷ ಸ್ಥಾನವನ್ನೂ ದಕ್ಕಿಸಿಕೊಳ್ಳಲು ಆಪರೇಷನ್ ಹಸ್ತ ನಡೆಸಿದೆ.
ತಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ (ಜು.22) ಚುನಾವಣೆ ನಡೆಯಲಿದ್ದು, ಕಳೆದ ಬಾರಿ ಸ್ವಪಕ್ಷೀಯರ ಬಂಡಾಯದಿಂದ ಕೈತಪ್ಪಿ ಹೋಗಿದ್ದ ಅಧಿಕಾರವನ್ನು ಮರಳಿ ಪಡೆಯುವ ಜೆಡಿಎಸ್ ಪಕ್ಷದ ಆಸೆ ಈಡೇರುವ ಸಾಧ್ಯತೆ ಕ್ಷೀಣವಾಗಿದೆ.
22 ಸದಸ್ಯ ಬಲದ ತಾ.ಪಂ.ನಲ್ಲಿ ಜೆಡಿಎಸ್ 9 ಮತ್ತು ಕಾಂಗ್ರೆಸ್ 7 ಸದಸ್ಯರನ್ನು ಹೊಂದಿವೆ. ಒಡೆದ ಮನೆ ಜೆಡಿಎಸ್ ಪಕ್ಷದಲ್ಲಿ ತಲೆದೋರಿರುವ ಭಿನ್ನಮತದ ಲಾಭದೊಂದಿಗೆ ತಾ.ಪಂ. ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ವ್ಯೂಹ ರಚಿಸಿದೆ.
ಕಾಂಗ್ರೆಸ್ ಕೈ ಚಳಕ: ತಾ.ಪಂ.ಗಳಿಗೆ ಮೀಸಲು ನಿಗದಿಪಡಿಸಿ ಹೊರಡಿಸಲಾಗಿದ್ದ ಮೊದಲ ಆದೇಶದಲ್ಲಿ ರಾಮನಗರದ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅದಾಗಲೇ ಅಧಿಕಾರ ಹಂಚಿಕೆ ಸೂತ್ರ ರೂಪಿಸಿಕೊಂಡು ದಳಪತಿಗಳು ಗದ್ದುಗೆ ಹಿಡಿಯಲು ತಯಾರಿಗೆ ಇಳಿದಿದ್ದರು.
ಜೆಡಿಎಸ್‌ನಲ್ಲಿ ಒಗ್ಗಟ್ಟು ಮೂಡುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಸರ್ಕಾರದ ಮಟ್ಟದಲ್ಲಿ ತಮಗೆ ಅನುಕೂಲವಾಗುವಂತೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡ ಮಹಿಳೆಗೆ ನಿಗದಿಪಡಿಸಿ ಮೀಸಲು ಪರಿಷ್ಕರಣೆ ಮಾಡಿಸಿಕೊಂಡರು ಬಂದರು. ಉಪಾಧ್ಯಕ್ಷ ಸ್ಥಾನದ ಮೀಸಲು ಹಾಗೇ ಉಳಿಯಿತು.
ಪರಿಶಿಷ್ಟ ಪಂಗಡ ಮಹಿಳಾ ಮೀಸಲಿನಡಿ ಆಯ್ಕೆಯಾಗಿರುವ ಏಕೈಕ ಸದಸ್ಯೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಲಕ್ಷ್ಮೀಸಾಗರ ಕ್ಷೇತ್ರದ ಶೋಭಾ ಲಕ್ಷ್ಮಣಕುಮಾರ್ ಅವರೊಬ್ಬರೇ. ಹೀಗಾಗಿ ಬಹುಮತ ಇಲ್ಲದೆಯೂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದು ನಿಶ್ಚಯವಾಯಿತು.
ಆಪರೇಷನ್ ಕಾರ್ಯಾಚರಣೆ: ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ನಡೆದಿದ್ದ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ಇದೀಗ ರಾಮನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಆಪರೇಷನ್ ಹಸ್ತ ಕಾರ್ಯಾಚರಣೆಗೆ ಇಳಿದಿದೆ. ಅದೀಗ ರಾಮನಗರ ತಾ.ಪಂ.ನಲ್ಲೂ ಮರುಕಳಿಸಿದೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರದ ತಾ.ಪಂ. ಚುಕ್ಕಾಣಿ ಹಿಡಿದು, ಅವರಿಗೆ ಮುಖಭಂಗ ಮಾಡುವ ಉದ್ದೇಶವಲ್ಲದೆ ಇಲ್ಲಿ ಕಾಂಗ್ರೆಸ್ ಮುಖಂಡರಿಗೆ ಬೇರೆ ಇರಾದೆಯೇ ಇಲ್ಲ. ಕಾಂಗ್ರೆಸ್ ಪಕ್ಷದಿಂದ ಪೌರ ಸಂಸ್ಥೆಗಳಲ್ಲೂ ಕುದುರೆ ವ್ಯಾಪಾರ ಜೋರಾಗಿಯೇ ನಡೆದಿತ್ತು.
ಗೂಡು ತೊರೆದ ಹಕ್ಕಿ
ಕಳೆದ ಅವಧಿಯಲ್ಲೇ ಆಪರೇಷನ್ ಹಸ್ತ ಕಾರ್ಯಾಚರಣೆಗೆ ಒಳಗಾಗಿದ್ದ ಸುಗ್ಗನಹಳ್ಳಿ ಕ್ಷೇತ್ರದ ಜೆಡಿಎಸ್ ಸದಸ್ಯ ಜಯರಾಮ್ ಅವರ ನಿಷ್ಠೆ ಈ ಬಾರಿಯೂ ಕಾಂಗ್ರೆಸ್ ಪಕ್ಷಕ್ಕೇ ಎನ್ನುವುದು ಬಹುತೇಕ ನಿಶ್ಚಯವಾಗಿದೆ. ಇದು ಜೆಡಿಎಸ್ ಪಕ್ಷಕ್ಕೆ ಹಿನ್ನೆಡೆ ಉಂಟು ಮಾಡಿದೆ.  ಕಳೆದ ಬಾರಿ ಕಾಂಗ್ರೆಸ್ ಬೆಂಬಲದೊಂದಿಗೆ ಉಪಾಧ್ಯಕ್ಷ ಸ್ಥಾನ ಅನುಭವಿಸಿ, ಅಧ್ಯಕ್ಷ ಸ್ಥಾನವನ್ನು ಆ ಪಕ್ಷಕ್ಕೆ ಧಾರೆ ಎರೆದಿದ್ದ ಜೆಡಿಎಸ್ ಬಂಡಾಯ ಸದಸ್ಯ ಶಂಕರಪ್ಪ ಈಗಲೂ ಗೈರಾಗುವ ಮೂಲಕ ಕೈ ಪಾಳಯಕ್ಕೆ ಶಕ್ತಿ ತುಂಬಲು ಹೊರಟಿದ್ದಾರೆ ಎಂದು ಮೂಲಗಳು ಹೇಳಿವೆ.  ಜಯರಾಮ್ ಮತ್ತು ಶಂಕರಪ್ಪ ಅವರಿಬ್ಬರನ್ನು ಹೊರತುಪಡಿಸಿ ಜೆಡಿಎಸ್ ಪಕ್ಷದಲ್ಲಿ ಉಳಿದ 7 ಮಂದಿ ಒಗ್ಗಟ್ಟಾಗಿರುವುದೂ ಅನುಮಾನ. ಆ ಪೈಕಿ ಇನ್ನೊಬ್ಬರನ್ನು ಖರೀದಿಸಿದ್ದೇವೆಂದು ಕಾಂಗ್ರೆಸ್ ಮೂಲಗಳು  ಹೇಳಿವೆ. ಖರೀದಿ ಆದವರು ಯಾರೆನ್ನುವುದರ ಗುಟ್ಟು ಮಾತ್ರ ರಟ್ಟಾಗಿಲ್ಲ.
ತಾ.ಪಂ. ಇನ್ನು ಶೋಭಾಯಮಾನ
ರಾಮನಗರ ತಾ.ಪಂ. ಇನ್ನು 20 ತಿಂಗಳು ಶೋಭಾಯಮಾನ ಆಗುವುದು ನಿಶ್ಚಿತವಾದಂತಿದೆ. ಕಾರಣವಿಷ್ಟೇ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡಕ್ಕೂ ಕಾಂಗ್ರೆಸ್ ಪಕ್ಷದಿಂದ ಪ್ರತಿಷ್ಠಾಪಿತ ಆಗಲಿರುವವರ ಹೆಸರು ಶೋಭಾ ಆಗಿದೆ.  ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಇಡೀ ತಾ.ಪಂ.ನಲ್ಲಿರುವ ಏಕೈಕ ಸದಸ್ಯೆ ಶೋಭಾ ಲಕ್ಷ್ಮಣಕುಮಾರ್. ಹೀಗಾಗಿ ಸದರಿ ಹುದ್ದೆಗೆ ಅವಿರೋಧ ಆಯ್ಕೆ ನಿಶ್ಚಿತ. ಇನ್ನು, ಉಪಾಧ್ಯಕ್ಷ ಸ್ಥಾನ ಶೋಭಾ ಅಪ್ಪಾಜಿ ಅವರ ಪಾಲಾಗುವುದು ಖಚಿತವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.