ಆರೀಫ್ ಖುರೇಷಿ ರಾಜಿನಾಮೆಗೆ ಪಟ್ಟು
ರಾಮನಗರ: ಅಕ್ರಮ ಖಾತೆಗಳ ಕರ್ಮಕಾಂಡವು ನಗರಸಭೆಯಲ್ಲಿ ಶನಿವಾರ ನಡೆದ ತುರ್ತು ಅಧಿವೇಶನದಲ್ಲಿ ಪ್ರತಿಧ್ವನಿಸಿತು. ಹಗರಣದಲ್ಲಿ ಭಾಗಿಯಾದ ಅಧ್ಯಕ್ಷ ಆರೀಫ್ ಖುರೇಷಿ ರಾಜಿನಾಮೆಗೆ ಪಟ್ಟು ಹಿಡಿದು ಪ್ರತಿಭಟಿಸಿದ ಜೆಡಿಎಸ್ ಪುರಪಿತೃಗಳು ಕಡೆಗೆ ಸಭಾತ್ಯಾಗ ನಡೆಸಿದರು.
ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಅಧ್ಯಕ್ಷರ ಪೀಠದೆದುರು ಪ್ರತಿಭಟನೆಗೆ ಇಳಿದ ಜೆಡಿಎಸ್ ಸದಸ್ಯರು ಅಧ್ಯಕ್ಷ ಆರೀಫ್ ಖುರೇಷಿ ವಿರುದ್ಧ ಘೋಷಣೆ ಕೂಗಿದರು. ಹಗರಣ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜಿನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಸದಸ್ಯರ ಕೂಗಾಟ, ಗದ್ದಲಕ್ಕೆ ಪ್ರತಿಯಾಗಿ ಕೆಲ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರು. ಉದ್ವೇಗಕ್ಕೆ ಒಳಗಾಗಿ ವರ್ತಿಸಿದ ಅಧ್ಯಕ್ಷ ಆರೀಫ್ ಖುರೇಷಿ ಪ್ರತಿಭಟನಾನಿರತ ಜೆಡಿಎಸ್ ಸದಸ್ಯರ ವಿರುದ್ಧ ಹರಿಹಾಯ್ದರು.
ಮೊಳಗಿದ ಧಿಕ್ಕಾರ: ಒಂದು ಹಂತದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಬಿಗಡಾಯಿಸಿತ್ತು. ಕಳಂಕಿತ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಬಿಡೆವು. ಬೇಕಿದ್ದರೆ ಉಪಾಧ್ಯಕ್ಷರು ಅಧ್ಯಕ್ಷತೆ ವಹಿಸಿಕೊಂಡು ಸಭೆ ನಡೆಸಲಿ ಎಂದು ಜೆಡಿಎಸ್ ಸದಸ್ಯರು ಪಟ್ಟು ಹಿಡಿದು ಕುಳಿತರು.
ಗದ್ದಲ ಮತ್ತು ಪ್ರತಿಭಟನೆ ನಡುವೆಯೂ ಹಿಂದಿನ ಸಭಾ ನಡವಳಿ ಓದಲು ಪ್ರಾರಂಭಿಸಿದ ಆಯುಕ್ತ ಯಶವಂತ ಕುಮಾರ್ ವಿರುದ್ಧವೂ ಪ್ರತಿಭಟನಾನಿರತ ಜೆಡಿಎಸ್ ಸದಸ್ಯರು ಧಿಕ್ಕಾರ ಕೂಗಿದರು. ಅಧ್ಯಕ್ಷರ ವಿರುದ್ಧ ಟೀಕಾಪ್ರಹಾರವೂ ಮುಂದುವರೆಯಿತು. ಆವೇಶಭರಿತರಾಗಿ ಮಾತನಾಡಿದ ಅಧ್ಯಕ್ಷ ಆರೀಫ್ ಖುರೇಷಿ, ಸಭೆ ನಡೆಸಿಯೇ ತೀರುವೆ. ಅಡ್ಡಿ ಮುಂದುವರೆಸಿದ್ದೇ ಆದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಪ್ರತಿಭಟನಾನಿರತ ಪುರಪಿತೃಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.
ಗೊಂದಲವೋ ಗೊಂದಲ: ಆಗ ಅಧ್ಯಕ್ಷರ ಪರವಾಗಿ ವಕಾಲತ್ತು ವಹಿಸಿದ ನಿಜಾಂ ಪಾಷ ಮತ್ತು ಅಕ್ರಂ ಪಾಷ ಜೆಡಿಎಸ್ ಸದಸ್ಯರ ವಿರುದ್ಧ ತಿರುಗಿಬಿದ್ದರು. ಅದಕ್ಕೆ ಪ್ರತಿಯಾಗಿ ಜೆಡಿಎಸ್ ಸದಸ್ಯರೂ ಆರೋಪಗಳ ಸುರಿಮಳೆಗರೆಯುತ್ತಾ ಎದಿರೇಟು ನೀಡಿದರು. ಹೀಗೆ ಸುಮಾರು 2 ತಾಸು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಕಡೆಗೆ, ಅಧ್ಯಕ್ಷ ಆರೀಫ್ ಖುರೇಷಿ ಅವರು ಸಭಾಂಗಣಕ್ಕೆ ಪೊಲೀಸರನ್ನು ಕರೆಸಿಕೊಂಡು ಪ್ರತಿಭಟನಾನಿರತ ಪುರಪಿತೃಗಳನ್ನು ಹೊರ ಹಾಕಲು ಸಿದ್ಧವಾದರು. ಆಗ ಜೆಡಿಎಸ್ ಸದಸ್ಯರು ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು. ನಂತರ ನಾಮಕರಣ ಸದಸ್ಯರ ಜತೆಗೂಡಿ ಕಾಂಗ್ರೆಸ್ ಸದಸ್ಯರು ವಿವಿಧ ವಿಷಯಗಳಿಗೆ ಏಕಪಕ್ಷೀಯವಾಗಿ ಅನುಮೋದನೆ ಪಡೆದರು.
ಆವೇಶದಲ್ಲಿ ಏಕವಚನ ಪ್ರಯೋಗ
ತಮ್ಮ ವಿರುದ್ಧದ ಪ್ರತಿಭಟನೆಯಿಂದ ಕೆರಳಿದ ಅಧ್ಯಕ್ಷ ಆರೀಫ್ ಖುರೇಷಿ, ಸಭಾ ಗೌರವವನ್ನೇ ಮರೆತು ವರ್ತಿಸಿದರು. ಅಕ್ರಮ ಖಾತೆಗಳ ಹಗರಣದ ಬಗ್ಗೆ ಬರೆದ ಪತ್ರಕರ್ತ, ಅದನ್ನೇ ಮುಂದಿಟ್ಟುಕೊಂಡು ಪ್ರತಿಭಟನೆಗೆ ಇಳಿದ ಪುರಪಿತೃಗಳ ವಿರುದ್ಧ ಏಕವಚನ ಪ್ರಯೋಗಿಸಿ ಹದ್ದುಮೀರಿ ವರ್ತಿಸಿದರು. ಯಾವನೋ ಪತ್ರಿಕೆಯಲ್ಲಿ ಬರೆದುಬಿಟ್ಟ ಮಾತ್ರಕ್ಕೆ ನಾನು ಅಪರಾಧಿ ಆಗುವುದಿಲ್ಲ. ಹೇಗೂ ಅಕ್ರಮ ಖಾತೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲ ಸದಸ್ಯರ ಮೇಲೂ ತನಿಖೆ ಆಗಲಿ. ತಪ್ಪಿತಸ್ಥರು ಯಾರ್ಯಾರಿದ್ದಾರೋ ಅವರೆಲ್ಲರೂ ಹೊಣೆಯಾಗುತ್ತಾರೆ ಎಂದು ಆವೇಶಭರಿತರಾಗಿ ಹೇಳಿದರು. ಪ್ರತಿಭಟನಾನಿರತ ಪುರಪಿತೃಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರ ಬಾಯಲ್ಲಿ ಬಂದಿದ್ದು ನೀನು... ತಾನು... ಕೂತ್ಕೋ... ಎಂಬಿತ್ಯಾದಿ ಪದಗಳೇ ಆಗಿದ್ದವು. ಈ ವಿಷಯವಾಗಿ ಜೆಡಿಎಸ್ ಪುರಪಿತೃಗಳ ಆಕ್ಷೇಪಕ್ಕೂ ಅವರು ಸೊಪ್ಪು ಹಾಕಲಿಲ್ಲ.
ಗೂಂಡಾಗಿರಿ ಆರೋಪ
ಅಧ್ಯಕ್ಷರು ತಮ್ಮ ಚೇಲಾಗಳನ್ನು ಕರೆದುಕೊಂಡು ಬಂದು ಆಯುಕ್ತರಿಗೆ ಘೇರಾವ್ ಮಾಡಿಸಿದ್ದಾರೆ. ಅದೆಲ್ಲವೂ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನುವ ಕಾರಣಕ್ಕೆ ಅದನ್ನು ಅಳಿಸಿ ಹಾಕಲು ಖಾಸಗಿ ತಂತ್ರಜ್ಞರನ್ನು ಕರೆದುಕೊಂಡು ಆಯುಕ್ತರ ಕೊಠಡಿಗೂ ನುಗ್ಗಿದ್ದಾರೆ ಎಂದು ಜೆಡಿಎಸ್ ಸದಸ್ಯರಾದ ರವಿ, ಆರ್.ಎ.ಮಂಜುನಾಥ್, ಪರ್ವೇಜ್ ಪಾಷ, ಗೇಬ್ರಿಯಲ್ ಆರೋಪಿಸಿದರು. ಜವಾಬ್ದಾರಿ ಸ್ಥಾನದಲ್ಲಿರುವ ನೀವು ಗೂಂಡಾ ರೀತಿ ವರ್ತಿಸುತ್ತಿದ್ದೀರಿ. ಸದಸ್ಯರ ವಿರುದ್ಧ ಏಕವಚನ ಪ್ರಯೋಗಿಸಿ ಧಮಕಿ ಹಾಕುತ್ತಿದ್ದೀರಿ. ನೀವು ಸ್ಥಾನದ ಘನತೆ ಕಾಪಾಡುತ್ತಿಲ್ಲ. ನಿಮ್ಮ ದರ್ಪ, ದೌರ್ಜನ್ಯ ಮತ್ತು ದುರಾಡಳಿತಕ್ಕೆ ಧಿಕ್ಕಾರವಿರಲಿ ಎಂದು ಸಭಾತ್ಯಾಗದ ಸಂದರ್ಭದಲ್ಲಿ ಪುರಪಿತೃಗಳು ಘೋಷಣೆ ಕೂಗಿದರು. ನಿಮ್ಮದೇ ಸ್ವಂತ ಆಸ್ತಿಗೆ ಯಾರೋ ಅಕ್ರಮ ಖಾತೆ ಮಾಡಿಸಿದ್ದಾರೆ ಎಂದು ಪ್ಲೇಟ್ ಬದಲಿಸುತ್ತಿದ್ದೀರಿ. ಹಾಗಾಗಿದೆ ಎನ್ನುವುದೇ ಆದರೆ ನೀವೊಬ್ಬ ಅಸಮರ್ಥ ಅಧ್ಯಕ್ಷ. ನಿಮ್ಮ ಆಸ್ತಿಯನ್ನೇ ರಕ್ಷಿಸಿಕೊಳ್ಳಲಾರದ ನಿಮ್ಮಿಂದ ಈ ಪುರೋಭಿವೃದ್ಧಿ, ಪುರ ಜನರ ಹಿತ ರಕ್ಷಣೆ ಹೇಗೆತಾನೆ ಸಾಧ್ಯ ಎಂದು ಮಂಜುನಾಥ್ ತಿರುಗೇಟು ನೀಡಿದರು.
ಕನ್ನಡಪ್ರಭ ಪ್ರತಿ ಹಿಡಿದು ಪ್ರತಿಭಟನೆ
ನಗರಸಭೆ ತುರ್ತು ಸಭೆಯಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಪುರಪಿತೃಗಳ ಕೈಯಲ್ಲಿ ಅಧ್ಯಕ್ಷ ಆರೀಫ್ ಖುರೇಷಿಯೇ ಅಕ್ರಮ ಖಾತೆಗಳ ಸರದಾರ ಎನ್ನುವ ತಲೆಬರಹದಲ್ಲಿ ಜು.11ರಂದು ಪ್ರಕಟವಾಗಿದ್ದ ಕನ್ನಡಪ್ರಭದ ವಿಶೇಷ ವರದಿಯ ಜೆರಾಕ್ಸ್ ಪ್ರತಿಗಳು ರಾರಾಜಿಸಿದವು. ಕನ್ನಡಪ್ರಭದಲ್ಲಿ ರಾಮನಗರ ನಗರಸಭೆಯ ಅಕ್ರಮ ಖಾತೆ ಕರ್ಮಕಾಂಡದ ಬಗ್ಗೆ 9 ದಿನ ಸರಣಿ ರೂಪದಲ್ಲಿ ಪ್ರಕಟಿಸಿ, ಹಗರಣವನ್ನು ಎಳೆ ಎಳೆಯಾಗಿ ಬಿಡಿಸಿಡಲಾಗಿತ್ತು. ಆ ಪೈಕಿ ಬಹುತೇಕ ಅಂಶಗಳನ್ನು ಪ್ರತಿಭಟನಾನಿರತ ಪುರಪಿತೃಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಜೆಡಿಎಸ್ ಸದಸ್ಯರು ಪ್ರಮುಖವಾಗಿ ಅಧ್ಯಕ್ಷ ಆರೀಫ್ ಖುರೇಷಿ ಅವರನ್ನೇ ಟಾರ್ಗೆಟ್ ಮಾಡಿದ್ದರು. ತಮ್ಮ ಸ್ವಂತ ಜಮೀನಿಗೇ ಅಕ್ರಮ ಖಾತೆ ಮಾಡಿಸಿಕೊಂಡ ಅಧ್ಯಕ್ಷರಿಗೆ ಹುದ್ದೆಯಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದರು.
ನಾನವನಲ್ಲ... ನಾನವನಲ್ಲ... ನಾನವನಲ್ಲ...
ಇದು ಬುದ್ಧಿವಂತ ಸಿನೆಮಾದಲ್ಲಿ ಬರುವ ನ್ಯಾಯಾಲಯದ ದೃಶ್ಯದಲ್ಲಿ ಉಪೇಂದ್ರ ಹೇಳುವ ಮಾತು. ಹೀಗೆಯೇ ನಗರಸಭೆ ತುರ್ತು ಅಧಿವೇಶನದಲ್ಲಿ ಅಧ್ಯಕ್ಷ ಆರೀಫ್ ಖುರೇಷಿ ಕೂಡ ಅಕ್ರಮ ಖಾತೆಗೂ ನನಗೂ ಸಂಬಂಧವಿಲ್ಲ... ಎಂದು ಪದೇ ಪದೇ ಹೇಳುತ್ತಿದ್ದರು. ನನ್ನ ವಿರೋಧಿಗಳು ನನ್ನನ್ನು ರಾಜಕೀಯವಾಗಿ ಹಣಿಯುವುದಕ್ಕಾಗಿಯೇ ನನ್ನ ಸ್ವಂತ ಆಸ್ತಿಗೆ ಅಕ್ರಮ ಖಾತೆ ಮಾಡಿದ್ದಾರೆ. ನಾನು ಅಕ್ರಮ ಖಾತೆ ಮಾಡಿಸಿಕೊಳ್ಳಲು ಯಾರ ಬಳಿಯೂ ಹೋಗಿರಲಿಲ್ಲ ಎನ್ನುವ ವಾದ ಮಂಡಿಸಲುತ್ತಲೇ ಸಾಗಿದರು. ಈ ಬಗ್ಗೆ ಪ್ರತಿಭಟನಾನಿರತ ಪುರಪಿತೃಗಳು ಗೇಲಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

