18 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ
ಜಿಲ್ಲಾಡಳಿತ, ಜಿ.ಪಂ. ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ
ರಾಮನಗರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ನಾಗರಿಕರು ಹೋರಾಟದ ಹಾದಿ ಹಿಡಿದಿದ್ದಾರೆ. ರಾಮನಗರ ತಾಲೂಕಿನ ದೊಡ್ಡಗಂಗವಾಡಿ ಮತ್ತು ಜಾಲಮಂಗಲ ಗ್ರಾ.ಪಂ. ವ್ಯಾಪ್ತಿಯ ನಾನಾ ಗ್ರಾಮಗಳ ಜನರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಜನಪ್ರತಿನಿಧಿಗಳು, ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿ.ಪಂ. ವಿರುದ್ಧ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
18 ಗ್ರಾಮಗಳಲ್ಲಿ ಸಮಸ್ಯೆ: ದೊಡ್ಡಗಂಗವಾಡಿ ಮತ್ತು ಜಾಲಮಂಗಲ ಗ್ರಾ.ಪಂ. ವ್ಯಾಪ್ತಿಯ ಜಾಲಮಂಗಲ, ತಡಿಕವಾಗಿಲು, ಕುರುಬರಹಳ್ಳಿ, ತಾಲವಾಡಿ, ನಿಜಿಯಪ್ಪನದೊಡ್ಡಿ, ಅಕ್ಕೂರು, ದೊಡ್ಡಗಂಗವಾಡಿ, ವಿರುಪಸಂದ್ರ ಸೇರಿದಂತೆ 18 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೂ ಸಂಬಂಧಿಸಿದವರು ಗಮನ ಹರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಸಂಬಂಧ ಜಿಲ್ಲಾಡಳಿತ ಹಾಗೂ ಜಿ.ಪಂ.ಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾಗ್ಯೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳಲ್ಲಿನ ಹೊಂದಾಣಿಕೆ ಕೊರತೆ ಪರಿಣಾಮ ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಸೌಲಭ್ಯವೂ ನಿಂತು ಹೋಗಿದೆ ಎಂದು ಆರೋಪಿಸಿದರು.
ಹೈನೋದ್ಯಮಕ್ಕೂ ಪೆಟ್ಟು: ಉಭಯ ಗ್ರಾ.ಪಂ.ಗಳಲ್ಲಿ ಬಹುತೇಕರು ಹೈನುಗಾರಿಕೆ ಅವಲಂಬಿಸಿದ್ದಾರೆ. ಜನರಿಗೆ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಜಾನುವಾರುಗಳಿಗೆ ತಂದು ಒದಗಿಸುವುದಾದರೂ ಹೇಗೆನ್ನುವ ಚಿಂತೆ ಕಾಡಿದೆ. ನೀರಿನ ಅಭಾವದಿಂದಾಗಿ ಹೈನೋದ್ಯಮದ ಮೇಲೂ ಪೆಟ್ಟು ಬಿದ್ದಿದೆ ಎಂದು ದೂರಿದರು.
ಡಿಸಿ ಭೇಟಿಗೆ ಆಗ್ರಹ: ಸರ್ಕಾರದಿಂದ ಕೊರೆಸುವ ಕೊಳವೆ ಬಾವಿಗಳಲ್ಲಿ ನೀರೇ ಬರುತ್ತಿಲ್ಲ. ವಿಫಲವಾದ ಕೊಳವೆ ಬಾವಿಗಳಲ್ಲೂ ಸುಳ್ಳು ಲೆಕ್ಕ ನೀಡಿ ಹಣ ದೋಚುವ ಕೆಲಸ ನಡೆಯುತ್ತಿದೆ. ಈ ಗ್ರಾಮಗಳಿಗೆ ಜಿಲ್ಲಾಧಿಕಾರಿ ಅವರೇ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಾಲಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಯ್ಯ, ದೊಡ್ಡಗಂಗವಾಡಿ ಗ್ರಾ.ಪಂ. ಅಧ್ಯಕ್ಷ ಡಿ.ಎಂ. ಮಹದೇವಯ್ಯ, ತಾ.ಪಂ. ಸದಸ್ಯ ಎಚ್. ಶಿವಪ್ರಸಾದ್, ಮುಖಂಡರಾದ ಬ್ಯಾಟಪ್ಪ, ಪುಟ್ಟರಾಮಣ್ಣ, ಹನುಮೇಗೌಡ, ಸದಾಶಿವಯ್ಯ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

