ಮೊದಲು ಕುಡಿವ ನೀರು ಒದಗಿಸಿ
ಕ.ಪ್ರ.ವಾರ್ತೆ ರಾಮನಗರ ಆ. 5
ಮಳೆಗಾಲ ಪ್ರಾರಂಭವಾಗಿ ತಿಂಗಳುಗಳೇ ಕಳೆದರೂ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಇದರಿಂದಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಹೇಗಾದರೂ ಸರಿಯೇ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಿ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕೊಳವೆ ಬಾವಿಗಳು ವಿಫಲಗೊಂಡಿವೆ. ಹೊಸದಾಗಿ ಕೊರೆದಿರುವ ಕೆಲ ಕೊಳವೆ ಬಾವಿಗಳಲ್ಲಿ ನೀರಿದ್ದರೂ ಪಂಪು, ಮೋಟಾರು ಅಳವಡಿಕೆಯಾಗದ್ದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸಮರ್ಪಕ ನೀರು ಪೂರೈಸಬೇಕು ಎಂದರು.
ಜನಸಂಪರ್ಕ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಅಸಡ್ಡೆಯ ಬಗ್ಗೆ ದೂರು ನೀಡಿದಾಗ ಕೆಂಡಾಮಂಡಲರಾದ ಬಾಲಕೃಷ್ಣ ಕೊಳವೆ ಬಾವಿ ತೋಡಿಸುತ್ತೀರೋ ಅಥವಾ ದೇವೇಂದ್ರನನ್ನೇ ಭೂಮಿಗೆ ಇಳಿಸುತ್ತೀರೋ ಗೊತ್ತಿಲ್ಲ. ಆದರೆ, ಜನರಿಗೆ ಅಗತ್ಯವಿರುವ ನೀರು ಒದಗಿಸಿ ಎಂದು ತರಾಟೆಗೆ ತೆಗೆದುಕೊಂಡರು. ತಡಿಕವಾಗಿಲು ಗ್ರಾಮದಲ್ಲಿ ಇದ್ದ ಕೊಳವೆ ಬಾವಿ ಬತ್ತಿದೆ. ಹೊಸದಾಗಿ ಕೊಳವೆ ಬಾವಿ ಕೊರೆಸಿ ಎಂದು ಮನವಿ ಮಾಡಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೋಳಮಾರನಕುಪ್ಪೆಯಲ್ಲಿ ಪಂಪ್, ಮೋಟಾರ್ ಇಳಿಸಿದ್ದು, ನೀರು ಕೂಡ ಸರಬರಾಜಾಗುತ್ತಿದೆ. ಆದರೆ, ಪಂಪ್, ಮೋಟಾರ್ನ ಹಣ ಮಾತ್ರ ಅಧಿಕಾರಿಗಳು ಇನ್ನೂ ಪಾವತಿಸಿಲ್ಲ. ನೀರಿನ ಸಮಸ್ಯೆಗೆಂದೇ ಪ್ರಾರಂಭಿಸಿರುವ ಸಹಾಯವಾಣಿ ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ದಿನೇ ದಿನೇ ಜಟಿಲ: ಅತಿ ವೇಗವಾಗಿ ಬೆಳೆಯುತ್ತಿರುವ ಬಿಡದಿ ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆ ದಿನೇ ದಿನೇ ಜಟಿಲವಾಗುತ್ತಿದೆ. ಬಾನಂದೂರು ಸರ್ವೆ ಸಂಖ್ಯೆ 111ರಲ್ಲಿರುವ ಗೋಮಾಳದ ಪೈಕಿ 5 ಎಕರೆ ಪ್ರದೇಶವನ್ನು ಕಸ ವಿಲೇವಾರಿಗೆ ಮಂಜೂರು ಮಾಡಿಸಿಕೊಡುವಂತೆ ಬಿಡದಿ ಗ್ರಾ.ಪಂ. ಅಧ್ಯಕ್ಷೆ ಆರ್.ಕೆ.ಸರೋಜ ಹಾಗೂ ಸದಸ್ಯ ಬಿ.ಎಂ.ಪುಟ್ಟಮಾದಯ್ಯ ಬಾಲಕೃಷ್ಣ ಅವರಲ್ಲಿ ಮನವಿ ಮಾಡಿದರು.
ಬಿಡದಿ ಜನಸಂಖ್ಯೆ ಮತ್ತು ವ್ಯಾಪಾರ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ದಿನನಿತ್ಯ 10 ಟ್ರ್ಯಾಕ್ಟರ್ನಷ್ಟು ಕಸ ಉತ್ಪತ್ತಿಯಾಗುತ್ತಿದೆ. ಆದರೆ, ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಕಸವನ್ನು ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ. ಕಸ ವಿಲೇವಾರಿಗೆ ಸ್ಥಳ ಕೊಡಿಸುವಂತೆ ಜಿಲ್ಲಾಡಳಿತಕ್ಕೆ ಪದೇ ಪದೇ ಮನವಿ ಮಾಡಿದ್ಯಾಗ್ಯೂ ಉಪಯೋಗವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಸಮಸ್ಯೆಗಳನ್ನು ಆಲಿಸಿದ ಶಾಸಕ ಬಾಲಕೃಷ್ಣ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ತಹಸಿಲ್ದಾರ್ ಮಂಜಪ್ಪ, ತಾ.ಪಂ. ಇಒ ವೆಂಕಟೇಶ್, ಸದಸ್ಯ ಶಿವಪ್ರಸಾದ್, ಜೆಡಿಎಸ್ ಮುಖಂಡ ಬ್ಯಾಟಪ್ಪ, ಜಿ.ರಾಮಯ್ಯ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

