ಅಕ್ರಮ ಖಾತಾ ತನಿಖೆ ನಡೆಯಲಿ
ರಾಮನಗರ: ಚನ್ನಪಟ್ಟಣ ನಗರಸಭೆಯಲ್ಲಿ ನಡೆದಿರುವ ಅಕ್ರಮ ಖಾತಾ ಕರ್ಮಕಾಂಡ ಹಾಗೂ ಇತರೆ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ
ಪುರಪಿತೃಗಳು, ನಾಗರಿಕರ ನಿಯೋಗವು ಸೋಮವಾರ ಮನವಿ ಸಲ್ಲಿಸಿದೆ.
ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರಿಗೆ ಸಲ್ಲಿಸಲಾದ ಮನವಿಗೆ ಪಕ್ಷಾತೀತವಾಗಿ 16 ಪುರಪಿತೃಗಳು, ನಿವೇಶನ ಹಂಚಿಕೆಯಲ್ಲಿ ನಗರಸಭೆಯಿಂದ ವಂಚನೆಗೆ ಒಳಗಾಗಿರುವ ನಾಗರಿಕರು ಸಹಿ ಮಾಡಿದ್ದಾರೆ.
ದಂಡ ವಿಧಿಸಿ: ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ರಾಮನಗರವನ್ನೂ ಮೀರಿಸುವ ಮಟ್ಟಕ್ಕೆ ಅಕ್ರಮ ಖಾತೆಗಳು ಆಗಿವೆ. ಇಷ್ಟು ಸಾಲದೆನ್ನುವಂತೆ ಖರಾಬು ಜಮೀನನ್ನು ಒತ್ತುವರಿ ಮಾಡಿಕೊಂಡು, ಅದರಲ್ಲೂ ನಿವೇಶನಗಳನ್ನು ರಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭೂ ಪರಿವರ್ತನೆ ಮಾಡಿಸದೆ, ಅಭಿವೃದ್ಧಿ ಶುಲ್ಕವನ್ನು ಪಾವತಿಸದೆ ರಚಿಸಲಾಗಿರುವ ಎಲ್ಲ ಅನಧಿಕೃತ ಬಡಾವಣೆಗಳನ್ನು ರದ್ದುಪಡಿಸಬೇಕು. ಸಾರ್ವಜನಿಕ ಉದ್ದೇಶಕ್ಕೆ ಜಾಗ ಕಲ್ಪಿಸದವರಿಗೆ ಸೂಕ್ತ ದಂಡ ವಿಧಿಸಬೇಕು ಎಂದು ಆಗ್ರಹಿಸಲಾಗಿದೆ.
ಕ್ರಮ ಜರುಗಿಸಿ: ಖಾತಾ ವಹಿಯ ಪುಟಗಳಲ್ಲಿ ಉಪ ಸಂಖ್ಯೆಗಳನ್ನು ನೀಡುವ ಮೂಲಕ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಬೋಗಸ್ ಖಾತೆ ಸೃಷ್ಟಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆಯುಕ್ತರು, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಅಕ್ರಮ ಖಾತೆ ಮತ್ತು ಭೂ ಹಗರಣಗಳಿಗೆ ಸಂಬಂಧಿಸಿದಂತೆ ಎರಡೂವರೆ ವರ್ಷದ ಹಿಂದೆಯೇ ಕಡತಕ್ಕೆ ಬೆಂಕಿ ಹಚ್ಚಲಾಗಿದೆ. ಅದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಅದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಹಿರಂಗಕ್ಕೆ ಆಗ್ರಹ: ಚನ್ನಪಟ್ಟಣ ನಗರಸಭೆಯಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಅದರ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಅದನ್ನು ತಕ್ಷಣ ಬಹಿರಂಗಪಡಿಸಬೇಕು ಎಂದು ದೂರುದಾರರು ಒತ್ತಾಯಪಡಿಸಿದ್ದಾರೆ.
ತನಿಖೆಗೂ ಮುನ್ನವೇ ಕಡತಗಳಿಗೆ ಬೆಂಕಿ ಹಚ್ಚಿರುವುದರಿಂದ ಸಾಕ್ಷ್ಯಾಧಾರ ನಾಶವಾಗಿರುವ ಸಂಶಯವಿದೆ. ತನಿಖಾ ವರದಿಯಲ್ಲಿ ಅದೆಷ್ಟೋ ಸತ್ಯಾಂಶಗಳು ಮುಚ್ಚಿ ಹೋಗಿರಬಹುದು. ಹೀಗಾಗಿ ಉನ್ನತ ತನಿಖೆ ಆಗಬೇಕಿದೆ ಎಂದಿದ್ದಾರೆ.
ಎತ್ತಂಗಡಿ ಮಾಡಿ: ನಗರಸಭೆಯಲ್ಲಿ ಸ್ಥಳೀಯರು ಸಹಿತ ಕೆಲವರು ವಿವಿಧ ಹುದ್ದೆಗಳಲ್ಲಿ ಹತ್ತಾರು ವರ್ಷದಿಂದ ಠಿಕಾಣಿ ಹೂಡಿರುತ್ತಾರೆ. ಅವರಿಂದಾಗಿಯೇ ಹಗರಣಗಳು ಹೆಚ್ಚುತ್ತಿವೆ. ಅಂತಹವರನ್ನು ಎತ್ತಂಗಡಿ ಮಾಡಬೇಕು ಎನ್ನುವ ಒತ್ತಾಯವು ನಿಯೋಗದಿಂದ ವ್ಯಕ್ತವಾಗಿದೆ.
ಕೆಲಸಕ್ಕೆ ಸೇರಲು ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ, ಹೊರಗಿನವರನ್ನು ಕೆಲಸಕ್ಕಿಟ್ಟುಕೊಂಡು ಅಕ್ರಮಗಳಲ್ಲಿ ತೊಡಗಿರುವವರು ಚನ್ನಪಟ್ಟಣ ನಗರಸಭೆಯಲ್ಲಿದ್ದಾರೆ. ಅವರ ವಿರುದ್ಧ ದೂರು ನೀಡಿದ್ದಾಗ್ಯೂ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಬಡಾವಣೆ ಅಕ್ರಮ: ನಗರಸಭೆಯಿಂದಲೇ ರಚಿಸಲಾದ ಐ.ಡಿ.ಎಸ್.ಎಂ.ಟಿ. ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಒಬ್ಬರಿಗೆ ಮಂಜೂರಾದ ನಿವೇಶನವನ್ನು ಮತ್ತೊಬ್ಬರಿಗೆ ನೋಂದಣಿ ಮಾಡಿಕೊಟ್ಟು, ಖಾತೆಯನ್ನೂ ಮಾಡಿಕೊಡಲಾಗಿರುವ ಅಂಶವೂ ಮನವಿಯಲ್ಲಿ ಸೇರಿದೆ.
ಲಂಚದ ಆಸೆಗೆ ಬಿದ್ದು, ನಿವೇಶನಗಳನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿರುವ ಮತ್ತು ಕಾನೂನು ಬಾಹಿರವಾಗಿ ಉಳಿಕೆ ನಿವೇಶನಗಳನ್ನು ತಾವೇ ಹಂಚಿಕೊಂಡಿರುವ ಅಧಿಕಾರಿಗಳು, ಸಿಬ್ಬಂದಿಯನ್ನೂ ಶಿಕ್ಷೆಗೆ ಗುರಿಪಡಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಜೆಡಿಎಸ್ ಪುರಪಿತೃ ಲೋಕೇಶ್ ನೇತೃತ್ವದ ನಿಯೋಗದಲ್ಲಿ ಜಕೀ ಅಹಮದ್ ಖಾನ್, ಲಿಯಾಖತ್, ಹಾಸೀಂ, ನಾಗರಿಕರು ನಿಯೋಗದಲ್ಲಿದ್ದರು. ಮನವಿ ಕುರಿತು ಜಿಲ್ಲಾಧಿಕಾರಿ ಜತೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಸವರಾಜು ಭರವಸೆ ನೀಡಿದರು.
ಸರ್ಕಾರಿ ಆಸ್ತಿ ಉಳಿಸಿ
ರಾಜ್ಯದ ಬೇರೆ ಯಾವುದೇ ಪೌರ ಸಂಸ್ಥೆ ವ್ಯಾಪ್ತಿಯಲ್ಲೂ ಇಲ್ಲದಷ್ಟು ಸರ್ಕಾರ ಮತ್ತು ನಗರಸಭೆಗೆ ಸೇರಿದ ಆಸ್ತಿ ಚನ್ನಪಟ್ಟಣದಲ್ಲಿದೆ. ಅದೆಲ್ಲವೂ ಭೂ ಮಾಫಿಯಾದಿಂದ ಅತಿಕ್ರಮಣ ಆಗುತ್ತಿರುವ ಬಗ್ಗೆ ನಿಯೋಗವು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದೆ. ಸರ್ಕಾರ ಮತ್ತು ನಗರಸಭೆಗೆ ಸೇರಿದ ಆಸ್ತಿಯನ್ನು ಭೂ ಮಾಪನ ಮತ್ತು ಹದ್ದುಬಸ್ತು ಮಾಡಿಸಬೇಕು. ಸದರಿ ಆಸ್ತಿ ಸರ್ಕಾರದ ಸ್ವತ್ತೆಂದು ಫಲಕ ಅಳವಡಿಸಿ, ಕಬಳಿಕೆ ಆಗುವುದನ್ನು ತಡೆಗಟ್ಟಬೇಕು ಎಂದು ನಿಯೋಗವು ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

