ಅಕ್ರಮ ಖಾತೆ ತನಿಖೆಗೆ ಆಗ್ರಹ
-ವಿಶೇಷ ವರದಿ
ರಾಮನಗರ: ಚನ್ನಪಟ್ಟಣ ನಗರಸಭೆಯಲ್ಲಿ ನಡೆದಿರುವ ಅಕ್ರಮ ಖಾತೆಗಳ ಕರ್ಮಕಾಂಡ ಹಾಗೂ ಇತರೆ ಹಗರಣಗಳನ್ನೂ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಲಿಖಿತ ಮನವಿ ಸಲ್ಲಿಸಲು ಅಲ್ಲಿನ ಪುರಪಿತೃಗಳ ನಿಯೋಗವೊಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಭೇಟಿಗೆ ನಿರ್ಧರಿಸಿದೆ.
ಈಗಾಗಲೇ ರಾಮನಗರ ನಗರಸಭೆಯ 10 ಪುರಪಿತೃಗಳ ಮನವಿಗೆ ಸ್ಪಂದಿಸಿರುವ ಜಮಾದಾರ್ ಅವರು ನಗರಸಭೆಯ ಹಿಂದಿನ ಆಯುಕ್ತ ಯಶವಂತ ಕುಮಾರ್ ಅವರಿಂದ ಪ್ರಾಥಮಿಕ ವರದಿ ಪಡೆದು, ಅಕ್ರಮ ಖಾತೆಗಳ ಅವ್ಯವಹಾರದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಚನ್ನಪಟ್ಟಣ ನಗರಸಭೆಯಲ್ಲಿ ರಾಮನಗರ ನಗರಸಭೆಯನ್ನೂ ಮೀರಿಸುವ ಮಟ್ಟಕ್ಕೆ ಖಾತಾ ಅಕ್ರಮ, ಅವ್ಯವಹಾರಗಳು ನಡೆದಿವೆ. ಹೀಗಾಗಿ ಚನ್ನಪಟ್ಟಣ ನಗರಸಭೆ ಹಗರಣಗಳ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವ ಮನವಿಗೆ ಈಗಾಗಲೇ 10ಕ್ಕೂ ಹೆಚ್ಚು ಪುರಪಿತೃಗಳು ಸಹಿ ಹಾಕಿದ್ದಾರೆ.
ಮಾಹಿತಿ ಹಕ್ಕು ಅರ್ಜಿ: ಚನ್ನಪಟ್ಟಣ ನಗರಸಭೆಯ ಐ.ಡಿ.ಎಸ್.ಎಂ.ಟಿ. ಮತ್ತು ಆಶ್ರಯ ಯೋಜನೆಗಳಡಿ ನಿವೇಶನಗಳ ಹಂಚಿಕೆ, ಅಕ್ರಮ ಖಾತೆಗಳು, ಸರ್ಕಾರಿ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ಹಕ್ಕು ಅಧಿ ನಿಯಮದಡಿ ದಾಖಲೆಗಳನ್ನು ಪಡೆದುಕೊಳ್ಳುವ ಕೆಲಸ ಪುರಪಿತೃಗಳಿಂದಲೇ ನಡೆದಿದೆ.
ಐ.ಡಿ.ಎಸ್.ಎಂ.ಟಿ. ಬಡಾವಣೆಯ ನಿವೇಶನಗಳ ಹಂಚಿಕೆ ಹಗರಣವನ್ನು ಲೋಕಾಯುಕ್ತ ತನಿಖೆ ನಡೆಸಿದ್ದು, ತನಿಖಾಧಿಕಾರಿಯು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಕಡತಗಳಿಗೆ ಬೆಂಕಿ ಹಚ್ಚಿದ್ದರ ಪರಿಣಾಮ ಅಧಿಕಾರಿಗಳು ಮತ್ತು ಸಿಬ್ಬಂದಿ ಬಚಾವಾಗುವ ಸಾಧ್ಯತೆ ಇದೆ ಎನ್ನುವ ಅನುಮಾನ ಕಾಡುತ್ತಿದೆ.
ಬೆಂಕಿ ತನಿಖೆಗೆ ಆಗ್ರಹ: ಬೆಂಕಿ ಹಚ್ಚಿರುವ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಂಚು ಅದರಲ್ಲಿ ಅಡಗಿದ್ದು, ಅದೇನೂ ಆಕಸ್ಮಿಕ ಘಟನೆ ಖಂಡಿತ ಅಲ್ಲ. ಹೀಗಾಗಿ ಬೆಂಕಿ ಹಚ್ಚಿದವರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಮ ಜರುಗಿಸುವ ಕೆಲಸ ಮೊದಲು ಆಗಬೇಕೆನ್ನುವ ಕೂಗು ಕೇಳಿ ಬಂದಿದೆ. ಈ ಪೌರ ಸಂಸ್ಥೆಯಲ್ಲಿ ನಡೆದಿರುವ ಹಗರಣಗಳ ಸಂಬಂಧ ಸಾಕ್ಷಾಧಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲ ದಾಖಲೆಗಳನ್ನೂ ಸಂಗ್ರಹಿಸಲಾಗಿದೆ. ಅದೆಲ್ಲವನ್ನೂ ಜಿಲ್ಲಾಧಿಕಾರಿ ಎದುರು ಹಾಜರುಪಡಿಸಿ, ತನಿಖೆಗೆ ಆಗ್ರಹಿಸುವುದು ಪುರಪಿತೃಗಳ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಆಸ್ತಿ ರಕ್ಷಣೆಯ ಉದ್ದೇಶ: ಚನ್ನಪಟ್ಟಣದ ನಗರಸಭೆಯಲ್ಲಿ ನಡೆದಿರುವ ಹಗರಣಗಳ ಸಂಬಂಧ ತನಿಖೆ ಮಾತ್ರವಲ್ಲದೆ ಆ ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ನಗರಸಭೆ ಹಾಗೂ ಸರ್ಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲೂ ಪುರಪಿತೃಗಳು ಕಾಳಜಿ ವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.
ಈಗಾಗಲೇ ಸರ್ಕಾರಿ ಆಸ್ತಿ ಸಾಕಷ್ಟು ಕಬಳಿಕೆಯಾಗಿದೆ. ಇನ್ನಷ್ಟು ಕಬಳಿಕೆಯಾಗುವ ಹಂತದಲ್ಲಿದೆ. ಹೀಗಾಗಿ ಎಲ್ಲೆಲ್ಲೆ ನಗರಸಭೆ ಹಾಗೂ ಸರ್ಕಾರಿ ಆಸ್ತಿ ಇದೆಯೋ ಅದನ್ನೆಲ್ಲ ಅಳತೆ ಮಾಡಿಸಿ, ಅದರಲ್ಲಿ ಸರ್ಕಾರದ ಆಸ್ತಿ ಎನ್ನುವ ಫಲಕ ಹಾಕಿಸಬೇಕೆಂದು ಒತ್ತಾಯ ಮಾಡಲು ನಿಯೋಗ ತೀರ್ಮಾನಿಸಿದೆ. ಐ.ಡಿ.ಎಸ್.ಎಂ.ಟಿ. ಯೋಜನೆಯಡಿ ಸಾಕಷ್ಟು ನಿವೇಶನಗಳನ್ನು ಒಬ್ಬರಿಗಿಂತ ಹೆಚ್ಚು ಮಂದಿಗೆ ನೋಂದಣಿ ಮಾಡಿಸಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ಫಲಾನುಭವಿಗಳಿಂದಲೂ ಲಿಖಿತ ದೂರು ಪಡೆದುಕೊಂಡು, ಮನವಿ ಪತ್ರದೊಂದಿಗೆ ಲಗತ್ತಿಸಲಾಗಿದೆ.
ಕಾಳಜಿ ವಹಿಸುವರೇ: ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರು ಅದ್ಯಾವ ಉದ್ದೇಶಕ್ಕೆ ರಾಮನಗರ ನಗರಸಭೆಯಲ್ಲಿನ ಅಕ್ರಮ ಖಾತೆಗಳ ಕರ್ಮಕಾಂಡದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೋ ಗೊತ್ತಿಲ್ಲ. ಈಗ ಅವರ ಮೇಲೆ ಸಾಕಷ್ಟು ಒತ್ತಡ ಹೇರಿ, ತನಿಖೆ ಹಳ್ಳಿ ಹಿಡಿಸುವ ಷಡ್ಯಂತ್ರ ನಡೆದಿದೆ.
ರಾಮನಗರ ನಗರಸಭೆ ಹಗರಣಗಳನ್ನು ತನಿಖೆಗೊಪ್ಪಿಸಿದ ಜಿಲ್ಲಾಧಿಕಾರಿ ಜಮಾದಾರ್ ಈಗಾಗಲೇ ಅಡಕತ್ತರಿಗೆ ಸಿಲುಕಿದ್ದಾರೆ. ಚನ್ನಪಟ್ಟಣ ನಗರಸಭೆಯ ಅವ್ಯವಹಾರಗಳ ಬಗ್ಗೆ ತನಿಖೆಗೆ ಆದೇಶಿಸಿ ದಿಟ್ಟತನ ಪ್ರದರ್ಶಿಸುವರೇ ಕಾದು ನೋಡಬೇಕಿದೆ.
ಸ್ಕ್ಯಾನಿಂಗ್ ಯತ್ರ ಖರೀದಿ
ರಾಮನಗರ ನಗರಸಭೆಯ ಅಕ್ರಮ ಖಾತೆಗಳ ಅವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶೈಲಜಾ ಅವರು ಖಾತಾ ವಹಿಯ ಪುಟಗಳನ್ನು ಸ್ಕ್ಯಾನಿಂಗ್ ಮಾಡಿಸಲು ಹೊಸದೊಂದು ಸ್ಕ್ಯಾನಿಂಗ್ ಯಂತ್ರವನ್ನು ಖರೀದಿಸಿದ್ದಾರೆ. ಖಾತಾ ವಹಿ ಪುಟಗಳು ಎ4 ಅಳತೆಗಿಂತ ಉದ್ದ ಮತ್ತು ಅಗಲವಿದ್ದು, ಸಾಧಾರಣ ಸ್ಕ್ಯಾನಿಂಗ್ ಯಂತ್ರದಲ್ಲಿ ಅವನ್ನು ಸ್ಕ್ಯಾನ್ ಮಾಡಲಾಗದು. ಹೀಗಾಗಿ ಹೊಸ ಸ್ಕ್ಯಾನಿಂಗ್ ಯಂತ್ರವನ್ನೇ ಖರೀದಿಸಲಾಗಿದ್ದು, ಈಗಾಗಲೇ ದಾಖಲೆಗಳ ಸ್ಕ್ಯಾನಿಂಗ್ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಸೋಮವಾರ ಸಲ್ಲಿಕೆ
ಚನ್ನಪಟ್ಟಣದಲ್ಲಿ ನಡೆದಿರುವ ಅಕ್ರಮ ಖಾತೆ ಕರ್ಮಕಾಂಡ ಮತ್ತು ಇತರೆ ಅವ್ಯವಹಾರಗಳ ಬಗ್ಗೆ ತನಿಖೆಗೆ ಒತ್ತಾಯಿಸಲು ಪುರಪಿತೃಗಳಿಂದ ಸಹಿ ಸಂಗ್ರಹ ಕಾರ್ಯ ನಡೆದಿದೆ. ಪುರಪಿತೃಗಳ ನಿಯೋಗವು ಸೋಮವಾರ(ಆ.4) ಜಿಲ್ಲಾಧಿಕಾರಿ ಅವರನ್ನು ಖುದ್ದು ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಲಿದೆ ಎಂದು ಪುರಪಿತೃ ಒಬ್ಬರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

