ಬೆಂಗಳೂರು ಗ್ರಾಮಾಂತರ

20ನಿಮಿಷ 20ಸುದ್ದಿ

Published On :

ರಾಮನಗರ: ಕೊಳವೆ ಬಾವಿ ಕೊರೆಯುವ ವಿಚಾರದಲ್ಲಿ ಲೋಪದೋಷಗಳು ಕಂಡುಬಂದಿವೆ. ಈ  ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಅಂತರ್ಜಲ ಪರೀಕ್ಷೆ ನಡೆಸಿದ ನಂತರವೇ ಕೊಳವೆ ಬಾವಿ ಕೊರೆಸಬೇಕು ಎಂದು ಜಿ.ಪಂ. ಅಧ್ಯಕ್ಷ ಇಕ್ಬಾಲ್ ಹುಸೇನ್ ಸೂಚಿಸಿದ್ದಾರೆ. ಜಿ.ಪಂ. ಸಭಾಂಗಣದಲ್ಲಿ ನಡೆದ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಕೊಳವೆ ಬಾವಿ ಏಜೆನ್ಸಿದಾರರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲೆಂದರಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮತ್ತು ಅಂತರ್ಜಲ ಪರೀಕ್ಷೆಗೆ ಅಗತ್ಯ ಪರಿಕರಗಳ ಸರಬರಾಜಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ಸಿಇಒ ಡಾ.ವೆಂಕಟೇಶ್ ಇದ್ದರು.

ವಾರ್ಷಿಕ ಸ್ಮರಣ ಸಂಚಿಕೆಗಳೂ ಸಂಗ್ರಹ ಯೋಗ್ಯವಾಗಲಿ
ರಾಮನಗರ: ಶಾಲಾ ಕಾಲೇಜುಗಳಿಂದ ಹೊರ ತರುವ ವಾರ್ಷಿಕ ಸ್ಮರಣ ಸಂಚಿಕೆಗಳೂ ಇತರೆ ಕೃತಿ, ಗ್ರಂಥಗಳಂತೆಯೇ ಸಂಗ್ರಹಯೋಗ್ಯವಾಗಿರಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕನಕತಾರ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2013-14ನೇ ಸಾಲಿನ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿ ವರ್ಷವೂ ಪ್ರಕಟಗೊಳ್ಳುವ ವಾರ್ಷಿಕ ಸಂಚಿಕೆಗಳು ವಿದ್ಯಾರ್ಥಿಗಳಲ್ಲಿ ನೆನಪಾಗಿ ಉಳಿದುಕೊಳ್ಳುತ್ತವೆ. ಹೀಗಾಗಿ ಅದರ ಸಂಪಾದಕೀಯ ಮಂಡಳಿಯು ಗುಣಮಟ್ಟಕ್ಕೆ ಒತ್ತು ನೀಡಬೇಕು ಎಂದರು. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರಹೊಮ್ಮಿಸಲು ಇಂತಹ ಸಂಚಿಕೆಗಳು ಸಹಕಾರಿ ಎಂದು ಸಲಹೆ ನೀಡಿದರು. ಸಂಚಿಕೆಯ ಸಂಪಾದಕ ಪ್ರೊ.ವಿ.ಎಚ್ರಾಜಶೇಖರ್ಮ್ತ್ತಿತರರು ಹಾಜರಿದ್ದರು.

ಮಕ್ಕಳ ಉಚಿತ ಆರೋಗ್ಯ ಶಿಬಿರ ಇಂದು
ದೊಡ್ಡಬಳ್ಳಾಪುರ: ಇಲ್ಲಿನ ರಂಗಪ್ಪ ವೃತ್ತದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್(ರಿ) ನೇತೃತ್ವದಲ್ಲಿ ಮಕ್ಕಳ 8ನೇ ಉಚಿತ ಆರೋಗ್ಯ ತಪಾಸಣೆ ಶಿಬಿರ ಆ.3ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧ ವಿತರಣೆ ನಡೆಯಲಿದ್ದು, ಸೇವಾಶ್ರಮ ಟ್ರಸ್ಟ್ನ ಗೌ.ಅಧ್ಯಕ್ಷ ಎಚ್.ಪಿ. ಶಂಕರ್ ಅಧ್ಯಕ್ಷತೆ ವಹಿಸುವರು. ಮಕ್ಕಳ ತಜ್ಞ ವೈದ್ಯರಾದ ಡಾ.ಕೆ.ವಿಶ್ವನಾಥ್, ಡಾ.ವೈಶಾಖ್ ಮತ್ತಿತರರು ಶಿಬಿರದಲ್ಲಿ ತಪಾಸಣೆ ನೇತೃತ್ವ ವಹಿಸಲಿದ್ದಾರೆ. ಭಂಡಾರಿ ಪ್ಯಾರಿಬಾಯ್, ಸೋಹನ್ರಾಜ್ ಶಿಬಿರವನ್ನು ಪ್ರಾಯೋಜಿಸಿದ್ದಾರೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಾಮಗಾನ
ಮಾಗಡಿ ಪಟ್ಟಣದ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ಮಹಿಳಾ ತಂಡ ವಿಷ್ಣು ಸಹಸ್ರ ನಾಮ ಪಠಿಸುತ್ತಿರುವುದು.

ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ರಮೇಶ್
ಆನೇಕಲ್ಲು: ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಜಾಗತಿಕ ಬದಲಾವಣೆಯಲ್ಲೂ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಸ್ವಾಗತಾರ್ಹ ಎಂದು ಬಮೂಲ್ ಅದ್ಯಕ್ಷ ಆರ್. ಕೆ. ರಮೇಶ್ ತಿಳಿಸಿದ್ದಾರೆ. ಅವರು ತಾಲೂಕಿನ ಪಂಡಿತನ ಅಗ್ರಹಾರದ ರಾಜೀವ್ ಗಾಂಧಿ ನಗರದಲ್ಲಿ 158ನೆಯ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಹೈನುಗಾರಿಕೆ ಲಾಭಾದಾಯಕ ಉದ್ದಿಮೆಯಾಗಿದ್ದು ದೇಶಾದ್ಯಂತ ವಾರ್ಷಿಕ ಸಹಸ್ರ ಕೋಟಿ ರು.ಗಳ ವಹಿವಾಟು ನಡೆಯುತ್ತದೆ ಎಂದರು. ಶಾಸಕ ಬಿ. ಶಿವಣ್ಣ ಮಾತನಾಡಿ ಸಹಕಾರಿ ಕ್ಷೇತ್ರದಲ್ಲೂ ರಾಜಕಾರಣ ನುಸುಳಿ ಅಬಿವೃದ್ಧಿ ಕುಂಠಿತವಾಗಿ ಸಹಕಾರಿ ತತ್ವಗಳು ಮಾಯವಾಗುವ ಸಂದರ್ಭ ಬಂದಿದೆ. ರೈತರು ರಾಜಕೀಯ  ಮರೆತು ದೇಶದಲ್ಲಿ ಆಹಾರ ಸ್ವಾವಲಂಬನೆಗೆ ಒತ್ತು ನೀಡಿಬೇಕು.ನಿಗಮದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರಾಜೀವ್ ಗಾಂಧಿ ನಗರದ ಹಾಲು ಉತ್ಪಾದಕರ ಸಹಕಾರ ಸಂಘ ದೇಶದಲ್ಲೇ ಮಾದರಿಯಾಗಬೇಕೆಂದರು. ರಾಜಪ್ಪ, ಬದರೀನಾಥ್, ವಿಸ್ತರಣಾಧಿಕಾರಿ ಲಿಂಗಪ್ಪ, ನಿರ್ದೇಶಕರಾದ ಮುನಾರಜಪ್ಪ, ಸತೀಶ್, ಗೋಪಾಲ ಕೃಷ್ಣ, ಯಲ್ಲಪ್ಪ ಇದ್ದರು.

ಹಾಲಿನ ಹೊಳೆ
ಆನೇಕಲ್ ತಾಲೂಕು ಪಂಡಿತನ ಅಗ್ರಹಾರದಲ್ಲಿ ಪ್ರಾರಂಭವಾದ ಹಾಲು ಡೈರಿಯಲ್ಲಿ ಬಮೂಲ್ ಅಧ್ಯಕ್ಷ ಆರ್. ಕೆ. ರಮೇಶ್ ಹಾಲು ಅಳೆಯುವ ಮೂಲಕ ಚಾಲನೆ ನೀಡಿದರು. ಶಾಸಕ ಬಿ. ಶಿವಣ್ಣ, ಡೈರಿ ನಿರ್ದೇಶಕರಿದ್ದಾರೆ.

ಸಾಮಾಜಿಕ ಅಸಮತೋಲನ, ನಿವಾರಣೆಗೆ ಕಾನೂನು ಸಹಕಾರಿ
ರಾಮನಗರ: ಅನಾದಿ ಕಾಲದಿಂದಲೂ ದೇಶದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನಿರಾಕರಿಸುತ್ತಲೇ ಬರಲಾಗಿದೆ ಎಂದು ಉಪನ್ಯಾಸಕ ನಂ.ಶಿವಲಿಂಗಯ್ಯ ವಿಷಾದಿಸಿದರು. ನಗರಸಭೆಯ ಪ್ರಶಸ್ತಿ ಭವನದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಗಂಡು-ಹೆಣ್ಣು ನಡುವೆ ಇದ್ದ ಸಾಮಾಜಿಕ ಅಸಮತೋಲನವನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ಮಹಿಳಾ ಪರ ಕಾನೂನುಗಳು ಜಾರಿಯಾಗುತ್ತಿವೆ ಎಂದರು. ಮಹಿಳೆಯರು ಕಟ್ಟುಪಾಡುಗಳನ್ನು ಧಿಕ್ಕರಿಸಿ, ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನಿನ ಅರಿವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನ ಆಗಬೇಕಿದೆ ಎಂದು ಶಿವಲಿಂಗಯ್ಯ ತಿಳಿಸಿದರು.

ವಿಶ್ವ ಜನಸಂಖ್ಯಾ ದಿನಾಚರಣೆ, ಜಾಗೃತಿ ಜಾಥಾ ನಾಳೆ
ಮಾಗಡಿ: ಜಿ.ಪಂ.,ತಾ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿವಿಧ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆ.4 ರಂದು ಸೋಮವಾರ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10 ಗಂಟೆ ಏರ್ಪಡಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆ ಮುಂಭಾಗ ತಹಸೀಲ್ದಾರ್ ಶಿವಕುಮಾರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಫಹೀಂ ಉನ್ನಿಸಾ ಅಧ್ಯಕ್ಷೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷ ಇಕ್ಬಾಲ್ ಹುಸೇನ್, ಎಂ.ಕೆ. ಧನಂಜಯ, ಅನುಸೂಯಮ್ಮ ಮರಿಗೌಡ, ಡಾ. ರಘುನಾಥ್, ಗುತ್ತಲಗೌಡ ಭಾಗವಹಿಸಲಿದ್ದಾರೆ.

5ರಂದು ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಶಿಬಿರ
ರಾಮನಗರ:  ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿಯಿಂದ ಆ.5ರಂದು ನಗರದಲ್ಲಿ ಜಿಲ್ಲೆಯ ವಿಶೇಷ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ಜಿ.ಕೆ.ಬಿ.ಎಂ.ಎಸ್. ಶಾಲೆಯಲ್ಲಿ ನಡೆಯುವ ಶಿಬಿರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಜ್ಞ ವೈದ್ಯರು, ರಾಜ್ಯ ಹಂತದ ವಿಶೇಷ ವೈದ್ಯಕೀಯ ತಂಡ ಪಾಲ್ಗೊಳ್ಳಲಿದೆ. ನಾಲ್ಕೂ ತಾಲೂಕುಗಳಲ್ಲಿರುವ ದೃಷ್ಟಿ, ಶ್ರವಣ, ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳನ್ನು ತಪಾಸಣೆಗಾಗಿ ಕರೆತಂದು ಶಿಬಿರದ ಉಪಯೋಗ ಪಡೆದುಕೊಳ್ಳುವಂತೆ  ಸರ್ವಶಿಕ್ಷಣ ಅಭಿಯಾನದ ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆ ಕೋರಿದೆ.

ಅವಹೇಳನಕಾರಿ ಹೇಳಿಕೆ ಖಂಡನೆಗೆ ವಿಶ್ವಕರ್ಮ ಬಳಗ ಖಂಡನೆ
ನೆಲಮಂಗಲ: ಪದ್ಮಶ್ರೀ ಡಾ. ಚಂದ್ರಶೇಖರ್ ಕಂಬಾರ್ ಹಾಗೂ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಜೇನುಗೂಡು ವಿಶ್ವಕರ್ಮ ಬಳಗವನ್ನು ಖಂಡಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲದ ತಾಲೂಕು ಅಧ್ಯಕ್ಷ ಎ. ಕೃಷ್ಣಪ್ಪ ವಿಶ್ವಕರ್ಮ ಹೇಳಿದರು. ಅವರು ಶನಿವಾರ ಪಟ್ಟಣದ ವಿಶ್ವಕರ್ಮ ಮಹಾಮಂಡಲದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ್  ಅವರಂತಹ ಮಹಾನ್ ವ್ಯಕ್ತಿಯನ್ನು ಚಿಲ್ಲರೆ ಜನ ಹಗುರವಾಗಿ ಮಾತನಾಡಿದರೆ ಸಮಾಜ ಸಂಘಟಿತರಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರವು ರಾಜ್ಯ ವಿಶ್ವಕರ್ಮ ಸಮುದಾಯಗಳ ನಿಗಮವನ್ನು ಪ್ರಾರಂಭಿಸಿದೆ. ಇಂತಹ ನಿಗಮದ ರೂಪರೇಷೆಗಳನ್ನು ರೂಪಿಸಲು ಸಮಾಜ ಕಲ್ಯಾಣ ಸಚಿವರು, ಸರ್ಕಾರ ರಾಜ್ಯ ವಿಶ್ವಕರ್ಮ ಮುಖಂಡರು ಸಮಾಲೋಚನೆ ಸಭೆ ವೇಳೆ ಇವರಿಗೆ ಅವಮಾನಿಸಲಾಗಿದೆ ಎಂದರು. ಬಿ. ಮಂಜುನಾಥ್, ಎ. ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ಪಂಡಿತ್ ನರಸಿಂಹಮೂರ್ತಿ ಇದ್ದರು.

ಪತ್ರಿಕಾಗೋಷ್ಠಿ
ನೆಲಮಂಗಲ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲದ ತಾಲೂಕು ಅಧ್ಯಕ್ಷ ಎ. ಕೃಷ್ಣಪ್ಪ ವಿಶ್ವಕರ್ಮ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿರುವುದು.

 ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ತರಬೇತಿ
ರಾಮನಗರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2014-15ನೇ ಸಾಲಿನಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು, ಸಿಖಖ್ಮತ್ತು ಪಾರ್ಸಿ ಸೇರಿದಂತೆ ಅಲ್ಪ ಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ  ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ಕೋರ್ಸುಗಳ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಮೆ. ಎಸಿಸಿಪಿಎಲ್ ಸಂಸ್ಥೆಯು ತರಬೇತಿಯನ್ನು ಆಯೋಜಿಸಿದೆ. ಆಸಕ್ತ ನಿರೂದ್ಯೋಗಿಗಳು ಅರ್ಜಿ ನಮೂನೆಯನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬಿ.ಎಂ.ರಸ್ತೆ, 2ನೇ ಮಹಡಿ, ಜಿಲ್ಲಾ ಪಂಚಾಯತ್ ಭವನ, ರಾಮನಗರ, ಇಲ್ಲಿ ಪಡೆದುಕೊಂಡು, ಆ.30ರೊಳಗೆ ಸದರಿ ಕಚೇರಿಗೆ ಸಲ್ಲಿಸಬಹುದು. ಕೋರ್ಸುಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಇನ್ಸ್ಪೈರ್ ಅವಾರ್ಡ್ ಪ್ರದರ್ಶನ ಉದ್ಘಾಟನೆ
ಹೊಸಕೋಟೆ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಶಾಸಕ ಎನ್.ನಾಗರಾಜ್ ಕರೆ ನೀಡಿದರು. ಅವರು ಪಟ್ಟಣದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಗ್ರಾಮಾಂತರ ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಜಿಲ್ಲೆಯ ಸುತ್ತಮುತ್ತಲು ಬಹಳಷ್ಟು ಉನ್ನತ ತಂತ್ರಜ್ಞಾನ ಸಂಸ್ಥೆಗಳು ಪ್ರಾರಂಭಗೊಳ್ಳುತ್ತಿದ್ದು ನೂತನ ಆವಿಷ್ಕಾರಗಳನ್ನು ಕೈಗೊಂಡಲ್ಲಿ ವಿಪುಲವಾದ ಉದ್ಯೋಗವಕಾಶಗಳು ಸಹ ಲಭ್ಯವಾಗಲಿವೆ ಎಂದರು. ಪ್ರಸ್ತುತ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ನಾಲ್ಕು ತಾಲೂಕುಗಳಿಂದ ಪ್ರಾಥಮಿಕ 283, ಪ್ರೌಢಶಾಲೆಯ 94, ಒಟ್ಟು 377 ವಿದ್ಯಾರ್ಥಿಗಳು ಭಾಗವಹಿಸಿದ್ದು 30 ಕೊಠಡಿಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಭಾಗ್ಯಮ್ಮ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಡಿ.ಟಿ.ವೆಂಕಟೇಶ್, ಸದಸ್ಯ ಗೋಪಾಲಪ್ಪ, ಸಮನ್ವಯಾಧಿಕಾರಿ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು.

ಪ್ರದರ್ಶನ
ಹೊಸಕೋಟೆಯ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ಪ್ರದರ್ಶನವನ್ನು ಶಾಸಕ ಎನ್. ನಾಗರಾಜ್ ವೀಕ್ಷಿಸಿದರು.

ಶ್ರಾವಣ ಮಾಸ ಲಕ್ಷ್ಮೀ ನಾರಾಯಣಗೆ ವಿಶೇಷಪೂಜೆ
ಮಾಗಡಿ: ಶ್ರಾವಣ ಶನಿವಾರದ ಪ್ರಯುಕ್ತ ತಾಲೂಕಿನ ವಿವಿಧೆಡೆ ದೇವಾಲಯಗಳಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು. ಮಾಗಡಿ ತಾಲೂಕಿನ ಪ್ರಸಿದ್ಧ ಸಾವನದುರ್ಗ, ಸುಗ್ಗನಹಳ್ಳಿ, ಶ್ರೀಪತಿಹಳ್ಳಿ ಶ್ರೀಲಕ್ಷ್ಮೀನರಸಿಂಹಸ್ವಾಮಿ, ಕಲ್ಲೂರು ಶ್ರೀಆಂಜನೇಯಸ್ವಾಮಿ,ಕುದೂರು ಶ್ರೀಲಕ್ಷ್ಮೀದೇವಿ, ಕಲ್ಯಗೇಟ್ ಶ್ರೀವಿನಾಯಕಸ್ವಾಮಿ, ಹೊಸಪೇಟೆ ರಸ್ತೆಯ ಸೂರ್ಯಪುತ್ರ ಶನೇಶ್ವರಸ್ವಾಮಿ, ಉಡುವೆಗೆರೆ, ವೆಂಕಟಯ್ಯಪಾಳ್ಯದ ಗುರು ಶನೇಶ್ವರಸ್ವಾಮಿ ಸೇರಿದಂತೆ ವಿವಿಧೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಭಕ್ತರು ಭಾಗವಹಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಅಭಿನಂದನೆ
ನೆಲಮಂಗಲದ ಬೆಂ.ಗ್ರಾ. ಜಿಲ್ಲಾ ಮಹಿಳಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತಮ್ಮ ಹಾಗೂ  ಬ್ಲಾಕ್ ಮಹಿಳಾ ಅಧ್ಯಕ್ಷರಾಗಿ ಎಚ್. ನಾಗರತ್ನಮ್ಮ ಅವರಿಗೆ ಡಾ.ಎಂ. ವೀರಪ್ಪ ಮೊಯ್ಲಿ ಅಭಿನಂದಿಸುತ್ತಿರುವುದು.

ತಂದೆ, ತಾಯಿಯೇ ಪ್ರತ್ಯಕ್ಷ ದೈವ: ಚಂದ್ರಶೇಖರ್
ರಾಮನಗರ: ತಂದೆ, ತಾಯಿಯೇ ಪ್ರತ್ಯಕ್ಷ ದೇವರು. ಅವರನ್ನು ಗೌರವಿಸಿ, ಪೂಜಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಚ್. ಚಂದ್ರಶೇಖರ್ ಅಭಿಪ್ರಾಯಪಟ್ಟರು. ನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಮಕ್ಕಳ ಏಳ್ಗೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಜೀವಗಳೇ ಮಾತಾಪಿತೃ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಪದವಿ ಪೂರ್ವ, ಪದವಿ ಹಾಗೂ ಬಿ.ಇಡಿ., ಕಾಲೇಜುಗಳ ವಿಧ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಚಂದ್ರಶೇಖರ್ ಬಹುಮಾನ ವಿತರಿಸಿದರು.

ಆಂಜನೇಯ ದೇವಾಲಯದ ಬಳಿ ನೀರು ಸರಬರಾಜಿಗೆ ಚಾಲನೆ
ದೇವನಹಳ್ಳಿ: ಇಲ್ಲಿನ ತಾಲೂಕು ಕಚೇರಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪುರಸಭೆಯವರು ಕೊಳವೆ ಬಾವಿ ಕೊರೆಸಿದ್ದು ಆ ಭಾಗದ ಸುಮಾರು 60 ಮನೆಗಳಿಗೆ ಅನುಕೂಲವಾಗುವಂತೆ ಬಳಕೆ ನೀರಿನ ಸರಬರಾಜಿಗೆ ಶನಿವಾರ ಮಾಜಿ ಪುರಸಭಾಧ್ಯಕ್ಷ ಎಸ್. ಲಕ್ಷ್ಮೀನಾರಾಯಣ್ ಚಾಲನೆ ನೀಡಿದರು. ಪುರಸಭಾ ಸದಸ್ಯ ಎಂ. ನಾರಾಯಣಸ್ವಾಮಿ ಮಾತನಾಡಿ ಇಲ್ಲಿನ ಆಂಜನೇಯಸ್ವಾಮಿ ದೇವಾಲಯದ ಬಳಕೆಗಾಗಿ ಪುರಸಭೆಯಿಂದ ಕೊಳವೆಬಾವಿ ತೋಡಿಸಿದ್ದರೂ ಹೆಚ್ಚಿನ ನೀರನ್ನು ಸಾರ್ವಜನಿಕ ಉಪಯೋಗಕ್ಕಾಗಿ ಸರಬರಾಜು ಮಾಡುತ್ತಿದ್ದೇವೆ ಎಂದರು. ಈ ಸಂಧರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಎಸ್.ಆರ್. ರವಿಕುಮಾರ್, ದೇವಾಲಯದ ಮುಖ್ಯಸ್ಥರಾದ ಎಸ್.ಆರ್. ಮುನಿರಾಜು, ವೈ.ಕೆ. ಚಂದ್ರಶೇಖರ್, ಬೈಚಾಪುರ ವೆಂಕಟರಾಜು ಉಪಸ್ಥಿತರಿದ್ದರು.

ಚಾಲನೆ
ತಾಲೂಕು ಕಚೇರಿ ಆಂಜನೇಯಸ್ವಾಮಿ ದೇವಾಲಯದ ಬಳಿ ಎಸ್.ಲಕ್ಷ್ಮೀನಾರಾಯಣ್ ನೀರು ಸರಬರಾಜಿಗೆ ಚಾಲನೆ ನೀಡಿದರು. ಪುರಸಭಾ ಸದಸ್ಯ ನಾರಾಯಣಸ್ವಾಮಿ, ನಾಗರಾಜ್ ಹಾಗೂ ಆರ್. ರವಿಕುಮಾರ್ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.