ಕೃಷ್ಣರಂಥ ನಾಯಕರ ನಿರ್ಲಕ್ಷ್ಯ: ಸಮಾಜಕ್ಕೆ ಅಪಮಾನ
ಕ.ಪ್ರ.ವಾರ್ತೆ ರಾಮನಗರ ಮಾ.30
ಕಾಂಗ್ರೆಸ್ ಪಕ್ಷವು ಎಸ್.ಎಂ.ಕೃಷ್ಣ ಅವರಂತಹ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿಯು ವೈಯಕ್ತಿಕವಾಗಿ ಅವರಿಗಷ್ಟೇ ಅಲ್ಲದೆ ಒಂದು ಸಮಾಜಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕೃಷ್ಣ ಅವರನ್ನು ವಿದೇಶಾಂಗ ಸಚಿವ ಸ್ಥಾನ ತೊರೆಯುವಂತೆ ಮಾಡಿದ ಕಾಂಗ್ರೆಸ್ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಯಾವುದೇ ಜವಬ್ದಾರಿ ವಹಿಸದೆ ನಿರ್ಲಕ್ಷ್ಯ ಮಾಡಿದೆ. ಇದರಿಂದ ಕಾಂಗ್ರೆಸ್ ಒಂದು ದೊಡ್ಡ ಸಮಾಜದ ಅಸಮಾಧಾನಕ್ಕೆ ತುತ್ತಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕೃಷ್ಣ ಇರಾದೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಈ ಬೆಳವಣಿಗೆಯು ಕಾಂಗ್ರೆಸ್‌ನಲ್ಲಿ ಕೃಷ್ಣ ಅವರಂತಹ ನಾಯಕರಿಗೆ ನೀಡಿರುವ ಮಹತ್ವವನ್ನು ಬಿಂಬಿಸುತ್ತದೆ ಎಂದು ಛೇಡಿಸಿದರು.
ಶಾಶ್ವತ ನೀರಾವರಿ: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ರು.51 ಸಾವಿರ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ತಾವು ಅಧಿಕಾರಕ್ಕೆ ಬಂದಲ್ಲಿ ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿದ್ದು, ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆ ನೀಗಿಸುವುದಾಗಿ ಕುಮಾರಸ್ವಾಮಿ ಘೋಷಿಸಿದರು.
ಖಾಸಗೀಕರಣ ಮತ್ತು ಉದಾರೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ದೃಢ ನಿರ್ಧಾರ ತಳೆಯಲಾಗುವುದು. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ನೆಮ್ಮದಿ ಜೀವನ ನಡೆಸಲು ಯೋಜನೆ ರೂಪಿಸುವೆ ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರವು ಸಾಮಾಜಿಕ ಭದ್ರತಾ ಯೋಜನೆಯ 9 ಲಕ್ಷ ಫಲಾನುಭವಿಗಳಿಗೆ ಸವಲತ್ತು ರದ್ದುಪಡಿಸಿದೆ. ತಮ್ಮ ಸರ್ಕಾರ ಬಂದಲ್ಲಿ 70 ವರ್ಷ ತುಂಬಿದವರಿಗೆ ರು.5 ಸಾವಿರ ಮಾಸಾಶನ ನೀಡಲಾಗುವುದು. ರೈತರ ಸಾಲ ಮನ್ನಾ ಯೋಜನೆ ಜಾರಿಗೆ ತರುವುದಾಗಿ ತಿಳಿಸಿದರು.
ಮರ ಕಡಿಯುವುದಿಲ್ಲ: ರಾಮನಗರ ಕ್ಷೇತ್ರದ ಜನತೆ ಸಸಿ ನೆಟ್ಟು, ಪೋಷಿಸಿ ಬೆಳೆಸಿರುವ ಮರ ನಾನು. ಈ ಮರಕ್ಕೆ ಇನ್ನಷ್ಟು ನೀರೆರೆದು ಪೋಷಿಸಿದರೆ ಹೆಮ್ಮರವಾಗಿ ನಾಡಿನ ದೀನ, ದಲಿತರು, ದುರ್ಬಲರು, ರೈತರಿಗೆ ನೆರಳಾಗುತ್ತದೆ. ಅಂತಹ ಮರವನ್ನು ರಾಮನಗರದ ಜನರು ಕೊಡಲಿ ಹಾಕುವುದಿಲ್ಲ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಾದ್ಯಂತ ಮೂರು ದಿನದ ಪ್ರವಾಸದ ವೇಳೆ ಈ ಜನತೆ ತಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಮನಗಂಡಿದ್ದೇನೆ. ಈ ಜನರ ನಿರೀಕ್ಷೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ. ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ ಎಂದು ಹೇಳಿದರು.
ಶಕ್ತಿ ತುಂಬಲು ಮನವಿ: ರಾಜ್ಯಾದ್ಯಂತ ಪಕ್ಷ ಸಂಘಟಿಸಿ, ಅಧಿಕಾರಕ್ಕೆ ಬರಲು ಹೋರಾಟ ನಡೆಸಬೇಕಿದೆ. ಹೀಗಾಗಿ ಕ್ಷೇತ್ರದಲ್ಲಿ ಮತ್ತೊಂದು ಸುತ್ತಿನ ಪ್ರಚಾರ ಅಸಾಧ್ಯ. ಇಲ್ಲಿನ ಜನತೆ ಮತ್ತು ಪಕ್ಷದ ಕಾರ್ಯಕರ್ತರು ಸ್ವತಃ ತಾವೇ ಅಭ್ಯರ್ಥಿ ಎಂದು ಭಾವಿಸಿ ನನ್ನನ್ನು ಗೆಲ್ಲಿಸುವ ಮೂಲಕ ಶಕ್ತಿ ತುಂಬಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

