ರಾತ್ರಿ ವೇಳೆ ಗಂಟು ಹಿಡಿದು ಸುತ್ತುವ ಸೈನಿಕ!
ಕ.ಪ್ರ. ವಾರ್ತೆ ರಾಮನಗರ ಮಾ.29
ಅನಿತಾ ಕುಮಾರಸ್ವಾಮಿ ಸ್ಪರ್ಧೆಯಿಂದ ತಮ್ಮ ಗೆಲವು ಸಲೀಸು ಎನ್ನುತ್ತಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗಂಟು ಸಮೇತ ರಾತ್ರಿಯೆಲ್ಲಾ ಬೈಕ್‌ನಲ್ಲಿ ಸುತ್ತುತ್ತಿರುವುದು ಯಾಕೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ರಾಮನಗರ ಕ್ಷೇತ್ರದ ವಿವಿಧೆಡೆ ಶುಕ್ರವಾರ ಗ್ರಾಮ ಸಂದರ್ಶನ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ನಡುರಾತ್ರಿಯಲ್ಲಿ ಕದ ತಟ್ಟಿ ಪ್ರಮುಖರಿಗೆ ಹಣ ನೀಡುವ ಕೆಲದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ನೀಡಿರುವ ಪೊಳ್ಳು ಭರವಸೆಗಳನ್ನು ಯೋಗೇಶ್ವರ್ ಇನ್ನೂ ಈಡೇರಿಸಿಲ್ಲ. ಈಗ ಮತ್ತಷ್ಟು ಸುಳ್ಳು ಭರವಸೆ ಮುಂದಿಟ್ಟುಕೊಂಡು ಗಿಮಿಕ್ ಮಾಡುತ್ತಿದ್ದಾರೆ. ಚನ್ನಪಟ್ಟಣ ಮತದಾರರು ಅವರಿಗೆ ಈ ಬಾರಿ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಯಾವುದೇ ಆತಂಕ ಇಲ್ಲ: ರಾಮನಗರ ಕ್ಷೇತ್ರಾದ್ಯಂತ ತಮ್ಮ ಪ್ರವಾಸದ ವೇಳೆ ತಾಯಂದಿರುವ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸುತ್ತಿದ್ದಾರೆ. ಇದು ಅವರ ಮನದಾಳದಿಂದ ಹುಟ್ಟಿರುವ ಪ್ರೀತಿಯೇ ಹೊರತು, ಅನ್ಯರಂತೆ ಗಿಮಿಕ್ ಮಾಡಿ ಆಶೀರ್ವಾದ ಮಾಡಿಸಿಕೊಳ್ಳುತ್ತಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು. ನಗರಸಭೆ ಚುನಾವಣೆ ಫಲಿತಾಂಶವು ಕಾಂಗ್ರೆಸ್ ದುಡಿಮೆಗೆ ಸಂದಿದ್ದಲ್ಲ. ನಮ್ಮ ಪಕ್ಷದ ಸಣ್ಣಪುಟ್ಟ ಗೊಂದಲದಿಂದ ವ್ಯತಿರಿಕ್ತ ಫಲಿತಾಂಶ ಲಭಿಸಿದೆ. ಇದರಿಂದ ವಿಧಾನಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮವಿಲ್ಲ. ನನ್ನ ಗೆಲವಿಗೆ ಇಲ್ಲಿ ಯಾವುದೇ ಆತಂಕವಿಲ್ಲ ಎಂದರು.
ಕಳೆದ ಬಾರಿ ಇಲ್ಲಿ ನನಗೆ 47 ಸಾವಿರ ಮತಗಳ ಅಂತರದ ಗೆಲವು ಲಭಿಸಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚು ಅಂತರದ ಗೆಲವು ಸಾಧಿಸುವುದು ಖಚಿತ. ಸೋಲಿನ ಹತಾಶೆ ನನ್ನ ಎದುರಾಳಿಗಳಿಗೆ ಕಾಡುತ್ತಿದೆ ಎಂದು ಅವರು ಹೇಳಿದರು.
ಸಿದ್ದುಗೆ ತಿರುಗೇಟು: ಕನಕಪುರದಲ್ಲಿ ಸಿಂಧ್ಯಾ ಸೋಲಿಗೆ ಕುಮಾರಸ್ವಾಮಿಯೇ ಕಾರಣ ಆಗುತ್ತಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಲೆಳೆಯುವ ಪ್ರವೃತ್ತಿ ಇರೋದು ಕಾಂಗ್ರೆಸ್‌ನಲ್ಲೇ ಹೊರತು ಜೆಡಿಎಸ್‌ನಲ್ಲಿ ಅಲ್ಲ. ವಾಸ್ತವದಲ್ಲಿ ಶಿವಕುಮಾರ್ ಸೋಲಿಗೆ ಸಿದ್ದರಾಮಯ್ಯ ವ್ಯೂಹ ರಚಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಶಿವಕುಮಾರ್ ಅಕ್ರಮ ಪಿತಾಮಹ: ತಮಗೆ ಅಧಿಕಾರ ಸಿಕ್ಕಿದ್ದೇ ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಕ್ರಮ, ಲೂಟಿಯನ್ನು ಖಜಾನೆಗೆ ವಾಪಸ್ ತುಂಬುವ ಕೆಲಸ ಮಾಡುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ರಾಜ್ಯದ ಅಕ್ರಮ ಗಣಿಗಾರಿಕೆಯ ಪಿತಾಮಹ ಡಿ.ಕೆ.ಶಿವಕುಮಾರ್ ಅವರೇ ಆಗಿದ್ದಾರೆ ಎಂದು ಆರೋಪಿಸಿದರು.
ಸೇರ್ಪಡೆಗೆ ಕ್ರಮ: ಅಪರಾಧ ಹಿನ್ನೆಲೆಯುಳ್ಳವರಿಗೆ ಟಿಕೆಟ್ ನೀಡುವುದಿಲ್ಲ. ಅಭ್ಯರ್ಥಿ ಹಿನ್ನೆಲೆಯ ಸಮಗ್ರ ಮಾಹಿತಿ ಪಡೆದುಕೊಂಡೇ ಬಿ ಫಾರಂ ನೀಡಲಾಗುತ್ತಿದೆ. ಅನ್ಯ ಪಕ್ಷಗಳಂತೆ ಕ್ರಿಮಿನಲ್‌ಗಳನ್ನು ವಿಧಾನಸೌಧಕ್ಕೆ ಕೂರಿಸುವುದು ನಮ್ಮ ಗುರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರಾಮನಗರ ಕ್ಷೇತ್ರ ಸಹಿತ ವಿವಿಧೆಡೆ ಎರಡನೇ ಹಂತದ ಹಲವು ನಾಯಕರು ಪಕ್ಷ ಸೇರ್ಪಡೆ ಬಯಸಿದ್ದಾರೆ.ಈ ವಿಷಯದಲ್ಲಿ ಪಕ್ಷಕ್ಕೆ ಹಾನಿ ಮತ್ತು ಕಾರ್ಯಕರ್ತರಿಗೆ ನೋವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಜೆಡಿಎಸ್ ಸ್ವಂತ ಬಲದಲ್ಲಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

