ಬೆಂಗಳೂರು ಗ್ರಾಮಾಂತರ

ರಾಮನಗರ, ನನ್ನದು ತಾಯಿ- ಮಗನ ಬಾಂಧವ್ಯ

Published On :

ಕ.ಪ್ರ.ವಾರ್ತೆ ರಾಮನಗರ ಮಾ. 28
ರಾಮನಗರ ಮತ್ತು ನನ್ನದು ತಾಯಿ-ಮಗನ ಬಾಂಧವ್ಯ. ತಾಯಿಯೇ ಮಗನಿಗೆ ವಿಷ ಉಣಿಸುವುದನ್ನು ಕನಸು ಮನಸ್ಸಿನಲ್ಲೂ ಎಣಿಸಲಾಗದು. ಅಂತೆಯೇ ಈ ಕ್ಷೇತ್ರದ ಮತದಾರರು ನನ್ನನ್ನು ಸೋಲಿಸಿ ರಾಜಕೀಯವಾಗಿ ಕೊಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು.
ಸಕ್ಷೇತ್ರ ರಾಮನಗರದ ಕಸಬಾ, ಹಾರೋಹಳ್ಳಿ, ಮರಳವಾಡಿ ಹೋಬಳಿಯಲ್ಲಿ ಗುರುವಾರ ಗ್ರಾಮ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಕೇತೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮನ್ನು ಈ ಕ್ಷೇತ್ರದಿಂದ ಆಚೆಗಟ್ಟುತ್ತೇವೆಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವವರಿಗೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದರು.
ರಾಮನಗರದ ಜತೆ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ಇಲ್ಲಿನ ಜನರೇ ನೆಟ್ಟು ಪೋಷಿಸಿದ ಸಸಿ ಈಗ ಮರವಾಗಿದೆ. ಇಡೀ ರಾಜ್ಯದ ಕೃಷಿಕರು, ಬಡವರು, ದಲಿತರಿಗೆ ನೆರಳಾಗಿರುವ ಆ ಮರವನ್ನು ರಾಮನಗರದ ಜನತೆ ಕಡಿದು ಹಾಕುವಂತೆ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದರು.  
ಭ್ರಮೆಯಲ್ಲಿ ವಿರೋಧಿಗಳು: ನಗರಸಭೆ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಮುಖಂಡರು ಬೀಗುತ್ತಿದ್ದಾರೆ. ರಾಮನಗರದಿಂದ ಕುಮಾರಸ್ವಾಮಿಯನ್ನು ಗಂಟು-ಮೂಟೆ ಕಟ್ಟಿಸಿ, ಆಚೆಗಟ್ಟುತ್ತೇವೆ ಎಂದು ಭ್ರಮೆಯಲ್ಲಿ ತೇಲುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಮ್ಮ ವಿರೋಧಿಗಳ ಭ್ರಮೆಯನ್ನು ಕಳಚಲಿದ್ದಾರೆ ಎಂದು ಕುಮಾರಸ್ವಾಮಿ ಛೇಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಡಕು, ಅಸಮಾಧಾನದಿಂದ ವ್ಯತಿರಿಕ್ತ ಫಲಿತಾಂಶ ಬಂದಿದೆ.
ಅದು ವಿಧಾನಸಭೆ ಚುನಾವಣೆಯಲ್ಲೂ ಪುನರಾವರ್ತನೆ ಆಗದು. ರಾಜ್ಯ ಪ್ರವಾಸದ ನಡುವೆ ಕ್ಷೇತ್ರದ ಕಡೆ ಕಳೆದೊಂದು ವರ್ಷದಿಂದ ಗಮನ ಹರಿಸಲಾಗಿಲ್ಲ. ಹಾಗೆಂದು ರಾಮನಗರವನ್ನು ತಾವು ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲೆಯ ಮಟ್ಟಿಗೆ ದೊರೆತ ಫಲಿತಾಂಶವು ಕಾಂಗ್ರೆಸ್ ಪಕ್ಷದ ದುಡಿಮೆಗೆ ಸಂದ ಫಲಿತಾಂಶವಂತೂ ಅಲ್ಲ. ಜೆಡಿಎಸ್ ಧೂಳೀಪಟ ಮಾಡಿದ್ದೇವೆ, ಕುಮಾರಸ್ವಾಮಿಯನ್ನೂ ಇಲ್ಲಿಂದ ಖಾಲಿ ಮಾಡಿಸುತ್ತೇವೆ ಎನ್ನುವ ದುರಂಹಕಾರದ ಮಾತುಗಳಿಗೆ ಮತದಾರರೇ ಉತ್ತರಿಸುತ್ತಾರೆ ಎಂದರು.
ಸರ್ಕಾರದ ಕಡೆಗಣನೆ: ತಮ್ಮ ಅಧಿಕಾರಾವಧಿಯಲ್ಲಿ ರಾಮನಗರವನ್ನು ಜಿಲ್ಲೆಯನ್ನಾಗಿ ಘೋಷಿಸಿ ನಾನಾ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆಗ ಘೋಷಣೆಯಾದ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬಿಜೆಪಿ ಸರ್ಕಾರ ಗಮನ ಹರಿಸಲಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ನಾಲ್ಕೂವರೆ ವರ್ಷ ಸ್ಥಗಿತವಾಗಿದ್ದ ಅಭಿವೃದ್ಧಿಯನ್ನು ಪುನಾರಂಭಿಸಲು ಮತ್ತೆ ತಮಗೆ ಅಧಿಕಾರದ ಚುಕ್ಕಾಣಿ ಸಿಗಬೇಕಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳ ಜಾರಿ, ನೆನಗುದಿಗೆ ಬಿದ್ದಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿ ಸ್ಥಾಪನೆ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆಯಿತ್ತು.
ಸಂಘರ್ಷ ಕಾದಿದೆ:  ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗುವುದು ದೇವೇಗೌಡರ ಹೋರಾಟದಿಂದ ಮುಂದೂಡಲ್ಪಟ್ಟಿದೆ. ಮುಂದಿನ ದಿನಗಳಲ್ಲಿ ರಾಜ್ಯವು ನೀರಿನ ವಿಷಯವಾಗಿ ಕೇಂದ್ರ, ತಮಿಳುನಾಡು ವಿರುದ್ಧ ದೊಡ್ಡ ಮಟ್ಟದ ಸಂಘರ್ಷ ನಡೆಸಬೇಕಿದೆ. ಈ ನಿಟ್ಟಿನಲ್ಲಿ ತಮಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಮಂಡಳಿ ರಚನೆಯಾದಲ್ಲಿ ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿಯ ಕುಡಿಯುವ ನೀರಿನ ವ್ಯವಸ್ಥೆಗೇ ಅಡ್ಡಿಯಾಗುವ ಆತಂಕವಿದೆ. ಇದೆಲ್ಲಾ ಗೊತ್ತಿದ್ದರೂ ಕಾಂಗ್ರೆಸ್ ನಾಯಕರು ಕಪಟ ನಾಟಕವಾಡುತ್ತಿದ್ದಾರೆ. ರಾಮನಗರವೂ ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಗುರಿ ತಮ್ಮದಾಗಿದೆ ಎಂದರು.

ಆಧುನಿಕ ಭಗೀರಥನ ಟೋಪಿ
ಇಗ್ಗಲೂರಿನ ಎಚ್.ಡಿ.ದೇವೇಗೌಡ ಬ್ಯಾರೇಜ್ ಮೂಲಕ ಕಣ್ವಕ್ಕೆ ನೀರು ಹರಿಸುತ್ತೇನೆಂದು ಚನ್ನಪಟ್ಟಣದ ಆಧುನಿಕ ಭಗೀರಥ ಅಲ್ಲಿನ ಜನತೆಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ಯೋಗೇಶ್ವರ್ ಹೆಸರು ಪ್ರಸ್ತಾಪಿಸದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಇಗ್ಗಲೂರು ಬ್ಯಾರೇಜ್ ದೇವೇಗೌಡರ ಪರಿಶ್ರಮದಿಂದ ಆಗಿದೆ. ಇದೇ ದೇವೇಗೌಡರ ಹೋರಾಟದಿಂದ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸದ್ಯಕ್ಕೆ ಸ್ಥಗಿತವಾಗಿದೆ. ಮಂಡಳಿ ರಚನೆಯಾದಲ್ಲಿ ಈ ಭಾಗದ ಏತ ನೀರಾವರಿ ಯೋಜನೆಗಳ ಕಥೆ ಏನಾಗುತ್ತದೆ ಎನ್ನುವುದು ಗೊತ್ತಿದ್ದರೂ ಭಗೀರಥನ ಗಿಮಿಕ್ ಮುಂದುವರೆದಿದೆ ಎಂದು ಟೀಕಿಸಿದರು.
ಬೇರೆಲ್ಲೂ ಸ್ಪರ್ಧೆ ಇಲ್ಲ; ಸ್ಪಷ್ಟನೆ
ರಾಜ್ಯದ ವಿವಿಧ ಕ್ಷೇತ್ರಗಳ ಕಾರ್ಯಕರ್ತರು ತಮ್ಮನ್ನು ಸ್ಪರ್ಧೆಗೆ ಆಹ್ವಾನಿಸಿದ್ದಾರೆ. ಅದು ಅವರ ವಿಶ್ವಾಸದ ದ್ಯೋತಕ. ತಮಗೆ ರಾಜಕೀಯವಾಗಿ ಜನ್ಮ ನೀಡಿದ ರಾಮನಗರದ ಜನತೆಗೆ ದ್ರೋಹ ಬಗೆದು, ಬೇರೆಡೆ ಸ್ಪರ್ಧೆ ಪ್ರಶ್ನೆಯೇ ಇಲ್ಲ. ಕ್ಷೇತ್ರ ಬದಲಾವಣೆ ಊಹಾಪೋಹವಷ್ಟೇ. ರಾಮನಗರದಲ್ಲಿ ಏ.15ರಂದು ನಾಮಪತ್ರ ಸಲ್ಲಿಸುವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸಕಾರಾತ್ಮಕ ತೀರ್ಮಾನ
ಪಕ್ಷ ಬಿಟ್ಟು ಹೋದವರನ್ನು ಮರಳಿ ಸೇರ್ಪಡೆ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಈ ವಿಷಯದಲ್ಲಿ ಕಾರ್ಯಕರ್ತರು ಮತ್ತು ಮುಖಂಡರಿಗೆ ನೋವಾಗದಂತೆ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎನ್ನುವ ಮೂಲಕ  ಆಯ್ದ ಮುಖಂಡರನ್ನು ಬರಮಾಡಿಕೊಳ್ಳುವ ಸುಳಿವು ನೀಡಿದರು.
ರು.100 ಕೋಟಿ ರೆಡಿ: ಡಿ.ಕೆ.ಶಿವಕುಮಾರ್ ಅವರು ಕನಕಪುರದಲ್ಲಿ ಈಗಾಗಲೇ ರು.17 ಕೋಟಿ ಖರ್ಚು ಮಾಡಿದ್ದಾರೆ. ಅವರ ಚುನಾವಣಾ ಬಜೆಟ್ಟು100 ಕೋಟಿ ಆಗಿದೆ. ಕಾಂಗ್ರೆಸಿಗರಿಗೆ ಆತ್ಮಸ್ಥೈರ್ಯ ಇದ್ದರೆ ಅವರೂ ಸಹಿತ ಪಕ್ಷದ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುತ್ತಿರುವುದು ಏಕೆ ಎಂದು ಕುಮಾರುಸ್ವಾಮಿ ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.