ಬೆಂಗಳೂರು ಗ್ರಾಮಾಂತರ

ಬದುಕಿರುವ 150 ವಿಕಲಚೇತನರ ಸಾವು

Published On :



ರಾಮನಗರ: ಜಿಲ್ಲೆಯ ಕನಕಪುರದಲ್ಲಿ ಬದುಕಿರುವ 150 ಮಂದಿ ವಿಕಲಚೇತನ ಫಲಾನುಭವಿಗಳನ್ನು ಮರಣ ಹೊಂದಿದ್ದಾರೆಂದು ದಾಖಲಿಸಿ, ಮಾಸಾಶನ ರದ್ದುಪಡಿಸಲಾಗಿದೆ. ಈ ಕುರಿತಂತೆ ಖುದ್ದು ಪರಿಶೀಲಿಸಿ, ಕ್ರಮ ಜರುಗಿಸಲಾಗುವುದು ಎಂದು ಅಂಗವಿಕಲರ ಅಧಿನಿಯಮದ ಆಯುಕ್ತ ರಾಜಣ್ಣ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಂಗವಿಕಲರ ಅಧಿನಿಯಮದ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಸಾಶನ ರದ್ದತಿ ವಿಷಯವಾಗಿ 20 ದಿನದೊಳಗೆ ಸಮಗ್ರ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2012ರ ಡಿಸೆಂಬರ್ ಅಂತ್ಯದವರೆಗೆ 14287 ವಿಕಲಚೇತನರು ಮಾಸಾಶನ ಪಡೆಯುತ್ತಿದ್ದು, ಈ ಪೈಕಿ 10601 ಮಂದಿಗೆ ರು.400 ಮತ್ತು 3686 ಮಂದಿಗೆ ರು.1 ಸಾವಿರ ಮಾಸಾಶನ ನೀಡಲಾಗುತ್ತಿದೆ. ಕನಕಪುರ ತಾಲೂಕಿನಲ್ಲಿ ಸುಮಾರು 1890 ಮಾಸಾಶನ ರದ್ದುಗೊಂಡಿವೆ ಎಂದು ವಿವರಿಸಿದರು.
ಚನ್ನಪಟ್ಟಣದಲ್ಲಿ 1338, ರಾಮನಗರದಲ್ಲಿ 878, ಮಾಗಡಿಯಲ್ಲಿ 528 ಸೇರಿದಂತೆ ಜಿಲ್ಲೆಯಲ್ಲಿ 4634 ಫಲಾನುಭವಿಗಳಿಗೆ ಮಾಸಾಶನ ರದ್ದಾಗಿದೆ. ಈ ಕುರಿತು ಪುನರ್ಪ್‌ರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳು ಸವಲತ್ತಿನಿಂದ ವಂಚಿತರಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು.  
1986 ಮಕ್ಕಳು ದಾಖಲು: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ 1986 ವಿಕಲಚೇತನ ಮಕ್ಕಳು ದಾಖಲಾಗಿದ್ದಾರೆ. ಕಿವುಡ, ಮೂಕ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ವಾಕ್ ಮತ್ತು ಶ್ರವಣದೋಷ ಯಂತ್ರವನ್ನು ಒದಗಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜಣ್ಣ ವಿವರಿಸಿದರು.
ಪ್ರಾಥಮಿಕದಿಂದ ಪ್ರೌಢಶಾಲೆವರೆಗೆ ಈ ಮಕ್ಕಳು ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ಶಾಲೆಗಳು ಹತ್ತಿರದಲ್ಲಿ ಇಲ್ಲದಿದ್ದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಥವಾ ಇತರ ಇಲಾಖೆಗಳ ವಸತಿ ಶಾಲೆಗಳಲ್ಲಿ ದಾಖಲಿಸಿಕೊಂಡು, ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.  
ಅಸಮರ್ಪಕ ಜಾರಿ: ವಿಕಲಚೇತನರಿಗೆ ಶೇಕಡ 3ರಷ್ಟು ಮೀಸಲಾತಿ, ಮಾಸಾಶನ ಹಾಗೂ ಅವರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಸರ್ಕಾರವು ಅನೇಕ ಸುತ್ತೋಲೆಗಳನ್ನು ಹೊರಡಿಸಿದೆ. ಅವುಗಳ ಪರಿಣಾಮಕಾರಿ ಜಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪೌರ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಮೀಸಲಿಟ್ಟಿರುವ ಅನುದಾನವನ್ನು ಸದರಿ ವರ್ಷ ಪೂರ್ಣ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಉಳಿಕೆ ಹಣವನ್ನು ಮುಂದಿನ ವರ್ಷಕ್ಕೆ ಹೊಂದಾಣಿಕೆ ಮಾಡಿಕೊಂಡು, ಅರ್ಹರಿಗೆ ಸವಲತ್ತು ದೊರಕಿಸಿಕೊಡಬೇಕು. ಈ ವಿಷಯದಲ್ಲಿ ವಿಫಲರಾದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ದೂರು ನೀಡಲು ಸಲಹೆ: ವಿಕಲಚೇತನ ಫಲಾನುಭವಿಗಳು ತಮಗೆ ಬರುತ್ತಿರುವ ಮಾಸಾಶನ ರದ್ದುಗೊಂಡಲ್ಲಿ ಈ ಕುರಿತು ಮಾಹಿತಿಯನ್ನು  ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗೆ ದೂರಬೇಕು. ಅಧಿಕಾರಿಗಳು ದೂರಿನ ಬಗ್ಗೆ ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಬೇಕು. ಸಮಸ್ಯೆ ಪರಿಹಾರ ಸಾಧ್ಯವಾಗದಿದ್ದಲ್ಲಿ ತಮ್ಮ ಕಾರ್ಯಾಲಯಕ್ಕೆ ಕಡತ ರವಾನಿಸಬೇಕು ಎಂದು ರಾಜಣ್ಣ ಹೇಳಿದರು.  
2011ರ ಸರ್ಕಾರಿ ಸುತ್ತೋಲೆ ಪ್ರಕಾರ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, 2012ರ ಆದೇಶಾನುಸಾರ ಸಂಸದರೂ ತಮ್ಮ ಪಾಲಿನ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ರು.10 ಲಕ್ಷವನ್ನು ವಿಕಲಚೇತನರಿಗೆ ಮೀಸಲಿರಿಸಬೇಕಿದೆ. ಈ ಸಂಬಂಧ ಸಂಸದ, ಶಾಸಕರೊಟ್ಟಿಗೆ ಸಮಾಲೋಚಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿ.ಪಂ. ಸಿಇಒ ಸಿದ್ದರಾಮಯ್ಯ, ತಹಸೀಲ್ದಾರ್ ಹನುಮಂತರಾಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರಾಮಚಂದ್ರಯ್ಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.