ಮಾಸಿಕ ಮೊತ್ತ ರು. 2250ಕ್ಕೆ ಹೆಚ್ಚಿಸಿ
ರಾಮನಗರ: ಹಾಸ್ಟೆಲ್ಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಮೊತ್ತವನ್ನು ರು.2250ಕ್ಕೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಬಹುಜನ ವಿದ್ಯಾರ್ಥಿ ಸಂಘದ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಐಜೂರು ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಪ್ರಸಕ್ತ ಬಜೆಟ್ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ರಾಜ್ಯ ಸರ್ಕಾರವು ಹಾಸ್ಟೆಲ್ಗಳಲ್ಲಿರುವ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಊಟ ಸೇರಿದಂತೆ ಸಂಪೂರ್ಣ ವೆಚ್ಚಕ್ಕೆ ರು.800 ಪಾವತಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಈ ದಿನಗಳಲ್ಲಿ ಪ್ರಸ್ತುತ ನೀಡುತ್ತಿರುವ ಮೊತ್ತವು ಯಾವುದಕ್ಕೂ ಸಾಲದಂತಾಗಿದೆ ಎಂದು ಅವರು ಹೇಳಿದರು.
ಪರಿಷ್ಕರಿಸಬೇಕು: ಊಟ, ಪರಿಕರಗಳ ಮಾರುಕಟ್ಟೆ ಬೆಲೆ ಆಧರಿಸಿ ಮೊತ್ತವನ್ನು ಪರಿಷ್ಕರಿಸಬೇಕಿದೆ. ಕನಿಷ್ಠ ರು.2250 ನಿಗದಿ ಸಂಬಂಧ ಫೆ.8ಕ್ಕೆ ಮಂಡನೆಯಾಗುವ ಬಜೆಟ್ನಲ್ಲೇ ಘೋಷಿಸಬೇಕು. ಒಂದೊಮ್ಮೆ ಘೋಷಿಸದಿದ್ದಲ್ಲಿ ಈ ಸರ್ಕಾರವನ್ನು ದಲಿತ, ಹಿಂದುಳಿದವರ ವಿರೋಧಿ ಎಂದು ಪರಿಗಣಿಸಬೇಕಾಗುತ್ತದೆ ಎಂದರು.
ಮೂಲ ಸೌಲಭ್ಯ ಕಲ್ಪಿಸಿ: ಹಾಸ್ಟೆಲ್ಗಳಲ್ಲಿ ಶೌಚಾಲಯ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಪ್ರತಿಯೊಂದು ಹಾಸ್ಟೆಲ್ನಲ್ಲೂ ಲಭ್ಯವಿರುವ ಮೂಲ ಸೌಲಭ್ಯಗಳ ಬಗ್ಗೆ ಉನ್ನತ ಮಟ್ಟದ ತಂಡದಿಂದ ಪರಿಶೀಲಿಸಿ, ವರದಿ ಪಡೆದು ಮುಂದಿನ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ಪ್ರತಿಯೊಂದು ಹಾಸ್ಟೆಲ್ಗೂ ಸುಸಜ್ಜಿತ ಶೌಚಾಲಯ, ಮಲಗುವ ಕೋಣೆ, ಗ್ರಂಥಾಲಯ, ಪರಿಕರಗಳು ಸೇರಿದಂತೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಬೇಕು. ಎಲ್ಲ ಹಾಸ್ಟೆಲ್ಗಳಿಗೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಮೀಸಲು ಜಾರಿಗೊಳಿಸಿ: ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಕಂಪೆನಿಗಳಲ್ಲಿ ಪರಿಶಿಷ್ಟರಿಗೆ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಶೋಷಿತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟರ ಅಭ್ಯುದಯಕ್ಕಾಗಿ ಬಜೆಟ್ನಲ್ಲಿ ಶೇಕಡ 22.75ರಷ್ಟು ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗೋವಿಂದರಾಜು, ಕುಮಾರ್, ಮಂಜುನಾಥ್, ಮಹೇಶ್, ರಾಮು, ಲಕ್ಷ್ಮಣ, ರವಿ, ಲೋಕೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

