ಬಾಗಲಕೋಟೆ ತೋಟಗಾರಿಕೆ ವಿವಿಗೆ ನೀರಿನ ಬರ
ತುಂತುರು, ಹನಿ, ಕಿರು ನೀರಾವರಿ ಪದ್ಧತಿ ನೆಲೆಗಳ ಪ್ರತಿಪಾದಿಸುವ ಬಾಗಲಕೋಟೆ ತೋಟಗಾರಿಕೆ..

-ಚಿಕ್ಕಪ್ಪನಹಳ್ಳಿ ಷಣ್ಮುಖ
ಬಾಗಲಕೋಟೆ: ಆಧುನಿಕ ತೋಟಗಾರಿಕೆಯ ತರಹೇವಾರಿ ಆವಿಷ್ಕಾರಗಳ ರೈತರಿಗೆ ನೀಡುವ ಪ್ರಮುಖ ಜವಾಬ್ದಾರಿ ಹೂತ್ತಿರುವ ಹಾಗೂ ತುಂತುರು, ಹನಿ, ಕಿರು ನೀರಾವರಿ ಪದ್ಧತಿ ನೆಲೆಗಳ ಪ್ರತಿಪಾದಿಸುವ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ನೀರಿನ ಅಭಾವದಿಂದ ತತ್ತರಗೊಂಡಿದೆ.
ವಿವಿ ಆವರಣದಲ್ಲಿ ಆಡಳಿತ ಕಚೇರಿಯ ಕಾಂಕ್ರಿಟ್ ಕಾಡು ನಿರ್ಮಾಣ ಬಿಟ್ಟರೆ, ಉಳಿದಂತೆ ಖುಷ್ಕಿ ವಾತಾವರಣವಿದೆ. ಮಳೆ ಆಶ್ರಿತ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಎಂಬಂತಾಗಿದೆ ವಿವಿ ಪರಿಸ್ಥಿತಿ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ 2008ರಲ್ಲಿ ಆರಂಭಗೊಂಡ ಬಾಗಲಕೋಟೆ ತೋಟಗಾರಿಕೆ ವಿವಿ ಸುಮಾರು 300 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. ಸದ್ಯ ರು. 15 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ನಿರ್ಮಾಣವಾಗುತ್ತಿದೆ. ಉಳಿದಂತೆ ಆರು ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಈ ಭಾಗದ ರಾಜಕೀಯ ಇಚ್ಚಾಶಕ್ತಿಗೆ ಮಣಿದು ತೋಟಗಾರಿಕೆ ವಿವಿ ಆರಂಭಿಸಲಾಯಿತಾದರೂ ಮೂಲ ಸೌಕರ್ಯ ಒದಗಿಸುವುದರ ಕಡೆ ಅಷ್ಟಾಗಿ ಗಮನ ಹರಿಸಲಾಗಿಲ್ಲ. ತೋಟಗಾರಿಕೆ ಚಟುವಟಿಕೆಗೆ ನೀರೇ ಪ್ರಮುಖ ಆಧಾರ. ಬರೀ ಕಾಂಕ್ರಿಟ್ ಕಾಡಿನಿಂದ ತೋಟಗಾರಿಕೆ ಸಂಶೋಧನೆ, ಆವಿಷ್ಕಾರ ಮಾಡುವುದು ಕಷ್ಟಸಾಧ್ಯ. ವಿವಿ ಆಡಳಿತ ಮಂಡಳಿಗೆ ಈಗ ವಾಸ್ತವದ ಅರಿವಾಗಿದ್ದು ನೀರಿಗಾಗಿ ಹರಸಾಹಸ ಪಡುತ್ತಿದೆ.
ಸಂಶೋಧನೆಗಳ ತಾಣ
ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವ ವಿವಿಯಲ್ಲಿ ಸಂಶೋಧನೆಗಳ ಪ್ರಮುಖ ಆರು ವಿಭಾಗಗಳಿವೆ. ತಳಿ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ, ಪುಷ್ಪ ಕೃಷಿ ಮತ್ತು ಉದ್ಯಾನ ವಿನ್ಯಾಸ, ಹಣ್ಣು ಬೆಳೆ ವಿಜ್ಞಾನ, ಪ್ಲಾಂಟೇಷನ್, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ತರಕಾರಿ ಬೆಳೆ ವಿಜ್ಞಾನ ಪ್ರಮುಖವಾದವುಗಳು. ಈ ಎಲ್ಲ ಬೆಳೆಗಳಿಗೆ ನೀರೇ ಪ್ರಮುಖ ಆಧಾರ. ಪ್ರಾತ್ಯಕ್ಷಿಕೆಗಾಗಿ ಬೆಳೆಗಳ ವಿಸ್ತರಣೆ ಮಾಡಬೇಕೆಂದರೆ ಕೊಳವೆ ಬಾವಿಗಳ ಆಳದಲ್ಲಿರುವ ನೀರು ನಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಹಾಲಿ ವಿವಿ ಆವರಣದಲ್ಲಿ ನಾಲ್ಕು ಕೊಳವೆ ಬಾವಿಗಳಿದ್ದು ಅವುಗಳಲ್ಲಿ ಎರಡು ಆಡಳಿತ ಕಚೇರಿ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಸಾಕಾಗುತ್ತಿದೆ. ಉಳಿದಂತೆ ತೋಟಗಾರಿಕೆ ಬೆಳೆಗಳ ಬೆಳೆಯಲು ಎರಡು ಬೋರ್ವೆಲ್ಗಳಿವೆ. ತುಂಬಾ ಆಳದಿಂದ ನೀರು ಎತ್ತಿ ಸಿಂಟೆಕ್ಸ್ಗಳಿಗೆ ತುಂಬಿ ತೋಟಗಾರಿಕೆ ಬೆಳೆಗಳಿಗೆ ಹಾಯಿಸಲಾಗುತ್ತಿದೆ. ಈ ಮೂಲಕ ಅದ್ಯಾವ ಬೆಳೆ ಬೆಳೆದು ಸಂಶೋಧನೆ ಮಾಡಲು ಸಾಧ್ಯವಾಗುತ್ತದೆ ಎಂಬುವುದೇ ಅಚ್ಚರಿಯ ಸಂಗತಿ.
ರು. 5 ಕೋಟಿ ಠೇವಣಿ
ತೋಟಗಾರಿಕೆ ವಿವಿಗೆ ನೀರು ಪೂರೈಕೆ ಸಂಬಂಧ ಬಿಟಿಡಿಎ (ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ)ಗೆ ರು. 5 ಕೋಟಿ ಡಿಪಾಸಿಟ್ ಮಾಡಿದ್ದೇವೆ. 7 ಕಿ.ಮೀ. ದೂರದ ಎರಕಲ್ನಿಂದ ಘಟಪ್ರಭ ನದಿ ನೀರು ಪೂರೈಕೆ ಮಾಡುತ್ತಾರೆಂದು ವಿವಿ ಪ್ರಭಾರ ಕುಲಪತಿ ಡಾ.ಬಿ. ರಾಜು ಹೇಳುತ್ತಾರೆ. ಬಿಟಿಡಿಎ ಮುಖ್ಯ ಎಂಜಿನಿಯರ್ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ನೀರು ಪೂರೈಕೆಗೆ ಸಂಬಂಧಿಸಿದಂತೆ ವಿವಿ ಒಂದು ಪೈಸೆ ಡಿಪಾಸಿಟ್ ಮಾಡಿಲ್ಲ. ಹೊಸದಾಗಿ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಳ್ಳಲು ತಾವು ಸಿದ್ಧರಿಲ್ಲವೆನ್ನುತ್ತಾರೆ. ಹಾಗಾಗಿ ನೀರು ಬರುವ ಮಾತು ದೂರವೇ ಉಳಿದಿದೆ. ಅಂತೂ ಬಾಗಲಕೋಟೆ ವಿವಿ ನೀರಿನ ಅಭಾವದಿಂದ ತತ್ತರಗೊಂಡಿದ್ದು ಸಂಶೋಧನೆಗಳಿಗೆ ಹಿನ್ನಡೆ ಅನುಭವಿಸುತ್ತಿದ್ದರೂ ಕುಲಪತಿ ಹುದ್ದೆಗೆ ತೆರೆಮರೆಯ ಕಸರತ್ತು ಮಾತ್ರ ಕಡಿಮೆಯಾಗಿಲ್ಲ.
ಕಣ್ಣೆದುರಿಗೇ ನೀರಿದ್ದರೂ
ವಿವಿಯಿಂದ ಸುಮಾರು 6 ಕಿ.ಮೀ. ಅಂತರದಲ್ಲಿ ಘಟಪ್ರಭೆ ನದಿ ಹರಿಯುತ್ತಿದೆ. ಆಲಮಟ್ಟಿ ಜಲಾಶಯದ ಹಿನ್ನೀರು ವರ್ಷದಲ್ಲಿ ಆರು ತಿಂಗಳು ಬಾಗಲಕೋಟೆಯನ್ನು ಸ್ಪರ್ಷಿಸುತ್ತದೆ. ಕಣ್ಣೆದುರಿಗೆ ನೀರು ಇದ್ದರೂ ಅದನ್ನು ವಿವಿ ತನಕ ತರುವ ಪ್ರಯತ್ನಕ್ಕೆ ಅಷ್ಟಾಗಿ ಯಾರೂ ತಲೆಕೆಡಿಸಿಕೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


