ಜಿಲ್ಲಾ ಸುದ್ದಿ

ಪಕ್ಷವೇ ಅಭ್ಯರ್ಥಿ, ರೆಹಮಾನ್ ಷರೀಫ್ ಅಲ್ಲ

ಇಲ್ಲಿ ಪಕ್ಷವೇ ಅಭ್ಯರ್ಥಿ, ರೆಹಮಾನ್ ಷರೀಫ್ ಅಲ್ಲ, ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್...

ಪಕ್ಷವೇ ಅಭ್ಯರ್ಥಿ, ರೆಹಮಾನ್ ಷರೀಫ್ ಅಲ್ಲ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಇಲ್ಲಿ ಪಕ್ಷವೇ ಅಭ್ಯರ್ಥಿ, ರೆಹಮಾನ್ ಷರೀಫ್ ಅಲ್ಲ, ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತೊಂದು ಹೆಜ್ಜೆ ಮುಂದಿರಿಸಿ ಇಲ್ಲಿ ರೆಹಮಾನ್ ಷರೀಫ್ ಅಲ್ಲ, ಸೋನಿಯಾ ಗಾಂಧಿಯೇ ಅಭ್ಯರ್ಥಿ ಎಂದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಪಕ್ಷದ ಮುಖಂಡರೆಲ್ಲಾ ಭಿನ್ನಮತವನ್ನು ಮರೆತು ಒಗ್ಗಟ್ಟಿನ ಮಾತನ್ನಾಡಿದ್ದಾರೆ.

ಟಿಕೆಟ್ ಹಂಚಿಕೆ ವಿಷಯದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಈ ಕ್ಷೇತ್ರದಲ್ಲಿ 2 ಸಲ ಗೆಲ್ಲುವ ಅವಕಾಶಗಳಿದ್ದವು. ಕಳೆದ ಸಲ ಗೆಲ್ಲುವ ಅವಕಾಶವಿತ್ತು. ನಮ್ಮಲ್ಲಿನ ಹಿತಶತ್ರುಗಳಿಂದ ಕಳೆದುಕೊಂಡೆವು. ಈ ಸಲ ಆ ರೀತಿ ಆಗಬಾರದು. ಹೆಬ್ಬಾಳ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಬೇಕೆಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ. ಇಲ್ಲಿ ಪಕ್ಷವೇ ಅಭ್ಯರ್ಥಿ, ಷರೀಫ್ ಅಲ್ಲ. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.

ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ನನಗೆ ಹೆಬ್ಬಾಳದ ಜವಾಬ್ದಾರಿ ನೀಡಿದ್ದಾರೆ. ಮಂತ್ರಿ ಆಗಿದ್ದರೂ ಪಕ್ಷದ ವಿಚಾರ ಬಂದಾಗ ನಾನೊಬ್ಬ ಕಾರ್ಯಕರ್ತ. ಈ ಮೂರೂ ಉಪ ಚುನಾವಣೆಗಳು 2018ರ ಚುನಾವಣೆಯ ಟ್ರೆಂಡ್ ಸೆಟ್ಟರ್ ಆಗಲಿವೆ. ಬೆಂಗಳೂರಿನಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿರುವುದರಿಂದ ಹೆಬ್ಬಾಳ ಬಹಳ ಮುಖ್ಯ. ಬಳ್ಳಾರಿ ಉಪ ಚುನಾವಣೆಯಲ್ಲಿ ಅನುಸರಿಸಿದ ತಂತ್ರವನ್ನೇ ಇಲ್ಲೂ ಅನುಸರಿಸಲಾಗುವುದು. ಸಚಿವರು, ಶಾಸಕರು, ಪಾಲಿಕೆ ಸದಸ್ಯರು, ಬ್ಲಾಕ್ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಗುವುದು ಎಂದರು.

ಹೆಬ್ಬಾಳ ಅಭ್ಯರ್ಥಿ ವಾಪಸ್ ಇಲ್ಲ: ಎಚ್ ಡಿಕೆ
ಹುಬ್ಬಳ್ಳಿ: ಹೆಬ್ಬಾಳ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಸುರೇಶ್ ಭೈರತಿಯನ್ನು ಘೋಷಣೆ ಮಾಡಿದಾಗಲೇ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುರೇಶ್ ಭೈರತಿಗೆ ಕೊಟ್ಟ ಬಿ ಫಾರಂ ವಾಪಸ್ ಪಡೆದು ಜಾಫರ್ ಷರೀಫ್ ತಮ್ಮ ಮೊಮ್ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಅವರು ನಮಗೆ ಜಾತ್ಯತೀತವಾದ ಹೇಳಿಕೊಡುವುದು ಬೇಕಾಗಿಲ್ಲ. ಪಕ್ಷದಿಂದ ಮೊದಲೇ ಅಲ್ಪಸಂಖ್ಯಾತ ಅಭ್ಯರ್ಥಿಗೆ ಪ್ರಾಶಸ್ತ್ಯ ನೀಡಿದ್ದೇವೆ. ಬೇಕಿದ್ದರೆ ತಮ್ಮ ಮೊಮ್ಮಗನನನ್ನು ಚುನಾವಣೆ ಕಣದಿಂದ ವಾಪಸ್ ಪಡೆಯಲಿ ಎಂದು ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.