ಬೆಂವಿವಿ ವಿಭಜನೆಗೆ ಗೃಹ ಸಚಿವ ಪರಮ್ ಅಸಮಾಧಾನ
ಜಗತ್ತಿನಲ್ಲಿ ಮಹಾನಗರಿ ಬೆಂಗಳೂರಿನಂತೆ ಬೆಂಗಳೂರು ವಿಶ್ವವಿದ್ಯಾಲಯ ಕೂಡ ಬ್ರಾಂಡ್ ಆಗಿದೆ. ಅಂತಹ ವಿಶ್ವವಿದ್ಯಾಲಯವನ್ನು ಮೂರು ಭಾಗಗಳನ್ನಾಗಿ ಮಾಡಿ ಗುಣಮಟ್ಟ ಕಡಿತಗೊಳಿಸುವುದು...

ಹೋಳು ಮಾಡುವುದರಿಂದ ವಿಶ್ವವಿದ್ಯಾಲಯಕ್ಕೆ ಹೆಚ್ಚು ಸಂಕಷ್ಟ: ಉನ್ನತ ಶಿಕ್ಷಣ ಸಚಿವನಾಗಿದ್ದಾಗಲೂ ಇದೇ ಚಿಂತನೆ ಇತ್ತು
ಬೆಂಗಳೂರು: ಜಗತ್ತಿನಲ್ಲಿ ಮಹಾನಗರಿ ಬೆಂಗಳೂರಿನಂತೆ ಬೆಂಗಳೂರು ವಿಶ್ವವಿದ್ಯಾಲಯ ಕೂಡ ಬ್ರಾಂಡ್ ಆಗಿದೆ. ಅಂತಹ ವಿಶ್ವವಿದ್ಯಾಲಯವನ್ನು ಮೂರು ಭಾಗಗಳನ್ನಾಗಿ ಮಾಡಿ ಗುಣಮಟ್ಟ ಕಡಿತಗೊಳಿಸುವುದು ಸಮಂಜಸ ಅಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂವಿವಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಜ್ಞಾನಭಾರತಿ ಕ್ಯಾಂಪಸ್ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ `ಅಭಿನಂದನಾ ಸಮಾರಂಭ'ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿವಿ ವಿಭಜನೆ ಮಾಡುವ ತಮ್ಮದೇ ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು. ಕಾಲೇಜುಗಳು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ವಿಭಜನೆ ಮಾಡಿರುವುದರಿಂದ ವಿವಿ ಸಂಕಷ್ಟಕ್ಕೆ ಸಿಲುಕಿದೆ. ವಿಭಜನೆ ಬದಲು ಎರಡು ಭಾಗ ಮಾಡಬಹುದಿತ್ತು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಕೂಡ ಇದೇ ಚಿಂತನೆ ನಡೆಸಿದ್ದೆ ಎಂದು ಹೇಳಿದರು.
ವಿವಿ ಭೂಮಿ ರಕ್ಷಿಸಿ: ಆರಂಭದಲ್ಲಿ 1200 ಎಕರೆಯಷ್ಟಿದ್ದ ಜ್ಞಾನಭಾರತಿ ಕ್ಯಾಂಪಸ್ ಸದ್ಯ 200 ಎಕರೆಯಷ್ಟು ಜಾಗ ಕಡಿಮೆಯಾಗಿದೆ. ಇನ್ನು ಮುಂದೆಯಾದರೂ ವಿವಿಯ ಭೂಮಿ ಹೊರಗಿನವರ ಪಾಲಾಗದಂತೆ ವಿಶ್ವವಿದ್ಯಾಲಯ ಎಚ್ಚರ ವಹಿಸಬೇಕು. ಸಿದ್ದಪ್ಪ ಅವರು ಕುಲಪತಿಯಾಗಿದ್ದಾಗ ವಿವಿಯ ಭೂಮಿ ರಕ್ಷಣೆಗಾಗಿ ಕ್ಯಾಂಪಸ್ ಸುತ್ತಲೂ 2 ಲಕ್ಷ ಸಸಿಗಳನ್ನು ನೆಟ್ಟಿದ್ದರು. ಇಂತಹ ಕಾರ್ಯಗಳನ್ನು ಈಗಿನ ಕುಲಪತಿಯವರೂ ಮಾಡಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಜಾತೀಯತೆ ಇಲ್ಲದೇ ಹೋಗಿದ್ದರೆ ಭಾರತ ವಿಶ್ವದ ಭೂಪಟದಲ್ಲಿ ಉತ್ತುಂಗದಲ್ಲಿರುತ್ತಿತ್ತು. ಯಾವ ದೇಶವೂ ನಮ್ಮನ್ನು ಏನೂ ಮಾಡಲಾಗುತ್ತಿರಲಿಲ್ಲ. ಆದರೆ ದರಿದ್ರ ಜಾತಿ ವ್ಯವಸ್ಥೆ ದೂರವಾಗುತ್ತಲೇ ಇಲ್ಲ. ಇನ್ನೊಂದಿಷ್ಟು ವರ್ಷಗಳು ಕಳೆದರೆ ದೂರವಾಗುವ ನಿರೀಕ್ಷೆ ನನ್ನಲ್ಲಿದೆ ಎಂದರು.
ಕುಲಸಚಿವೆ ಡಾ.ಕೆ.ಕೆ.ಸೀತಮ್ಮ ಮಾತನಾಡಿ, ಪರಮೇಶ್ವರ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಷ್ಟೇ ಆಗಿರಲಿಲ್ಲ. ಉತ್ತಮ ಕ್ರೀಡಾಪಟು ಕೂಡ. ಎನ್‍ಸಿಸಿ ಕೆಡೆಟ್ ಕೂಡ ಆಗಿದ್ದರು. ಎಂ.ಎಸ್ಸಿ ಕೃಷಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಅವರು, ವಿದೇಶದಲ್ಲಿ ಪಿಎಚ್‍ಡಿ ಅಧ್ಯಯನ ಮಾಡಿದರು. ವಿದೇಶದಲ್ಲೇ ಆರಾಮಾಗಿ ಇರಬಹುದಿತ್ತು. ಆದರೆ, ಶೋಷಿತರ, ದೀನ ದಲಿತರ ಏಳಿಗೆಗಾಗಿ ಶ್ರಮಿಸುವ ತುಡಿತ ಅವರನ್ನು ಸ್ವದೇಶಕ್ಕೆ ಮರಳುವಂತೆ ಮಾಡಿತು ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ವಿವಿಯ ಮೌಲ್ಯಮಾಪನ ಕುಲಸಚಿವ ಪೊ್ರ.ನಿಂಗೇಗೌಡ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಶಿವಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


