ಸೆಲ್ಫೀ ಮೋಹ: ಬೆಂಗಳೂರಿನ 3 ವೈದ್ಯ ವಿದ್ಯಾರ್ಥಿಗಳ ಜೀವ ನೀರಲ್ಲಿ ಸ್ವಾಹಾಃ
ಮಂಡ್ಯದ ವಿಶ್ವೇಶ್ವರಯ್ಯ ನಾಲೆ ನೀರಿನೊಳಗೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಐವರು ವೈದ್ಯ ವಿದ್ಯಾರ್ಥಿಗಳ ಪೈಕಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದು..

ಮಂಡ್ಯ: ಮಂಡ್ಯದ ವಿಶ್ವೇಶ್ವರಯ್ಯ ನಾಲೆ ನೀರಿನೊಳಗೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಐವರು ವೈದ್ಯ ವಿದ್ಯಾರ್ಥಿಗಳ ಪೈಕಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಕಬ್ಬನ್‌ಪೇಟೆಯ ಎಸ್. ಜಯರಾಮು ಎಂಬುವವರ ಪುತ್ರ ಜೆ. ಜೀವನ್(24), ರಾಜಾಜಿನಗರದ ಎಲ್. ಪ್ರಕಾಶ್ ಅವರ ಪುತ್ರಿ ಎಲ್.ಪಿ. ಶ್ರುತಿ (23), ಮೂಲತಃ ತುಮಕೂರಿನವರಾದ ಶ್ರೀಧರ್ ಅವರ ಪುತ್ರ ಗಿರೀಶ್ (24) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಮೈಸೂರಿನ ವಿಜಯನಗರ 2ನೇ ಹಂತದ ಎಚ್.ಕೆ. ಮಂಜುನಾಥ್‌ರ ಪುತ್ರ ಗೌತಮ್ ಪಟೇಲ್ (23), ಬಿ. ಸಿಂಧು (23) ಅಪಾಯದಿಂದ ಪಾರಾಗಿದ್ದು, ನಗರದ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಶ್ರುತಿ, ಜೀವನ್ ಅವರ ಶವಗಳು ಸಿಕ್ಕಿದ್ದು, ಗಿರೀಶ್‌ಗಾಗಿ ಶೋಧ ನಡೆಸಲಾಗುತ್ತಿದೆ. ಹುಡುಕಾಟ ಸುಲಭವಾಗಲೆಂಬ ಕಾರಣಕ್ಕೆ ನಾಲೆಯಲ್ಲಿ ಹರಿಸುತ್ತಿದ್ದ ನೀರಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ.
ಮೂವರು ಮಿಮ್ಸ್ ಹಾಸ್ಟೆಲ್‌ನಲ್ಲೇ ವಾಸವಿದ್ದರು. ಗಿರೀಶ್ ಅವರ ತಂದೆ ಶ್ರೀಧರ್ ಅವರು ಪುತ್ರನ ವ್ಯಾಸಂಗಕ್ಕಾಗಿ ತುಮಕೂರಿನಿಂದ ಮಂಡ್ಯಕ್ಕೆ ಆಗಮಿಸಿ, ಮಿಮ್ಸ್‌ಗೆ ಹೊಂದಿಕೊಂಡಂತಿರುವ ಅಶೋಕನಗರ ಬಡಾವಣೆಯಲ್ಲಿ ಮನೆ ಮಾಡಿಕೊಂಡಿದ್ದಾರೆ.
ಮಿಮ್ಸ್ ವಿದ್ಯಾರ್ಥಿಗಳಾದ ಐವರು, ವೈದ್ಯ ಶಿಕ್ಷಣ ಪೂರೈಸಿ ಸಮುದಾಯ ಆರೋಗ್ಯ ಸೇವೆ ಕಾರ‌್ಯಕ್ರಮದಡಿ ಗ್ರಾಮೀಣ ಸೇವೆ ಮತ್ತು ತರಬೇತಿಗಾಗಿ ಗುರುವಾರವಷ್ಟೇ ಇಂಟರ್ನಷಿಪ್‌ಗೆ ನಿಯೋಜನೆಗೊಂಡಿದ್ದರು. ಅದರಂತೆ ಐವರನ್ನೂ ಮಂಡ್ಯ ತಾಲೂಕು ಕೆರಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಮಂಡ್ಯದಿಂದ ಕೆರಗೋಡಿಗೆ ಬೈಕ್‌ನಲ್ಲಿ ಹೋಗಿದ್ದ ಇವರು ಮೊದಲ ದಿನವೇ ಮಂಡ್ಯಕ್ಕೆ ವಾಪಸಾಗುವಾಗ ಮಾರ್ಗಮಧ್ಯೆ ಸಿಗುವ ಹುಲಿವಾನ ಹೊರವಲಯದ ವಿಶ್ವೇಶ್ವರಯ್ಯ ನಾಲೆಗೆ ಇಳಿದು ಒಂದಷ್ಟು ಸೆಲ್ಫಿ ಫೋಟೋಗಳನ್ನು ತೆಗೆದು ಸ್ನೇಹಿತರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದರು.
ಎರಡನೇ ದಿನವಾದ ಶುಕ್ರವಾರ ಅದೇ ಜಾಗದಲ್ಲಿ ನೀರಿಗಿಳಿದು ಜಲಕ್ರೀಡೆಯಾಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಬೈಕ್‌ಗಳನ್ನು ನಾಲೆ ಏರಿ ಮೇಲೆಯೇ ನಿಲ್ಲಿಸಿ, ನಾಲೆಯ ಮತ್ತೊಂದು ಸ್ಥಳಕ್ಕೆ ತೆರಳಿದ್ದರು. ಅಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದರು. ಈಜು ಬಾರದೆ ನೀರಿನಲ್ಲಿ ಮುಳುಗಿದ ಶ್ರುತಿ, ಜೀವನ್, ಗಿರೀಶ್ ಕೊಚ್ಚಿಹೋಗಿದ್ದಾರೆ. ಗೌತಮ್ ಮತ್ತು ಸಿಂಧು ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


