ಕಲ್ಬುರ್ಗಿ ಹತ್ಯೆ ಪ್ರಕರಣ: ಇನ್ನೂ ಹಂತಕರ ಸುಳಿವಿಲ್ಲ
ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾಗಿ ಸೆ. 30ಕ್ಕೆ ಒಂದು ತಿಂಗಳು ಗತಿಸಿತು. ಆದರೂ ಸಿಐಡಿ ಅಧಿಕಾರಿಗಳಿಂದ ಆರೋಪಿಯನ್ನು ಬಂಧಿಸುವುದಿರಲಿ, ...

ಧಾರವಾಡ: ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾಗಿ ಸೆ. 30ಕ್ಕೆ ಒಂದು ತಿಂಗಳು ಗತಿಸಿತು. ಆದರೂ ಸಿಐಡಿ ಅಧಿಕಾರಿಗಳಿಂದ ಆರೋಪಿಯನ್ನು ಬಂಧಿಸುವುದಿರಲಿ, ಪ್ರಮುಖ ಸುಳಿವು ಪಡೆಯಲೂ ಸಾಧ್ಯವಾಗಲಿಲ್ಲ.
ಆ. 30ರಂದು ಭಾನುವಾರ ಬೆಳಗ್ಗೆ ಇಲ್ಲಿನ ಕಲ್ಯಾಣನಗರದ `ಸೌಜನ್ಯ' ನಿವಾಸದಲ್ಲಿ ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಂತಕರನ್ನು ಶೀಘ್ರ ಬಂಧಿಸಲು ಎಸಿಪಿ ವಾಸುದೇವ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಆದರೆ, ಡಾ. ಎಂ.ಎಂ. ಕಲಬುರ್ಗಿ ಅವರ ಸಾವು ವೈಚಾರಿಕ ಹಿನ್ನೆಲೆಯಲ್ಲಿ ಆಗಿದೆ ಎಂಬ ಒತ್ತಡದ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಸಿಐಡಿ ಎಸ್ಪಿ ಡಿ.ಸಿ. ರಾಜಪ್ಪ ಅವರಿಗೆ ಎರಡೇ ದಿನಗಳಲ್ಲಿ ವಹಿಸಲಾಗಿತ್ತು. ಮಹಾರಾಷ್ಟ್ರದ ಚಿಂತಕ ಗೋವಿಂದ ಪಾನ್ಸರೆ ಅವರ ಕೊಲೆಯ ಪ್ರಮುಖ ಆರೋಪಿ ಸಮೀರ ಗಾಯಕವಾಡನನ್ನು ಅಲ್ಲಿನ ಎಸ್‍ಐಟಿ ವಿಚಾರಣೆ ನಡೆಸುತ್ತಿದ್ದು, ಡಾ. ಕಲಬುರ್ಗಿ ಅವರ ಹತ್ಯೆಯಲ್ಲೂ ಈತನ ಕೈವಾಡ ಇರಬಹುದು ಎಂದು ಸಿಐಡಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಆದರೆ, ಸಮೀರ್ ವಿಚಾರಣೆಗೆ ಅವಕಾಶ ಸಿಗುತ್ತಿಲ್ಲ. ಅಲ್ಲದೆ, ಸಮೀರ್ ಸಾಂಗ್ಲಿಯ ರುದ್ರ ಪಾಟೀಲ ಅಲಿಯಾಸ್ ರುದ್ರಗೌಡ ಪಾಟೀಲನ ಹೆಸರು ಬಾಯಿ ಬಿಟ್ಟಿದ್ದು, ಆತನ ಮೇಲೂ ಸಂಶಯ ವ್ಯಕ್ತಪಡಿಸಿರುವ ಸಿಐಡಿ ಅಧಿಕಾರಿಗಳು, 10 ದಿನಗಳಿಂದ ಎಸ್‍ಐಟಿ ಸಹಯೋಗದಲ್ಲಿ ರುದ್ರ ಪಾಟೀಲ್ ಬೆನ್ನು ಬಿದ್ದಿದ್ದಾರೆ. ಆತನ ಸುಳಿವೂ ಪತ್ತೆಯಾಗಿಲ್ಲ. ಮತ್ತೆ ಕೊಲ್ಹಾಪುರಕ್ಕೆ: ಕಲಬುರ್ಗಿ ಅವರ ಹತ್ಯೆಯಾದ ಮೇಲೆ 15 ದಿನ ನಿರಂತರವಾಗಿ ಅವರ ಮನೆಗೆ ಎಡತಾಕಿದ ಸಿಐಡಿ ಅಧಿಕಾರಿಗಳು, ಇದೀಗ ಆರೋಪಿಯ ಸುಳಿವಿಗಾಗಿ ಮಹಾರಾಷ್ಟ್ರದ ದಿಕ್ಕಿಗೆ ಹೊರಳಿದ್ದಾರೆ. ಇಷ್ಟಾದರೂ ಹಂತಕನ ಬಗ್ಗೆ ಸ್ಪಷ್ಟ ಕಲ್ಪನೆ ದೊರೆಯುತ್ತಿಲ್ಲ. ಈ ಮಧ್ಯೆ ಸಿಐಡಿ ಡಿಎಸ್ಪಿ ನೇತೃತ್ವದ ತಂಡ ಬುಧವಾರ ಮತ್ತೆ ಕೊಲ್ಹಾಪುರಕ್ಕೆ ತೆರಳಿದ್ದು, ಅಲ್ಲಿನ ಉಪ ಕಾರಾಗೃಹದಲ್ಲಿರುವ ಸಮೀರ ಗಾಯಕವಾಡನನ್ನು ವಿಚಾರಣೆ ಮಾಡಲು ಅವಕಾಶ ಕೊಡಿ ಎಂದು ಅರ್ಜಿ ಸಲ್ಲಿಸಿದೆ.
ಡಾ. ಎಂ.ಎಂ. ಕಲಬುರ್ಗಿ ಹಂತಕ ಯಾರು? ಏಕೆ ಕೊಲೆ ಮಾಡಿದ? ಆತ ಸಿಗುತ್ತಾನೋ? ಮಹಾರಾಷ್ಟ್ರದ ಚಿಂತಕ ಗೋವಿಂದ ಪಾನ್ಸರೆ ಅವರನ್ನು ಕೊಂದವರೇ ಕಲಬುರ್ಗಿ ಅವರಿಗೂ ಗುಂಡಿಟ್ಟರೇ? ಅಥವಾ ಬೇರೆ ಯಾರಾದರೂ ಕೊಲೆ ಮಾಡಿದರೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಒಂದು ತಿಂಗಳಾದರೂ ಉತ್ತರ ಸಿಕ್ಕಿಲ್ಲ. ಈ ಸಂಗತಿ ಈಗ ಕಲಬುರ್ಗಿ ಕುಟುಂಬ ಹಾಗೂ ಸಾಹಿತ್ಯ ವಲಯದಲ್ಲಿ ಚರ್ಚೆಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


