ಕಂಠಪೂರ್ತಿ ಕುಡಿಸಿ ಪತ್ನಿ ಕತ್ತು ಸೀಳಿದ: ಪತ್ನಿಯ ಹುಟ್ಟು ಹಬ್ಬದ ದಿನವೇ ಪತಿಯ ಅಟ್ಟಹಾಸ
ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿಯ ಹುಟ್ಟುಹಬ್ಬದ ದಿನವೇ ಆಕೆಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿ ಕೊಲೆ ಮಾಡಿ...

ಬೆಂಗಳೂರು: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿಯ ಹುಟ್ಟುಹಬ್ಬದ ದಿನವೇ ಆಕೆಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿ ಕೊಲೆ ಮಾಡಿ, ಪೊಲೀಸರ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸುಳ್ಳು ಹೇಳಿ ನಾಟಕವಾಡಿದ ಆರೋಪಿ ಪತಿಯನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರ 1ನೇ ಅಡ್ಡರಸ್ತೆ ನಿವಾಸಿ ಲಾರಿ ಮಾಲೀಕ ನಾರಾಯಣರೆಡ್ಡಿ (33) ಎಂಬಾತನೇ ತನ್ನ ಪತ್ನಿ ವಿಜಯಲಕ್ಷ್ಮಿ (23) ಕತ್ತು ಸೀಳಿ ಕೊಲೆ ಮಾಡಿದ ಆರೋಪಿ. ನಾರಾಯಣರೆಡ್ಡಿ ಹಾಗೂ ವಿಜಯಲಕ್ಷ್ಮಿನಾಲ್ಕು ವರ್ಷ ಗಳ ಹಿಂದೆ ವಿವಾಹವಾಗಿದ್ದು ದಂಪತಿಗೆ 3 ವರ್ಷದ ಮಗುವಿದೆ. ವಿಜಯಲಕ್ಷ್ಮಿಸಹಕಾರನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿ ಯಾಗಿ ಕೆಲಸ ಮಾಡುತ್ತಿದ್ದರು.
ತಂದೆ ಮನೆಯ ಸಮೀಪದಲ್ಲೇ ಮನೆ ಮಾಡಿಕೊಂಡಿದ್ದರು. ಬುಧವಾರ ವಿಜಯಲಕ್ಷ್ಮಿಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ಹುಟ್ಟುಹಬ್ಬ ಆಚರಿಸಿದ ಆರೋಪಿ, ಆಕೆಗೆ ಕಂಠಪೂರ್ತಿ ಬಿಯರ್ ಕುಡಿಸಿ, ಮಲಗುವ ಕೊಠಡಿಯಲ್ಲಿ ಒಳಗಿನಿಂದ ಚಿಲಕ ಹಾಕಿ ಕತ್ತು ಸೀಳಿ ಕೊಲೆ ಮಾಡಿದ್ದ. ಬಳಿಕ ಸ್ನಾನದ ಕೋಣೆಯಿಂದ ಅಡುಗೆ ಮನೆಯ ನಡುವೆ ಅಟ್ಟದ ಬಳಿ ಇರುವ ಸಣ್ಣ ರಂಧ್ರದ ಮೂಲಕ ನುಸುಳಿ ಹಾಲ್ ಗೆ ಬಂದು ಮಲಗಿದ್ದ.
ಆತ್ಮಹತ್ಯೆ ನಾಟಕ: ನಸುಕಿನ 5.30ರ ಸುಮಾರಿಗೆ ಎಚ್ಚರಗೊಂಡವನಂತೆ ನಟಿಸಿದ ಆರೋಪಿ ನಾರಾಯಣರೆಡ್ಡಿ, ನೇರವಾಗಿ ಆಕೆಯ ಪಾಲಕರ ಮನೆಗೆ ಹೋಗಿದ್ದ. ರಾತ್ರಿ ಹುಟ್ಟುಹಬ್ಬ ಆಚರಿಸಿದ ಬಳಿಕ ವಿಜಯಲಕ್ಷ್ಮಿ ಮದ್ಯಪಾನ ಮಾಡಿದಳು. ಬಳಿಕ ಹೊರಗೆ ಜಾಲಿ ರೈಡ್ ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಳು.
ಆದರೆ, ನನ್ನ ವಾಹನದ ವಿಮೆ ಅವಧಿ ಮುಕ್ತಾಯಗೊಂಡಿದ್ದ ಕಾರಣ ಹೊರಗೆ ಹೋಗುವುದು ಬೇಡ ಎಂದಿದ್ದೆ. ಇದರಿಂದ ಬೇಸರಗೊಂಡ ಆಕೆ ಕೊಠಡಿಯೊಳಗೆ ಸೇರಿಕೊಂಡಿದ್ದಳು. ನಾನು ಹಾಲ್ ನಲ್ಲಿ ಮಲಗಿದ್ದೆ. ಬೆಳಗ್ಗೆ ಬಾಗಿಲು ಬಡಿದರೂ ತೆಗೆದಿರಲಿಲ್ಲ. ಹೀಗಾಗಿ, ನಿಮಗೆ ತಿಳಿಸಲು ಬಂದಿದ್ದಾಗಿ ಹೇಳಿ ಆಕೆಯ ಪಾಲಕರನ್ನು ಮನೆಗೆ ಕರೆದುಕೊಂಡು ಬಂದಿದ್ದ.
ಮನೆಗೆ ಬಂದ ಪಾಲಕರು ಬಾಗಿಲು ಬಡಿದರೂ ಉಪಯೋಗವಾಗಲಿಲ್ಲ. ಅಂತಿಮವಾಗಿ ನೆರೆಹೊರೆಯವರ ನೆರವಿನೊಂದಿಗೆ ಬಾಗಿಲು ಮುರಿದು ನೋಡಿದಾಗ ವಿಜಯಲಕ್ಷ್ಮೀ ಮಂಚದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮುಂದೆ ಕೂಡಾ ಆರೋಪಿ ತನ್ನ ಪತ್ನಿ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಿದ್ದ. ಈ ಮಾತನ್ನು ಪಾಲಕರು ಕೂಡ ನಂಬಿದ್ದರು.
ನಾರಾಯಣರೆಡ್ಡಿ ಹೇಳಿಕೆ ಬಗ್ಗೆ ಅನುಮಾನಗೊಂಡ ಪೊಲೀಸರು, ಐಪಿಸಿ ಕಲಂ 174(ಸಿ) ಅಸಹಜ ಸಾವು ಅನ್ವಯ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದರು. ಪರೀಕ್ಷೆ ವೇಳೆ ಕತ್ತು ಸೀಳಿರುವ ರೀತಿಯನ್ನು ಗಮನಿಸಿದ ವೈದ್ಯರು ಇದು ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡು ಬಂದಿಲ್ಲ. ಎರಡನೇ ವ್ಯಕ್ತಿಯಿಂದಲೇ ಕೃತ್ಯ ನಡೆದಿದೆ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ನಾರಾಯಣರೆಡ್ಡಿಯನ್ನು ವಶಕ್ಕೆ ಪಡೆದು ಕೂಲಂಕಶವಾಗಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


