ವೈದ್ಯರ ಕಡ್ಡಾಯ ಸೇವೆಗೆ ಆಕ್ರೋಶ
ಎಂಬಿಬಿಎಸ್ ಕೋರ್ಸ್ ಪೂರೈಸುವ ಪ್ರತಿ ವಿದ್ಯಾರ್ಥಿಯು ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ಮಾಡಬೇಕೆಂದು ಈ ಸಾಲಿನಿಂದ ಜಾರಿಗೆ ತಂದಿರುವ ಕಾನೂನು...

Published On :
ಬೆಂಗಳೂರು: ಎಂಬಿಬಿಎಸ್ ಕೋರ್ಸ್ ಪೂರೈಸುವ ಪ್ರತಿ ವಿದ್ಯಾರ್ಥಿಯು ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ಮಾಡಬೇಕೆಂದು ಈ ಸಾಲಿನಿಂದ ಜಾರಿಗೆ ತಂದಿರುವ ಕಾನೂನು ಎನ್‍ಆರ್‍ಐ ಕೋಟಾದಡಿ ಸೀಟು ಪಡೆದ ವಿದ್ಯಾರ್ಥಿಗಳ ಪೋಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಮ್ಮ ಮಕ್ಕಳಿಗೆ ಈ ಕಾನೂನು ಕಂಟಕವಾಗುತ್ತಿದೆ. ನೀವು ಕಡ್ಡಾಯ ಎಂದು ಈಗ ಹೇಳಿದ್ದರಿಂದ ನಮ್ಮ ಮುಂದಿನಯೋಜನೆಗಳೆಲ್ಲಾ ತಲೆಕೆಳಗಾಗುತ್ತವೆ, ಲಕ್ಷಾಂತರ ರುಪಾಯಿ ಕೈಬಿಟ್ಟುಹೋಗುತ್ತದೆ. ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ಈ ಕಾನೂನನ್ನು ಈ ಒಂದು ವರ್ಷಕ್ಕೆ ಹೇರಬೇಡಿ, ಬೇಕಿದ್ದರೆ ಮುಂದಿನ ವರ್ಷದಿಂದ ಅನುಷ್ಠಾನ ಮಾಡಿ ಎಂದು ಎನ್‍ಆರ್‍ಐ ಪೋಷಕರು ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ. ಇಷ್ಟೇ ಅಲ್ಲದೇ ಸರ್ಕಾರ ಪೂರ್ವಾಪರ ಆಲೋಚಿಸದೇ ಏಕಾಏಕಿ ಈ ವರ್ಷದಿಂದಲೇ ಹೊಸ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವುದರ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿರುವ ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. `ಇದೊಂದು ಕಾನೂನು ಬಾಹಿರ ಕ್ರಮ' ಎಂದು ಒಬ್ಬ ಪೋಷಕರು ಹೇಳಿದರೆ, ಹೊಸ ಕಾನೂನು ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಮತ್ತೊಬ್ಬರು ವಾದಿಸಿದ್ದಾರೆ. ಕೋರ್ಸು ಆರಂಭದಲ್ಲಿ ಈ ಬಗ್ಗೆ ಸಹಿ ಮಾಡಿಸಿಕೊಳ್ಳದೇ
ಕೊನೆ ಹಂತದಲ್ಲಿ ಕಡ್ಡಾಯ ಸೇವೆ ಎಂದು ಹೇಳಿದ್ದು ಅಕ್ಷಮ್ಯ ಎಂದು ಟೀಕಿಸಿದ್ದಾರೆ.
ಪೋಷಕರ ಆತಂಕವೇನು?: ನಾವು ವಾಸಿಸುತ್ತಿರುವುದು ವಿದೇಶದಲ್ಲಿ. ನಮ್ಮ ಮಕ್ಕಳು ಈಗ ಎಂಬಿಬಿಎಸ್ ಮುಗಿಸಿ ಮುಂದಿನ ಶಿಕ್ಷಣವನ್ನು ನಾವಿರುವ ದೇಶದಲ್ಲೇ ಮುಂದುವರಿಸುವ ಯೋಜನೆ ಮಾಡಿದ್ದೇವೆ. ಹೀಗಾಗಿ ನಾವಿರುವ ದೇಶಗಳಲ್ಲಿ ಮುಂದಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದಲ್ಲದೇ, ಪೂರ್ವತಯಾರಿಗೆ ಸಾಕಷ್ಟು ಸಮಯವನ್ನೂ ನೀಡಿದ್ದೇವೆ. ನಮ್ಮ ಮಕ್ಕಳು ಪ್ರವೇಶ ಪರೀಕ್ಷೆಗಳನ್ನೂ ಎದುರಿಸಲು ಅಂತಿಮ ಹಂತದ ತಯಾರಿ ನಡೆಸಿದ್ದಾರೆ. ಈಗ ಗ್ರಾಮೀಣ ಸೇವೆ ಕಡ್ಡಾಯ ಸರಿ ಅಲ್ಲ ಎಂಬುದು ಎನ್ ಆರ್‍ಐ ಪೋಷಕರ ಸಾಮೂಹಿಕ ವಾದ. ಕರ್ನಾಟಕದ ಸರ್ಕಾರದ ಭಾಗವಾಗಿರುವ ಎನ್‍ಆರ್‍ಐ ಫಾರಂಗೆ ಈ ಕುರಿತಂತೆ ಸಾಮೂಹಿಕವಾಗಿ ದೂರು ಸಲ್ಲಿಸಿರುವ ಪೋಷಕರು, ಸರ್ಕಾರ ಈ
ಕೂಡಲೇ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳಿಗಾಗುವ ಅನ್ಯಾಯವನ್ನು ತಡೆಯುವಂತೆ ಕೋರಿದ್ದಾರೆ. `ಕನ್ನಡಪ್ರಭ'ಕ್ಕೆ ಲಭ್ಯವಾದ ದಾಖಲೆಯಂತೆ, ಎನ್‍ಆರ್‍ಐ ಪೋಷಕರು ಈ ವಿಷಯವನ್ನು ಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ. ಒಂದು ಕಡೆ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರಲ್ಲದೇ, ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಜೊತೆ ಜೊತೆಗೆ ಮುಂದಿನ ದಿನಗಳಲ್ಲಿ ಎನ್‍ಆರ್‍ಐ ಕೋಟದಡಿ ಸೀಟು ತುಂಬುವುದಿಲ್ಲ, ಇದರಿಂದ ಗಂಭೀರ ಪರಿಣಾಮ ಉಂಟಾಗಬಹುದೆಂದು ಕೆಲವರು ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


