ಪ್ರೀತ್ಸೆ ಎಂದ ಚಾಲಕನಿಗೆ ಗೂಸಾ
ಪ್ರೀತ್ಸೆ ಪ್ರೀತ್ಸೆ ಎಂದು ಟೆಕ್ಕಿ ಹಿಂದೆ ಬಿದ್ದಿದ್ದ ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿರುವ ಘಟನೆ ಸೋಮವಾರ ಬೆಳ್ಳಂಬೆಳಗ್ಗೆ ಲಗ್ಗೆರೆ ಬಳಿ ನಡೆದಿದೆ...

ಬೆಂಗಳೂರು: ಪ್ರೀತ್ಸೆ ಪ್ರೀತ್ಸೆ ಎಂದು ಟೆಕ್ಕಿ ಹಿಂದೆ ಬಿದ್ದಿದ್ದ ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿರುವ ಘಟನೆ ಸೋಮವಾರ ಬೆಳ್ಳಂಬೆಳಗ್ಗೆ ಲಗ್ಗೆರೆ ಬಳಿ ನಡೆದಿದೆ.
ನಾಗರಬಾವಿ ಮಾಳಗಾಳ ನಿವಾಸಿ ದೇವೇಂದ್ರಪ್ಪ (30) ಗೂಸಾ ತಿಂದವ. ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ಹೋಗಿ ಆಕೆ ತಂದೆ ಬಳಿ ಪ್ರೀತಿ ವಿಷಯ ಪ್ರಸ್ತಾಪಿಸಿದ. ಇದರಿಂದ ಕೋಪಗೊಂಡ ಅವರು, ಆತನನ್ನು ತೆರಳುವಂತೆ ಸೂಚಿಸಿದ್ದರು. ಆದರೂ, ಆತ ತಮ್ಮ ಪುತ್ರಿಯನ್ನು ವಿವಾಹ ಮಾಡಿಕೊಡಿ ಎಂದು ಪೀಡಿಸಿದ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಆತನನ್ನು ಥಳಿಸಿ ನಂತರ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಒಪ್ಪಿಸಿದರು.
ಆರೋಪಿ ದೇವೇಂದ್ರಪ್ಪ ಕಲಬುರಗಿ ಮೂಲದವನಾಗಿದ್ದು, ಹಲವು ವರ್ಷಗಳಿಂದ ಪತ್ನಿ ಹಾಗೂ ಪುತ್ರನ ಜತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಕ್ಯಾಬ್ ಚಾಲಕನಾಗಿ ಕೆಲಸ ಮಾಡುವ ಈತ ತನ್ನ ಕಾರನ್ನು ಶ್ಯಾಂ ಟ್ರಾವೆಲ್ ಹಾಗೂ ಎಸ್‍ಜೆಪಿ ಎಂಬ ಕಂಪನಿ ಜತೆ ಒಪ್ಪಂದ ಮಾಡಿ ಕಾರು ಓಡಿಸುತ್ತಿದ್ದ. ಹಾಗಾಗಿ ನಿತ್ಯ ಕುರುಬರಹಳ್ಳಿಯಿಂದ ಸರ್ಜಾಪುರಕ್ಕೆ ಐಟಿ ಕಂಪನಿಯ ಉದ್ಯೋಗಿಗಳನ್ನು ಕರೆದುಕೊಂಡು ಹೋಗುತ್ತಿದ್ದ.
ಈ ನಡುವೆ ಎಲ್‍ಜಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ ಯುವತಿ ಕಲಾ (ಹೆಸರು ಬದಲಿಸಿದೆ)ಳನ್ನು ಸಹ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ, ಆಕೆಯ ಕಂಪನಿಗೆ ಬಿಡುತ್ತಿದ್ದ. ಈ ನಡುವೆ ಯುವತಿ ಮೇಲೆ ಪ್ರೇಮಾಂಕುರವಾಗಿತ್ತು. ಕಳೆದ ಸೆ.10ರಂದು ಆಕೆಯ ಮನೆಗೆ ಹೋಗಿ ತಂದೆ ರಾಜು ಅವರ ಬಳಿ `ನಾನು ನಿಮ್ಮ ಮಗಳನ್ನು ಇಷ್ಟಪಡುತ್ತಿದ್ದೇನೆ. ನನಗೆ ವಿವಾಹ ಮಾಡಿಕೊಡಿ' ಎಂದು ಮನವಿ ಮಾಡಿದ್ದ. ಆಗ ಆತನಿಗೆ ಬುದ್ಧಿ ಹೇಳಿ ವಾಪಸ್ ಕಳುಹಿಸಿದ್ದರು. ಆದರೆ, ಆತನ ವರ್ತನೆ ಬದಲಾಗಿರಲಿಲ್ಲ. ಆಗಾಗ ಯುವತಿಗೆ ತೊಂದರೆ ನೀಡುತ್ತಿದ್ದ. ಸೋಮವಾರ ಬೆಳಗ್ಗೆ ಲಗ್ಗೆರೆ ಆಂಜನೇಯ ದೇವಸ್ಥಾನದ ಬಳಿ ಇರುವ ಯುವತಿ ಮನೆಗೆ ಹೋದ ಆತ, ಆಕೆ ತಂದೆ ಬಳಿ ಮತ್ತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.
ಬುದ್ಧಿಮಾತು ಕೇಳದ ಪರಿಣಾಮ ಕೋಪಗೊಂಡ ಅವರು ಅಕ್ಕಪಕ್ಕದವರ ಜತೆ ಸೇರಿ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಬುದ್ಧಿ ಹೇಳಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಹಾಗೂ ಮತ್ತೆ ಯುವತಿ ಸಹವಾಸಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಯುವತಿಯ ಹಿತದೃಷ್ಟಿಯಿಂದ ಈ ಸಂಬಂಧ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


