ಜಿಲ್ಲಾ ಸುದ್ದಿ

ಮಲ್ಲೇಶ್ವರಂ ಪೋಸ್ಟ್ ಆಫೀಸಿನಲ್ಲಿ 30 ನೆಯ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ

30ನೆಯ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಸಂದರ್ಭದಲ್ಲಿ ನಾರಾಯಣ ನೇತ್ರಾಲಯವು, ದಿ ಐ ಬ್ಯಾಂಕ್ ಅಸೋಸಿಯೇಶನ್ ಆಫ್‍ಇಂಡಿಯಾ ಮತ್ತು ನಾರಾಯಣ ನೇತ್ರಾಲಯದ ಡಾ. ರಾಜ್‍ಕುಮಾರ್ ನೇತ್ರಾಲಯದ ಸಹಯೋಗದಲ್ಲಿ...

ಮಲ್ಲೇಶ್ವರಂ ಪೋಸ್ಟ್ ಆಫೀಸಿನಲ್ಲಿ 30 ನೆಯ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
Published On :

ಬೆಂಗಳೂರು: ಅದೊಂದು ಅಪರೂಪದ ಸಂದರ್ಭ.ಸರ್ಕಾರಿ ಕಛೇರಿಯೊಂದರಲ್ಲಿ ಮೊಟ್ಟಮೊದಲ ಪ್ರಯತ್ನ. ಭಾರತೀಯ ಅಂಚೆಯ ಮಲ್ಲೇಶ್ವರಂನ ಮುಖ್ಯ ಅಂಚೆ ಕಛೇರಿ ಬೆಳಿಗ್ಗೆ 8.30ಕ್ಕೆಲ್ಲ ನೌಕರರಿಂದ ತುಂಬಿತ್ತು.ಸಾಮಾನ್ಯ ದಿನಗಳಲ್ಲಿ ಕೆಲಸದ ವೇಳೆ ಬೆಳಿಗ್ಗೆ 9 ಗಂಟೆಗೆ ಆರಂಭವಾಗುತ್ತದೆ.ಆದರೆ ಸಪ್ಟೆಂಬರ್ 8 ರಂದು ಅಲ್ಲಿ ಬೇರೆಯದೇ ವಾತಾವರಣವಿತ್ತು.

ಮಲ್ಲೇಶ್ವರಂ ಮುಖ್ಯ ಅಂಚೆ ಕಛೇರಿಯ ಉದ್ಯೋಗಿಗಳು ಅಂದು ಬೆಳಿಗ್ಗೆ 8.30 ಗಂಟೆಗೆ ಸರಿಯಾಗಿ ಕಛೇರಿ ತಲುಪಿದ್ದರು. ನೀವು ನಂಬಲೇ ಬೇಕಾದ ವಿಚಾರವೆಂದರೆ ಅವರೆಲ್ಲಾ ಒಂದು ಘನ ಉದ್ದೇಶದಿಂದಅಲ್ಲಿ ಸೇರಿದ್ದರು.

ದಶಕಗಳಿಂದ ಅಂಚೆಯಣ್ಣನು ತನ್ನ ಭೌಗೋಳಿಕ ಪ್ರದೇಶವನ್ನು ಚೆನ್ನಾಗಿ ಅರಿತಿದ್ದಾನೆ ಮತ್ತು ಸಾಮಾನ್ಯ ಜನರ ವಿಶೇಷ ಸ್ನೇಹಿತನಾಗಿದ್ದಾನೆ. ಜನಸಾಮಾನ್ಯರ ಎಲ್ಲಾ ಅಗತ್ಯದ ಸಮಯದಲ್ಲಿ ಸಂದೇಶವಾಹಕನಾಗಿ ನೆರವಾಗಿದ್ದಾನೆ. ಹಾಗೂ ಈ ಖಾಕಿ ಸ್ನೇಹಿತರು ಭಾರತದ ಮೂಲೆ ಮೂಲೆಯನ್ನು ಬಲ್ಲರು. ಜನರು ಅವರನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ.

ಈ ಮುಂಚೆ ಯಾವುದೇ ನೇತ್ರದಾನ ಪಾಕ್ಷಿಕದ ಪ್ರಚಾರಾಂದೋಲನದ ಗ್ರಾಂಡ್ ಫಿನಾಲೆಯು ಬೆಳಗಿನ 8.30 ಗಂಟೆಗೆ ನೌಕರರ ಕೆಲಸದ ವೇಳೆಗಿಂತ ಮುಂಚೆ ಆರಂಭವಾದ ಉದಾಹರಣೆಯಿಲ್ಲ.

30ನೆಯ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಸಂದರ್ಭದಲ್ಲಿ ನಾರಾಯಣ ನೇತ್ರಾಲಯವು, ದಿ ಐ ಬ್ಯಾಂಕ್ ಅಸೋಸಿಯೇಶನ್ ಆಫ್‍ಇಂಡಿಯಾ ಮತ್ತು ನಾರಾಯಣ ನೇತ್ರಾಲಯದ ಡಾ. ರಾಜ್‍ಕುಮಾರ್ ನೇತ್ರಾಲಯದ ಸಹಯೋಗದಲ್ಲಿ ಮಲ್ಲೇಶ್ವರಂ ಅಂಚೆ ಕಛೇರಿಯ ಆವರಣದಲ್ಲಿ ಜಾಗೃತಿ ಶಿಬಿರವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 75 ಕ್ಕೂ ಹೆಚ್ಚು ಅಂಚೆ ನೌಕರರು/ಅಧಿಕಾರಿಗಳು ಭಾಗವಹಿಸಿದ್ದರು.ಇವರು ಸುಮಾರು 500,000 ಜನಸಂಖ್ಯೆಯನ್ನು ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಪಿನ್ ಸಂಖ್ಯೆ 560003ನ್ನು ಪ್ರತಿನಿಧಿಸುತ್ತಾರೆ.

ಪ್ರತಿದಿನವೂ ತಾವು ಭೇಟಿ ಮಾಡುವ ಸಹಸ್ರಾರು ಜನರಲ್ಲಿ ಇವರೆಲ್ಲಾ ಅರಿವನ್ನುಂಟು ಮಾಡಲು ಸಾಧ್ಯವಾಗಲೆಂಬ ಕಾರಣಕ್ಕೆ ಅಂಚೆ ಕಛೇರಿಯ ಉದ್ಯೋಗಿಗಳಿಗೆ ನೇತ್ರದಾನದ ಕುರಿತ ಜಾಗೃತಿ ಕಾರ್ಯಕ್ರಮ ಹಾಗೂ ಆಪ್ತ ಸಮಾಲೋಚನೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಐ ಬ್ಯಾಂಕ್ ಅಸೋಸಿಯೇಶನ್ ಆಫ್‍ಇಂಡಿಯಾ (ದಕ್ಷಿಣ ವಲಯ) ದ ಅಧ್ಯಕ್ಷ ಶ್ರೀ ಎಮ್ ಕೃಷ್ಣ ಅವರು “ಅಂಚೆಯಣ್ಣನು ದ್ವೀಪಗಳೂ ಸೇರಿದಂತೆ ಭಾರತದಾದ್ಯಂತ 6 ಲಕ್ಷ ಪಿನ್ ಕೋಡ್ ಪ್ರದೇಶಗಳನ್ನು ಮುಟ್ಟುತ್ತಾನೆ. ಆದ್ದರಿಂದ ಅವನು ಆ ಪ್ರದೇಶ/ನಗರ/ರಾಷ್ಟ್ರದ ಜನರ ಪ್ರತಿನಿಧಿಯಂತೆ ಕಾರ್ಯನಿರ್ವಹಿಸುತ್ತಾನೆ. ಅವರಿಗೆ ತಮ್ಮ ಪ್ರದೇಶದ ಪ್ರತಿಯೊಬ್ಬರ ಪರಿಚಯವೂ ಇರುತ್ತದೆ. ನೇತ್ರದಾನದ ಪ್ರಾಮುಖ್ಯತೆಯ ಅರಿವನ್ನುಂಟು ಮಾಡಿ, ಅವರು ಸ್ವತಃತಮ್ಮ ನೇತ್ರದಾನವನ್ನು ಮಾಡಲು ಒಪ್ಪುವುದರಿಂದ ಅವರು ಈ ಮಹಾನ್‍ಕಾರ್ಯದ ಸಂದೇಶವನ್ನು ಮನೆಮನೆಗೆ ತಲುಪಿಸುತ್ತಾರೆ. ಆದ್ದರಿಂದ ಇವರ ಮೂಲಕ ನಾವು ಭಾರತದ ಪ್ರತಿಯೊಂದು ಮೂಲೆಯನ್ನು ತಲುಪುವುದು ಸಾಧ್ಯವಾಗುತ್ತದೆ.”ಎಂದು ತಿಳಿಸಿದರು.

ನಾರಾಯಣ ನೇತ್ರಾಲಯದ ವ್ಯವಸ್ಥಾಪಕರು ಮತ್ತು ಅಧ್ಯಕ್ಷರೂ ಆಗಿರುವ ಶ್ರೀ ಭುಜಂಗ ಶೆಟ್ಟಿಯವರು “ನೇತ್ರದಾನ ಪಾಕ್ಷಿಕದ (ಅಗಸ್ಟ್ 28- 8 ಸಪ್ಟೆಂಬರ್) ದ ಕೊನೆಯ ದಿನವಾದ ಸಪ್ಟೆಂಬರ್ 8 ನ್ನು ದೇಶದಾದ್ಯಂತ ನೇತ್ರದಾನ ದಿನವನ್ನಾಗಿ ಆಚರಿಸುತ್ತಾರೆ. ನಾವಿದನ್ನು ಒಂದು ಅಭೂತಪೂರ್ವ ಘಟನೆಯೆಂದು ಕರೆಯಲು ಬಯಸುತ್ತೇವೆ. ಏಕೆಂದರೆ ಕಳೆದ 30 ವರ್ಷಗಳಲ್ಲಿ ನೇತ್ರದಾನ ಜಾಗೃತಿ ಕಾರ್ಯಕ್ರಮವು ಈ ತೆರನಾಗಿ ಎಲ್ಲಿಯೂ ಜರುಗಿರುವುದಿಲ್ಲ. ಕಳೆದ ವಾರ ನೇತ್ರದಾನ ಕುರಿತ ಅರಿವನ್ನು ಮೂಡಿಸಲು ನಾವು ‘ದೃಷ್ಟಿಸಂತೆ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ನೇತ್ರದಾನಕ್ಕಿರುವ ಬೇಡಿಕೆ ಮತ್ತು ಪೂರೈಕೆಯನ್ನು ಸರಿದೂಗಿಸಲು ನಾರಾಯಣ ನೇತ್ರಾಲಯವು ಬೆಂಗಳೂರಿಗರಲ್ಲಿ ಜಾಗೃತಿ ಮೂಡಿಸಲು ಸದಾ ಶ್ರಮಿಸುತ್ತಿದೆ. ಪ್ರತಿದಿನವೂ ನಾವು ಜನರಲ್ಲಿ ನೇತ್ರದಾನದ ಕುರಿತ ಅರಿವು, ತಿಳುವಳಿಕೆ ಮೂಡಿಸುವ ಮೂಲಕ ದೃಷ್ಟಿಹೀನರ ಜೀವನದಲ್ಲಿ ಬೆಳಕು ಮೂಡಿಸಲು ಸದಾ ಶ್ರಮಿಸುತ್ತಿದ್ದೇವೆ,”ಎಂದರು.

2012ರಲ್ಲಿ ನಡೆಸಲಾದ ಸರ್ವೇ ಮತ್ತು ವರದಿಗಳ ಪ್ರಕಾರ ಜಗತ್ತಿನ ಐವರು ಅಂಧರಲ್ಲಿ ಒಬ್ಬರು ಭಾರತದವರಾಗಿದ್ದಾರೆ. ಅಂದರೆ ಸುಮಾರು 1.5 ಲಕ್ಷ ಜನರು ಅಂಧತ್ವದಿಂದ ಬಳಲುತ್ತಿದ್ದಾರೆ ಆದರೆ ನೇತ್ರದಾನದ ಅಂಕಿಅಂಶವು 35,000ದಷ್ಟಿದ್ದು, ಬೇಡಿಕೆ ಮತ್ತು ಪೂರೈಕೆಯ ನಡುವೆ ಇರುವ ದೊಡ್ಡ ಅಂತರದಿಂದಾಗಿ ಸಾಮಾನ್ಯ ಜನರಿಗೆ ದೃಷ್ಟಿ ಮರಳಿ ಪಡೆಯುವುದು ದುಸ್ತರವೆನಿಸಿದೆ. 2014 ರ ಸಾಲಿನಲ್ಲಿ ನಾವು ಒಟ್ಟೂ 1372 ನೇತ್ರಗಳನ್ನು ಸಂಗ್ರಹಿಸಿದ್ದು ಇದು ರಾಜ್ಯದಲ್ಲಿ ಸಂಗ್ರಹವಾದ ಒಟ್ಟೂ ನೇತ್ರಗಳ ಮೂರನೆಯ ಒಂದರಷ್ಟು ಪ್ರಮಾಣಕ್ಕಿಂತಲೂ ಜಾಸ್ತಿ ಎಂದು ತಿಳಿಸಲು ನಾವು ಹೆಮ್ಮೆ ಪಡುತ್ತೇವೆ. 1982 ರಲ್ಲಿ ಸಂಸ್ಥೆಯು ಆರಂಭವಾದಂದಿನಿಂದಲೂ ನಾವು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆಂದು ತಿಳಿಸಲು ಸಂತೋಷವೆನಿಸುತ್ತದೆ,”ಎಂದು ಡಾ. ಭುಜಂಗ್ ಶೆಟ್ಟಿಯವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.