ಅತಿರೇಕಕ್ಕೆ ಹೋದ ವಿಚಾರವಾದಿಗಳ ಹತ್ಯೆ
ಸಾಹಿತಿ ಎಂ.ಎಂ.ಕಲಬುರ್ಗಿ, ದಾಭೋಲ್ಕರ್ ಹತ್ಯೆ ಸೇರಿದಂತೆ ದೇಶದಲ್ಲಿ ವಿಚಾರವಾದಿಗಳ ಮೇಲೆ ನಡೆಯುತ್ತಿರುವ ಹತ್ಯೆ ಪ್ರಕರಣಗಳು...
ಬೆಂಗಳೂರು: ಸಾಹಿತಿ ಎಂ.ಎಂ.ಕಲಬುರ್ಗಿ, ದಾಭೋಲ್ಕರ್ ಹತ್ಯೆ ಸೇರಿದಂತೆ ದೇಶದಲ್ಲಿ ವಿಚಾರವಾದಿಗಳ ಮೇಲೆ ನಡೆಯುತ್ತಿರುವ ಹತ್ಯೆ ಪ್ರಕರಣಗಳು ಅತಿರೇಕಕ್ಕೆ ಹೋಗಿದ್ದು, ಇಂತಹ ದುರ್ಘಟನೆಗಳು ನಡೆಯಬಾರದು ಎಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಮೊಮ್ಮಗ ಅಭಿತೇಜ್ ಸಿಂಗ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಅವರ ವಿಚಾರಗಳು ಈ ದೇಶದ ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿವೆ.ಹಾಗಾಗಿ ಸಮಾಜದಲ್ಲಿ ಆತಂಕ ಉಂಟುಮಾಡುವಂತ ಘಟನೆಗಳು ನಡೆಯದಂತೆ ತಡೆಯಲು ಹಾಗೂ ದೇಶದ ಜನರನ್ನು ಜಾಗೃತಗೊಳಿಸಲು `ಯೂತ್ ಫಾರ್ ಶಹೀದ್ ಇ ಆಜಾಂ ಸಂಘಟನೆ ಮೂಲಕ ಭಗತ್ ಸಿಂಗ್ ಅವರ ವಿಚಾರಗಳನ್ನು ಪ್ರಚುರಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಆರು ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬೃಹತ್ ರ್ಯಾಲಿ ಹೋಗುತ್ತಿದ್ದ ಸಂದರ್ಭದಲ್ಲಿ ಒಂದು ಧರ್ಮದವರು ಮತ್ತೊಂದು ಧರ್ಮದ ವಿರುದ್ಧ ಹೇಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ ಎಂಬುದು ಅರಿವಾಯಿತು. ರ್ಯಾಲಿಯ ವೇಳೆ ಅನ್ಯ ಧರ್ಮದ ಧಾರ್ಮಿಕ ಕೇಂದ್ರಗಳು ಸಮೀಪಿಸುತ್ತಿದ್ದಂತೆ, ಜೋರಾಗಿ ಕಿರುಚುತ್ತಿದ್ದರು. ಇದನ್ನು ಗಮನಿಸಿದರೆ, ಧರ್ಮಗಳ ನಡುವೆ ಹೊಂದಾಣಿಕೆಯೇ ಇಲ್ಲ ಎಂಬುದು ಅರ್ಥವಾಯಿತು. ನಮ್ಮ ಸಂಘಟನೆ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ವಿಭಜನೆಯಿಂದ ರಾಜಕೀಯ ಲಾಭ: ರಾಜಕೀಯ ಪಕ್ಷಗಳು ದೇಶದ ಜನರನ್ನು ಜಾತಿ, ಧರ್ಮದ ಆಧಾರದ ಮೇಲೆ ವಿಭಜನೆ ಮಾಡುವುದರಲ್ಲೇ ಸಂತೋಷಪಡುತ್ತಿವೆ. ಯಾಕೆಂದರೆ ಜನರನ್ನು ವಿಂಗಡಿಸಿದರೆ ರಾಜಕೀಯ ಲಾಭ ಸಿಗುತ್ತದೆ.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳೇ ಕಳೆದಿದ್ದರೂ, ನಾಗರಿಕರ ಮೇಲೆ ಒತ್ತಡ ಹೇರುವ ಪ್ರವೃತ್ತಿ ಬದಲಾಗಿಲ್ಲ. ಇದು ಖಂಡನೀಯ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿಗಳ ಧೋರಣೆ ಕುರಿತು ಮಾತನಾಡಿದ ಅವರು, ಒಬ್ಬರು ಜಾತ್ಯತೀತದ ಬಗ್ಗೆ ಯೋಚಿಸಿದರೆ, ಮತ್ತೊಬ್ಬರು ರಾಷ್ಟ್ರೀಯತೆ ಬಗ್ಗೆ ಯೋಚಿಸುತ್ತಿದ್ದಾರೆ. ಇದರಿಂದ ಜನರ ವಿಂಗಡಣೆಯಾಗುತ್ತಿದೆ ಹೊರತು, ಒಂದಾಗುತ್ತಿಲ್ಲ.ಮಾನವೀಯತೆ ಕಾಳಜಿಯಿಂದ ಸರ್ವರನ್ನು ಒಗ್ಗೂಡಿಸಿ ಮುನ್ನಡೆಸಬೇಕಿದೆ. ದೇಶಕ್ಕೆ ಬೇಕಾಗಿರುವುದು ಅಭಿವೃದ್ಧಿಯೇ ಹೊರತು, ಜಾತಿ, ಧರ್ಮಗಳ ನಡುವೆ ಘರ್ಷಣೆಯಲ್ಲ. ಮಾನವೀಯತೆಯೇ ದೊಡ್ಡ ಧರ್ಮ. ಇದಕ್ಕೂ ಮಿಗಿಲಾದದ್ದು ಮತ್ತಾವುದೂ ಇಲ್ಲ. ಇದನ್ನು ದೇಶಕ್ಕೆ ಪ್ರಚಾರ ಮಾಡುವುದೇ ಯೂತ್ ಫಾರ್ ಶಹೀದ್ ಇ ಆಜಾಂ ಸಂಘಟನೆ ಉದ್ದೇಶ ಎಂದು ಅಭಿತೇಜ್ ಸಿಂಗ್ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

