ವಿಸ್ತರಣೆಯೇ ಏಕೆ? ವರಿಷ್ಠರಿಗೆ ಸಿಎಂ ಕೊಡಲಿದ್ದಾರೆ ವಿವರಣೆ
ಸಂಪುಟ ಪುನಾರಚನೆಗಿಂತ ಸಂಪುಟ ವಿಸ್ತರಣೆಯನ್ನೇ ಏಕೆ ಮಾಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡಲಿದ್ದಾರೆ...ಯ್ಯ ಹೈಕಮಾಂಡ್‍ಗೆ

ಬೆಂಗಳೂರು: ಸಂಪುಟ ಪುನಾರಚನೆಗಿಂತ ಸಂಪುಟ ವಿಸ್ತರಣೆಯನ್ನೇ ಏಕೆ ಮಾಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಏಕೆಂದರೆ ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ
ಮತ್ತು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗಳಲ್ಲಿ ಪಕ್ಷದ ಶಾಸಕರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಒಂದೊಮ್ಮೆ ಪುನಾರಚನೆ ಜೇನುಗೂಡಿಗೆ ಕೈ ಹಾಕಿದರೆ 8ರಿಂದ 10 ಸಚಿವರನ್ನು ಬದಲಿಸಬೇಕಾಗುತ್ತದೆ. ಇದು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಆದ್ದರಿಂದ ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳನ್ನು ತುಂಬಿಕೊಂಡು ಚುನಾವಣೆ ನಂತರದಲ್ಲಿ ಪುನಾರಚನೆ ನಡೆಸುವುದು ಸೂಕ್ತ ಎಂಬ ಅಂಶವನ್ನು ಸಿದ್ದರಾಮಯ್ಯ ಹೈಕಮಾಂಡ್‍ಗೆ ತಿಳಿಸಲಿದ್ದಾರೆ ಎಂಬ ಮತ್ತೊಂದು ವಾದವೂ ಕೇಳಿಬರುತ್ತಿದೆ.
ಆದರೆ, ಇದಕ್ಕೆ ಹೈಕಮಾಂಡ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಸ್ಪಷ್ಟವಿಲ್ಲ. ಒಂದು ವೇಳೆ ಹೈಕಮಾಂಡ್ ಪುನಾರಚನೆಗೆ ಸೂಚಿಸಿದರೆ, ಸಿದ್ದರಾಮಯ್ಯ ಮೇಜರ್ ಸರ್ಜರಿಗೇ ಕೈ ಹಾಕಬೇಕಾಗುತ್ತದೆ. ಆನಂತರ ಉಂಟಾಗಬಹುದಾದ ಅಸಮಾಧಾನ, ಅತೃಪ್ತಿಯ ಬೇಗೆ ಸಹಿಸಲು ಸಿದ್ದರಾಮಯ್ಯ ಸಜ್ಜಾಗಬೇಕಾಗುತ್ತದೆ. ಇದೇ ಬಿಸಿಯಲ್ಲಿ ಮುಂಬರುವ ಚುನಾವಣೆ ಗಳ ಸವಾಲುಗಳನ್ನೂ ಸಿದ್ದರಾಮಯ್ಯ ಸ್ವೀಕರಿಸುವುದು ಅನಿವಾರ್ಯವಾಗುತ್ತದೆ ಎಂದು ಪಕ್ಷದ ಹಿರಿಯ ನಾಯಕರು ಹೇಳುತ್ತಾರೆ. ಕಾಂಗ್ರೆಸ್ ಆಡಳಿತ ಇರುವ ಅರುಣಾಚಲ ಪ್ರದೇಶ್ ಅಸ್ಸಾಂ ಸೇರಿದಂತೆ ಎಲ್ಲಿಯೂ ಉಪಮುಖ್ಯಮಂತ್ರಿ ಹುದ್ದೆ ಇಲ್ಲ. ಅಲ್ಲದೆ ಸೋನಿಯಾ ಗಾಂಧಿ ಅವಧಿಯಲ್ಲಿ ಎಲ್ಲಿಯೂ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿರುವ ಉದಾಹರಣೆಗಳಿಲ್ಲ. ಆದ್ದರಿಂದ ಹೈಕಮಾಂಡ್ ಉಪ ಮುಖ್ಯಮಂತ್ರಿ ಹುದ್ದೆಗೆ ಒಪ್ಪಿಕೊಳ್ಳುವ ಸಾಧ್ಯತೆ ಕ್ಷೀಣ ಎಂದು ಸಿದ್ದರಾಮಯ್ಯ ಬೆಂಬಲಿಗರು ಹೇಳುತ್ತಿದ್ದಾರೆ. ಬುಧವಾರದವರೆಗೂ ದಿಲ್ಲಿಯಲ್ಲೇ ಹಲವು ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾತ್ರಿ 11ಕ್ಕೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


