ಬೆಳ್ಳಿ ರಥ ಕಳವು ಆರೋಪ ಸೋಸಲೆ ಶ್ರೀ ಬಂಧನ
ಬೆಳ್ಳಿ ರಥದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಶನಿವಾರ ತಿ. ನರಸೀಪುರ ಸೋಸಲೆ ವ್ಯಾಸರಾಜ ಮಠದ ಸ್ವಾಮೀಜಿ ...

ಮೈಸೂರು: ಬೆಳ್ಳಿ ರಥದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಶನಿವಾರ ತಿ. ನರಸೀಪುರ ಸೋಸಲೆ ವ್ಯಾಸರಾಜ ಮಠದ ಸ್ವಾಮೀಜಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ವಿದ್ಯಾ ಮನೋಹರ ತೀರ್ಥ ಸ್ವಾಮೀಜಿ (31), ಅವರ ಪೂರ್ವಾಶ್ರಮದ ತಾಯಿ ಶ್ರೀಮತಿ (56) ಮತ್ತು ಶಿಷ್ಯ ಪಮೋದ್ (25) ಬಂಧಿತರು. ಕೃಷ್ಣ ಮೂರ್ತಿಪುರಂನಲ್ಲಿರುವ ಶಾಖಾ ಮಠದ ಆವರಣದಲ್ಲಿರುವ ಮನೆಯಲ್ಲಿ ಸ್ವಾಮೀಜಿ ಮತ್ತು ಅವರ ತಾಯಿ ಹಾಗೂ ಶಿಷ್ಯನನ್ನು ಪೊಲೀಸರು ಶುಕ್ರವಾರ ತಡ ರಾತ್ರಿ ಬಂಧಿಸಿದ್ದು, ಎರಡು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಅಭಿನವ್ ಖರೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ತಂದೆ ಉಧ್ವಾಚಾರ್ ಅವರು ನಿರೀಕ್ಷಣಾ ಜಾಮೀನು ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಲಿಲ್ಲ.ವಿಚಾರಣೆ ನಡೆಸಿ, ಅಗತ್ಯ ಮಾಹಿತಿ ಪಡೆದರು.
2013ರ ಜೂನ್‌ನಲ್ಲಿ ಮಠದ ಬೆಳ್ಳಿ ರಥ ಕಳವಾಗಿದೆ ಎಂದು ಮಠದ ಭಕ್ತ ನರೇಂದ್ರ ತಿ.ನರಸೀಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಗಂಭೀರ ಮತ್ತು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಎಸ್ಪಿ ನಂಜನಗೂಡು ಪಟ್ಟಣ ಠಾಣೆ ಪೊಲೀಸರಿಂದ ತನಿಖೆ ನಡೆಸುವಂತೆ ಆದೇಶ ನೀಡಿದ್ದರು. ನಂಜನಗೂಡು ವಿಭಾಗದ ಹೆಚ್ಚುವರಿ ಎಸ್ಪಿ ದಿವ್ಯಾ ಸಾರಾ ಥಾಮಸ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿತ್ತು. ಪ್ರಕರಣ ದಾಖಲಾದ ಸಂದರ್ಭದಲ್ಲೇ ಪ್ರಕರಣದ ಪ್ರಮುಖ ಆರೋಪಿ ಉಧ್ವಾಚಾರ್, ನಿರೀಕ್ಷಣಾ ಜಾಮೀನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಬಂಧನವಾಗಿದೆ.
ಮಠದ ಅವ್ಯವಹಾರದ ಬಗ್ಗೆ ಭಕ್ತಾದಿಗಳು ನೀಡಿದ ದೂರನ್ನು ಆಧರಿಸಿ, ವರದಿ ನೀಡುವಂತೆ ಮುಜರಾಯಿ ಇಲಾಖೆಗೆ ಸರಕಾರ ಆದೇಶ ನೀಡಿತ್ತು. ಅಕ್ರಮ ಸಾಬೀತಾಗಿರುವ ಬಗ್ಗೆ ಮುಜರಾಯಿ ಇಲಾಖೆ ವರದಿ ನೀಡಿದ ಹಿನ್ನೆಲೆಯಲ್ಲಿ ಸರಕಾರ ಮಠವನ್ನು ವಶಕ್ಕೆ ಪಡೆದು, ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು.
ರಥದ ಇತಿಹಾಸ 1935ರಲ್ಲಿ ಮಠದ ಶ್ರೀಗಳಾದ ವಿದ್ಯಾವಾರಿಜ ತೀರ್ಥರು, ದೇವರ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲು ಮರದ ರಥ ಮಾಡಿಸಿದ್ದರು. ಬಳಿಕ ಬಂದ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು 1960ರಲ್ಲಿ ರಥಕ್ಕೆ ಬೆಳ್ಳಿಯ ಹೊದಿಕೆ ಮಾಡಿಸಿದ್ದರು. ಆರು ಅಡಿ ಎತ್ತರದ ರಥಕ್ಕೆ 25 ರಿಂದ 30 ಕೆಜಿ ಬೆಳ್ಳಿ , ಮತ್ತು 10 ಕೆಜಿ ತಾಮ್ರ ಬಳಸಿ, ರಥವನ್ನು ನಿರ್ಮಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


