ಜಿಲ್ಲಾ ಸುದ್ದಿ

ಸಿಕ್ಕ ಚಿನ್ನದ ಸರ ಬೇಕಾದರೆ ಸಾಕ್ಷಿ ಹೇಳಿ

ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳದ ಮಹಿಳೆಯರು, ಖುಲಾಸೆಯಾಗುತ್ತಿವೆ ಪ್ರಕರಣಗಳು, ಪ್ರಯೋಜನ ಪಡೆಯುತ್ತಿರುವ ಸರಗಳ್ಳರು...

ಸಿಕ್ಕ ಚಿನ್ನದ ಸರ ಬೇಕಾದರೆ ಸಾಕ್ಷಿ ಹೇಳಿ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳದ ಮಹಿಳೆಯರು, ಖುಲಾಸೆಯಾಗುತ್ತಿವೆ ಪ್ರಕರಣಗಳು, ಪ್ರಯೋಜನ ಪಡೆಯುತ್ತಿರುವ ಸರಗಳ್ಳರು! ಹೌದು, ಪ್ರತಿ ವರ್ಷ ನಗರದಲ್ಲಿ ವರದಿಯಾಗುವ ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಬಂಧಿತ ಆರೋಪಿಗಳು ಕಂಬಿ ಹಿಂದೆ ಹೋಗುತ್ತಾರೆ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಅನ್ನೂ ಸಲ್ಲಿಸುತ್ತಾರೆ. ಅಷ್ಟಕ್ಕೆ ಪೊಲೀಸರ ತನಿಖೆಯ ಭಾಗ ಮುಗಿಯುತ್ತದೆ. ಆದರೆ, ಅದಕ್ಕಿಂತ ಮಹತ್ವದ ಕೆಲಸ ಇರುವುದು ನ್ಯಾಯಾಲಯದಲ್ಲಿ. ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡುವ ಮಹತ್ವದ ಜವಾಬ್ದಾರಿ ಸರ ಕಳೆದುಕೊಂಡ ಮಹಿಳೆಯರದು.
ಪೊಲೀಸರ ಶ್ರಮದಿಂದ ಕಳೆದುಕೊಂಡ ಸರ ವಾಪಸ್ ಪಡೆಯುವ ಮಹಿಳೆಯರು ಮತ್ತೆ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಕಡೆ ಮುಖವನ್ನೇ ಹಾಕುವುದಿಲ್ಲ. ಕಳೆದು ಹೋದ ಚಿನ್ನ ಕೈಗೆ ಸಿಗುತ್ತಿದ್ದಂತೆ ಪ್ರಕರಣದಲ್ಲಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಇದು ಸರಗಳ್ಳರಿಗೆ ಸುಲಭವಾಗಿ ಜಾಮೀನು ಸಿಗಲು ಕಾರಣವಾಗಿದೆ. ಜತೆಗೆ ಅವರಿಗೆ ಶಿಕ್ಷೆಯಾಗದಿರಲು ನೆರವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಬೇಸರ ವ್ಯಕ್ತಪಡಿಸಿದರು. 
ಸರಗಳ್ಳತನ ಪ್ರಕರಣಗಳಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಸಿಗುವುದಿಲ್ಲ. ಇದಕ್ಕೆ ಶ್ರಮವಹಿಸಬೇಕಾಗುತ್ತದೆ. ಒಂದು ತಂಡ ಅಥವಾ ಆರೋಪಿ ಬಂಧನಕ್ಕೆ ತಿಂಗಳುಗಟ್ಟಲೇ ಕಾಯಬೇಕು. ಕಾಯ್ದು ಬಂಧಿಸಿದರೂ ಸಂಪೂರ್ಣ ಚಿನ್ನಾಭರಣ ಜಪ್ತಿ ಸವಾಲೇ ಸರಿ. ಇಷ್ಟೆಲ್ಲಾ ಶ್ರಮದ ಬಳಿಕ ಶಿಕ್ಷೆಯಾಗುವಂತೆ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಸಲಾಗುತ್ತದೆ. ಆದರೆ, ಸರ ಮರಳಿ ಪಡೆದವರು ಕೋರ್ಟ್‍ಗೆ ಆಗಮಿಸಿ ಸಾಕ್ಷಿ ಹೇಳುವುದು ಅತ್ಯಂತ ಪ್ರಮುಖ. ಶೇ.90ರಷ್ಟು ಪ್ರಕರಣಗಳಲ್ಲಿ ಮಹಿಳೆಯರು ನ್ಯಾಯಾಲಯಕ್ಕೆ ಬರುತ್ತಿಲ್ಲ. ಇದರಿಂದ ಆರೋಪಿಗಳು ಜಾಮೀನು ಪಡೆದು ಹೊರ ಬಂದು ಮತ್ತೆ ಕೃತ್ಯಗಳನ್ನು ಮುಂದುವರಿಸುತ್ತಿದ್ದಾರೆ ಎಂದಿದ್ದಾರೆ. 
ಆಕ್ಷೇಪಣೆ ಸಲ್ಲಿಕೆ: ಸರಗಳ್ಳತನ ನಿಯಂತ್ರಿಸ ಬೇಕೆಂದರೆ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಇದಕ್ಕೆ ಸಾಕ್ಷಿಗಳೇ ಮುಖ್ಯ. ಸರ ಕಳೆದುಕೊಂಡ ಮಹಿಳೆಯರು ಪ್ರಕರಣ ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಸಾಕ್ಷಿ ಹೇಳಲು ಅನುಕೂಲವಾಗಲೆಂದು ಚಿನ್ನಾಭರಣವನ್ನು ಆರಂಭದಲ್ಲೇ ನೀಡುವ ಪದ್ಧತಿಗೆ ಕಡಿವಾಣ ಹಾಕುತ್ತೇವೆ. 
ವಿಚಾರಣೆ ಹಂತದ ಪ್ರಮುಖ ಘಟ್ಟದಲ್ಲಿ ಆರೋಪಿಗಳ ವಿರುದ್ಧ ಸಾಕ್ಷಿ ನುಡಿಯಬೇಕು. ಅಲ್ಲಿಯವರೆಗೂ ನ್ಯಾಯಾಲಯದ ವಶದಲ್ಲಿರುವ ಆಭರಣ ಮಾಲೀಕರು ಬಿಡಿಸಿಕೊಳ್ಳಲಾಗ ದಂತೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸುತ್ತೇವೆ. ಇದು ಕಠಿಣ ನಿರ್ಧಾರ ಎನಿಸಿದರೂ, ಸರಗಳವು ಸೇರಿ ಅಪರಾಧ ನಿಯಂತ್ರಣ, ಸಮಾಜದ ಹಿತದೃಷ್ಟಿಯಿಂದ ಶಿಕ್ಷೆ ಆಗಬೇಕಿರುವುದರಿಂದ ಇದು ಅನಿವಾರ್ಯ ಎಂದು ಆಯುಕ್ತ ಮೇಘರಿಕ್ ಹೇಳಿದರು. 
ಎಎಸ್ಸೈ ನಿಯೋಜನೆ: ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸಾಕ್ಷಿಗಳು ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ, ಆರೋಪಿಗಳು ಕೂಡ ಹಾಜರಾಗುತ್ತಾರಾ ಎನ್ನುವ ಬಗ್ಗೆ ನಿಗಾ ಇರಿಸಲು ಪ್ರತಿ ಒಂದು ಡಿಸಿಪಿ ಉಪ ವಿಭಾಗಕ್ಕೆ ಸರಗಳ್ಳತನ ಬಗ್ಗೆ ಸೂಕ್ತ ಮಾಹಿತಿ ಇರುವ ಎಎಸ್ಸೈ ಒಬ್ಬರನ್ನು ನಿಯೋಜಿಸಲಾಗುತ್ತದೆ. ಅವರು ತಮ್ಮ ವ್ಯಾಪ್ತಿಯ ಪ್ರಕರಣಗಳು ನ್ಯಾಯಾಲಯ ದಲ್ಲಿ ಯಾವ ಹಂತದಲ್ಲಿವೆ ಎನ್ನುವುದನ್ನು ಕಾಲ ಕಾಲಕ್ಕೆ ಪರಿಶೀಲಿಸುತ್ತಾರೆ. ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.