ವರದಿ ಜಾರಿಗಾಗಿ ಪ್ರತಿಭಟನೆ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಮಾದಿಗ ದಂಡೋರ ಸಂಘದ ಕಾರ್ಯಕರ್ತರು ಪ್ರತಿಭಟನೆ...

ಬೆಂಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಮಾದಿಗ ದಂಡೋರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಸಮಾವೇಶಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪರಿಶಿಷ್ಟ ಜಾತಿಯ ಮೀಸಲಾತಿ ಹಂಚಿಕೆಯಲ್ಲಿ ಬಹುಸಂಖ್ಯಾತ ಮಾದಿಗ ಮತ್ತು ಇತರ ಜಾತಿಗಳಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಸದಾಶಿವ ಆಯೋಗ ನೆರವಾಗುತ್ತದೆ. ಆದ್ದರಿಂದ ವರದಿಯನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾಕರರು ಆಗ್ರಹಿಸಿದರು.ಸಂಘದ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಮಾತನಾಡಿ, ಮಾದಿಗ ಸೇರಿದಂತೆ ಕೆಳವರ್ಗದ ಎಲ್ಲಾ ಜನರಿಗೆ ಅನ್ಯಾಯವಾಗುತ್ತಿದೆ. ಜನಸಂಖ್ಯೆ ಆಧಾರಿತ ಮೀಸಲಾತಿ ನೀಡಬೇಕು. ತಮಗೆ ಮೀಸಲಾತಿ ನೀಡುವಂತೆ ಹಾಗೂ ಆಗಿರುವ ಅನ್ಯಾಯ ಸರಿಪಡಿಸುವಂತೆ 1997ರಿಂದಲೂ ತಾವು ಪ್ರತಿಭಟಿಸುತ್ತಿದ್ದೇವೆ. ಆದರೆ ಇದುವರೆಗೂ ಸರ್ಕಾರ ತಮ್ಮ ಮನವಿಯನ್ನು ಗಮನಕ್ಕೆತೆಗೆದುಕೊಂಡಿಲ್ಲ ಎಂದು ದೂರಿದರು. ಸರ್ಕಾರ 2004ರಲ್ಲಿ ಸದಾಶಿವ ಆಯೋಗವನ್ನು ರಚಿಸಿತ್ತು. ಆಯೋಗ 2012ರಲ್ಲಿ ವರದಿ ನೀಡಿತ್ತು. ಯಾವ ವರ್ಗದವರಿಗೆ ಎಷ್ಟು ಮೀಸಲಾತಿ ನೀಡಬೇಕು ಎಂಬುದನ್ನು ಆಯೋಗ ಸ್ಪಷ್ಟವಾಗಿ ತಿಳಿಸಿತ್ತು. ಆದರೆ, ಇದುವರೆಗೂ ಸರ್ಕಾರ ವರದಿಯನ್ನು ಅನುಷ್ಟಾನ ಮಾಡಿಲ್ಲ ಎಂದು ಶಂಕರಪ್ಪ ಹೇಳಿದರು.ಆಯೋಗದ ವರದಿ ಹಾಗೂ ಅದರ ಅಂಕಿಅಂಶಗಳ ಆಧಾರದ ಮೇಲೆ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಸರ್ಕಾರ ಇನ್ನಾದರೂ ಮೀನಾಮೇಷ ಎಣಿಸುವುದನ್ನು ಬಿಟ್ಟು ಕೂಡಲೇ ವರದಿ ಜಾರಿಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘದ ಕಾರ್ಯಕರ್ತರಾದ ನಾರಾಯಣಸ್ವಾಮಿ, ಬಿ.ರಾಮಪ್ಪ, ಗೌರಿಶಂಕರ್, ರಾಜಶೇಖರ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


